ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೀದರ್‌ನ ಸಾಯಿ ಸ್ಪೂರ್ತಿ ಪರೀಕ್ಷಾ ಕೆಂದ್ರದಲ್ಲಿ ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ನಿರಾಕರಿಸಿದ ಘಟನೆಯನ್ನು ತಾಲೂಕು ವಿಶ್ವಕರ್ಮ ಸಮುದಾಯ ಮುಖಂಡರು ಖಂಡಿಸಿದರು.ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡರು, ಬೀದರ್ ಸೇರಿದಂತೆ ಹಲವು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ ಪ್ರಕರಣ ಖಂಡನೀಯ. ಜನಿವಾರವನ್ನು ಕೇವಲ ಬ್ರಾಹ್ಮಣರು ಮಾತ್ರ ಧರಿಸುವುದಿಲ್ಲ. ವಿಶ್ವಕರ್ಮರು, ವೈಷ್ಣವರು, ಶೆಟ್ಟರು ಸೇರಿದಂತೆ ಹಿಂದೂ ಸಮಾಜದ ಸುಮಾರು 15 ರಿಂದ 20 ಸಮುದಾಯದ ಜನ ಧರಿಸುತ್ತಾರೆ ಎಂದರು.
ಪವಿತ್ರ ಯಜ್ಞೋಪವೀತ ಪಡೆದು ಗಾಯಿತ್ರಿ ಮಂತ್ರ ಪಠಿಸಿ ನಾವೆಲ್ಲರೂ ಜನಿವಾರವನ್ನು ಧರಿಸುತ್ತೇವೆ. ಜನಿವಾರ ನಮ್ಮ ಪಾಲಿಗೆ ಕೇವಲ ಒಂದು ದಾರವಲ್ಲ. ವಿವಿಧ ಪರೀಕ್ಷಾ ಕೆಂದ್ರಗಳಲ್ಲಿ ಜನಿವಾರದ ಮೇಲೆ ಪ್ರಹಾರ ನಡೆಸಿರುವುದರ ಹಿಂದೆ ಕಾಣದ ಕೈಗಳು ವ್ಯವಸ್ಥಿತ ದಾಳಿ ನಡೆಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಸ್ವಾಗತಾರ್ಹವಾದರೂ ನಮಗೆ ಪೊಲೀಸ್ ತನಿಖೆ ಮೇಲೆ ನಂಬಿಕೆ ಇಲ್ಲ. ಜನಿವಾರದ ವಿರುದ್ಧ ಷ್ಯಡಂತ್ರ ನಡೆಸಿದ ಕಣದ ಕೈಗಳನ್ನು ಪತ್ತೆ ಹಚ್ಚ ಬೇಕಾದರೆ ಸರ್ಕಾರ ಈ ಪ್ರಕರಣವನ್ನು ನ್ಯಾಯಂಗ ತನಿಖೆಗೆ ಒಪ್ಪಿಸಿ ಅಪರಾಧಿಗಳನ್ನು ಬಯಲಿಗೆ ತರುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಮೇಲಾಧಿಕಾರಿಗಳ ಆದೇಶ ಪಾಲಿಸಿದ ಅಮಾಯಕ ಸಿಬ್ಬಂದಿಯನ್ನು ಬಲಿಪಶು ಮಾಡುವ ಬದಲು ಪ್ರಕರಣದ ನೈಜ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಬ್ರಾಹ್ಮಣ ಸಮುದಾಯ ಸೇರಿದಂತೆ ಜನಿವಾರ ಧರಿಸುವ ಸಮಸ್ತ ಹಿಂದೂ ಸಮುದಾಯಗಳನ್ನು ಸಂಘಟಿಸಿ ಬೀದಿ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.
ಜೀ ಟಿವಿ ವಾಹಿನಿಯ ಲಕ್ಷ್ಮೀನಿವಾಸ ಧಾರವಾಹಿಯಲ್ಲಿ ವಿಶ್ವಕರ್ಮ ಜನಾಂಗವನ್ನು ಅಪಮಾನಿಸಲಾಗಿದೆ. ಧಾರವಾಹಿ ಚಿತ್ರ ತಂಡ ಮಾಧ್ಯಮಗಳ ಮೂಲಕ ಬಹಿರಂಗ ಕ್ಷಮೆ ಕೇಳುವಂತೆ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ವಿಶ್ವಕರ್ಮ ಕುಶಲ ಕೈಗಾರಿಕಾ ಸಂಘದ ಅಧ್ಯಕ್ಷ ಕುಮಾರಸ್ವಾಮಿ. ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಸುರೇಶಾಚಾರಿ, ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ರೂಪೇಶಾಚಾರ್, ಮಾಜಿ ಅಧ್ಯಕ್ಷ ರವಿ ಕುಮಾರ್, ಮುಖಂಡರಾದ ರೇವಣ್ಣ, ಸಂಗಾಪುರ ಸ್ವಾಮಿ, ಮಾಳಗೂರು ಮೂರ್ತಿ, ವಿಶ್ವನಾಥ್, ಬಳ್ಳೇಕೆರೆ ಗ್ರಾಪಂ ಅಧ್ಯಕ್ಷ ಪರಮೇಶಾಚಾರಿ ಸೇರಿದಂತೆ ಹಲವರಿದ್ದರು.