“ಮಾತೃದೇವೋ ಭವ, ಪಿತೃದೇವೋ ಭವ” ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗೋವುಗಳನ್ನು ಭಕ್ತಿ ಪೂರ್ವಕವಾಗಿ ಆರಾಧಿಸುವ ಪರಂಪರೆ ನಮ್ಮದಾಗಿದೆ ಎಂದು ಹೇಳಿದರು. ಮಗುವಿಗೆ ತಾಯಿ ಕೆಲವು ವರ್ಷಗಳವರೆಗೆ ಹಾಲು ನೀಡಿದರೆ, ಗೋಮಾತೆ ಜೀವನಪರ್ಯಂತ ಹಾಲು, ಮೊಸರು, ಬೆಣ್ಣೆ, ತುಪ್ಪ ಸೇರಿದಂತೆ ಅನೇಕ ರೀತಿಯಲ್ಲಿ ಮಾನವಕುಲಕ್ಕೆ ಸೇವೆ ಸಲ್ಲಿಸುತ್ತಾಳೆ. ಕೃಷಿ ಕ್ಷೇತ್ರದಲ್ಲಿಯೂ ಗೋಮಾತೆಯ ಪಾತ್ರ ಅಪಾರವಾಗಿದ್ದು, ನಾವು ತಿನ್ನುವ ದವಸ-ಧಾನ್ಯಗಳ ಉತ್ಪಾದನೆಯಲ್ಲಿ ಅವಳ ಕೊಡುಗೆ ಮಹತ್ತರವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ಗೋಮಾತೆಯ ಮಹತ್ವವನ್ನು ಅರಿತು, ಅವುಗಳನ್ನು ಕಣ್ಣಿಗೆ ಕಾಣುವ ದೇವರಂತೆ ಗೌರವಿಸಿ ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರ ಸಮೀಪದ ಮೈಸೂರು ರಸ್ತೆಯಲ್ಲಿರುವ ಕಸ್ತೂರ ಬಾ ಗಾಂಧಿ ಗೋಶಾಲೆಗೆ ಉಡುಪಿಯ ಪೇಜಾವರ ಮಠದ ಜಗದ್ಗುರು ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ ಗೋವುಗಳಿಗೆ ಮೇವು ನೀಡಿ ಆಶೀರ್ವಾದಿಸಿದರು.

ಈ ವೇಳೆ ಮಾತನಾಡಿದ ಶ್ರೀಗಳು, ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗೋಮಾತೆಗೆ ಅತ್ಯಂತ ಪವಿತ್ರ ಸ್ಥಾನವಿದ್ದು “ಮಾತೃದೇವೋ ಭವ, ಪಿತೃದೇವೋ ಭವ” ಎಂಬ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗೋವುಗಳನ್ನು ಭಕ್ತಿ ಪೂರ್ವಕವಾಗಿ ಆರಾಧಿಸುವ ಪರಂಪರೆ ನಮ್ಮದಾಗಿದೆ ಎಂದು ಹೇಳಿದರು. ಮಗುವಿಗೆ ತಾಯಿ ಕೆಲವು ವರ್ಷಗಳವರೆಗೆ ಹಾಲು ನೀಡಿದರೆ, ಗೋಮಾತೆ ಜೀವನಪರ್ಯಂತ ಹಾಲು, ಮೊಸರು, ಬೆಣ್ಣೆ, ತುಪ್ಪ ಸೇರಿದಂತೆ ಅನೇಕ ರೀತಿಯಲ್ಲಿ ಮಾನವಕುಲಕ್ಕೆ ಸೇವೆ ಸಲ್ಲಿಸುತ್ತಾಳೆ. ಕೃಷಿ ಕ್ಷೇತ್ರದಲ್ಲಿಯೂ ಗೋಮಾತೆಯ ಪಾತ್ರ ಅಪಾರವಾಗಿದ್ದು, ನಾವು ತಿನ್ನುವ ದವಸ-ಧಾನ್ಯಗಳ ಉತ್ಪಾದನೆಯಲ್ಲಿ ಅವಳ ಕೊಡುಗೆ ಮಹತ್ತರವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ಗೋಮಾತೆಯ ಮಹತ್ವವನ್ನು ಅರಿತು, ಅವುಗಳನ್ನು ಕಣ್ಣಿಗೆ ಕಾಣುವ ದೇವರಂತೆ ಗೌರವಿಸಿ ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಹಿಂದಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲಿ ಗೋವುಗಳನ್ನು ಸಾಕುವ ಪದ್ಧತಿ ಇದ್ದರೂ ಇಂದಿನ ದಿನಗಳಲ್ಲಿ ಅದು ಕಡಿಮೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ಹಸುವನ್ನು ದತ್ತು ಪಡೆದು ಗೋಶಾಲೆಗಳಿಗೆ ಸಹಕಾರ ನೀಡಿದರೆ ಸಾವಿರಾರು ಗೋವುಗಳ ಜೀವ ರಕ್ಷಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾರತೀಯ ಗೋ ಪರಿವಾರ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಪಾರಸ್ ಮಲ್ ಜೈನ್ ಮಾತನಾಡಿ, ಗೋಮಾತೆ ಸಂರಕ್ಷಣೆ ದೇಶದ ಸ್ವಾಭಿಮಾನದ ಸಂಕೇತವಾಗಿದ್ದು ಮಠ-ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಘಟನೆಗಳು ಕೈಜೋಡಿಸಿ ದೇಶವ್ಯಾಪಿ ಆಂದೋಲನ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ದಿನೇಶ್ ಪೈ ಕಟೀಲ್, ಟ್ರಸ್ಟ್ ಅಧ್ಯಕ್ಷ ಜಯರಾಮ್, ಮುಖಂಡರಾದ ಪಾರಸ್ ಜೈನ್, ರಾಜಶೇಖರ್, ಪುಕ್ ರಾಜ್, ಗೋಪಾಲ್ ಪಟೇಲ್, ಶಿವಕುಮಾರ್‌, ಪವನ್ ಕುಮಾರ್‌, ನಾರಾಯಣ್ ಹಾಗೂ ಬ್ರಾಹ್ಮಣ ಸಮಾಜದ ಮುಖಂಡರು ಉಪಸ್ಥಿತರಿದ್ದರು.