ಕನ್ನಡಪ್ರಭ ವಾರ್ತೆ, ತಿಪಟೂರುಬಕ್ರೀದ್ ಹಬ್ಬ ಸಮೀಪಿಸುತ್ತಿದ್ದು ಈ ಸಂದರ್ಭದಲ್ಲಿ ಯಾವುದೇ ಗೋಹತ್ಯೆ ಅನಧಿಕೃತ ಗೋ ಸಾಗಾಣಿಕೆ ಮಾಡಬಾರದು ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಕಾರ್ಯದರ್ಶಿ ಬಾಳೇಕಾಯಿ ನಟರಾಜು ತಿಳಿಸಿದರು.ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಗೋಹತ್ಯೆಯನ್ನು ನಿಷೇಧಿಸಿದ್ದು ಹಬ್ಬದ ಹೆಸರಿನಲ್ಲಿ ಅಕ್ರಮವಾಗಿ ಗೋಸಾಗಾಣಿಕೆ ಮತ್ತು ಕಸಾಯಿಖಾನೆಗಳಲ್ಲಿ ಗೋವಧೆ ಮಾಡುವುದನ್ನು ಪೊಲೀಸರು ತಡೆಯಬೇಕು ಎಂದು ಆಗ್ರಹಿಸಿದರು. ಈ ಒಂದು ವಾರ ಅತ್ಯಂತ ಮಹತ್ವದ್ದಾಗಿದ್ದು ಗೋರಕ್ಷಣೆಗೆ ಪೊಲೀಸರು ಅತ್ಯಾಧುನಿಕ ತಾಂತ್ರಿಕತೆ ಬಳಸಬೇಕು. ಟೋಲ್ ಗಳಲ್ಲಿ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಬೇಕು. ಎಲೆಕ್ಟ್ರಾನಿಕ್ ಸ್ಕ್ಯಾನರ್ ಬಳಸಿ ವಾಹನಗಳಲ್ಲಿ ಗೋಸಾಗಾಣಿಕೆ ಮಾಡಲಾಗುತ್ತಿದೆಯೇ ಪರಿಶಿಲಿಸಬೇಕು. ಗೋವಧೆ ಬಗ್ಗೆ ಮಾಹಿತಿ ಪಡೆಯಲು ಡ್ರೋನ್ ಟೆಕ್ನಾಲಜಿ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.ಹಿಂದೂಗಳ ಹಬ್ಬಗಳಲ್ಲಿ ಅದರಲ್ಲೂ ಯುಗಾದಿಯ ಹಬ್ಬದಲ್ಲಿ ಪೊಲೀಸರು ಜಾಗೃತರಾಗಿ ಅನಧಿಕೃತವಾಗಿ ಇಸ್ಪೀಟ್, ಜೂಜಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿಯೂ ಹದ್ದಿನ ಕಣ್ಣು ಇಟ್ಟು ಇವುಗಳನ್ನು ತಡೆಯುತ್ತಾರೆ. ಅದೇ ರೀತಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ತಾಲೂಕಿನಲ್ಲಿ ಗೋಹತ್ಯೆ ನಡೆಯುವುದನ್ನು ತಡೆಯಬೇಕು. ಈ ಕಾರ್ಯಕ್ಕೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.ಮುಖಂಡ ಮುರಳೀಧರ್ ಮಲ್ಲೇನಹಳ್ಳಿ ಮಾತನಾಡಿ ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ ಹಾಕಬೇಕು. ಲೈಸೆನ್ಸ್ ಪಡೆದಿರುವ ಕಸಾಯಿಖಾನೆಗಳ ಪಟ್ಟಿಯನ್ನು ಪ್ರಕಟಿಸಿ ಅಲ್ಲಿ ಪೊಲೀಸರನ್ನು ನಿಯೋಜಿಸಬೇಕು. ನಗರಸಭೆ ಆಯುಕ್ತರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ವಿಹಿಂಪ ಹಾಗೂ ಭಜರಂಗದರ ಸದಸ್ಯರಾದ ಗೌತಮ್, ಕೃಷ್ಣ, ಪ್ರಜ್ವಲ್, ಮಧು ಇನ್ನಿತರರು ಉಪಸ್ಥಿತರಿದ್ದರು.