ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿಶ್ವಕರ್ಮ ಸಮುದಾಯದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆ.6 ರಿಂದ 9 ರವರೆಗೆ ನಾಲ್ಕು ದಿನಗಳ ಕಾಲ ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಎಂ.ಶಂಕರಮೂರ್ತಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದಲ್ಲಿ ಸಂಘಟನೆಯ ಕೊರತೆಯಿರುವುದರಿಂದ ಕ್ರೀಡೆಯ ಮೂಲಕವಾದರೂ ವಿಶ್ವಕರ್ಮ ಸಮಾಜದವರು ಒಂದೆಡೆ ಸೇರಿ ಸಂಘಟಿತರಾಗಲಿ ಎನ್ನುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದರು.

2004, 2012ರಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಮೂರನೇ ರಾಜ್ಯಮಟ್ಟದ ಪಂದ್ಯಾವಳಿಯನ್ನು ವಿಜೃಂಭಣೆಯಿಂದ ನಡೆಸಲಾಗುವುದು. ಆ.8ರಂದು ಸಂಜೆ ನಾಲ್ಕು ಗಂಟೆಗೆ ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗದಿಂದ ತಂಡಗಳ ಮೆರವಣಿಗೆ ಹೊರಡಲಿದೆ ಎಂದರು.

ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಕಾರ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ವಿಶ್ವಕರ್ಮ ಸಮಾಜದವರನ್ನು ಸಂಘಟಿಸಲು ಕ್ರೀಡೆ ಒಂದು ಸಾಧನ. ಕಾಯಕ ಸಮಾಜ ನಮ್ಮದು. ಎಲ್ಲಾ ರಂಗಗಳಲ್ಲಿಯೂ ಯುವಕರ ಪಾಲ್ಗೊಳ್ಳುವಿಕೆ ಕಡಿಮೆಯಿದೆ. ಆಧುನಿಕ ಜೀವನ ಶೈಲಿಯಿಂದ ಪ್ರತಿಯೊಬ್ಬರು ಒತ್ತಡದಲ್ಲಿದ್ದಾರೆ. ಒಟ್ಟು ಹದಿನಾರು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ ಎಂದರು.


ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿಯ ಉಪಾಧ್ಯಕ್ಷ ಸತ್ಯನಾರಾಯಣಚಾರ್ ಮಾತನಾಡಿ, ಮಧ್ಯ ಕರ್ನಾಟಕದಲ್ಲಿರುವ ವಿಶ್ವಕರ್ಮ ಸಮಾಜದವರನ್ನು ಒಂದೆಡೆ ಸೇರಿಸಿ ಸಂಘಟನೆಯಾಗುವಂತೆ ಜಾಗೃತಿ ಮೂಡಿಸುವುದಕ್ಕಾಗಿ ನಾಲ್ಕು ದಿನಗಳ ಕಾಲ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ನಮ್ಮಲ್ಲಿ ಸಂಘಟನೆ ಕೊರತೆಯಿದೆ. ಸ್ಪರ್ಧಾತ್ಮಕ ಯುಗವಾಗಿರುವುದರಿಂದ ನಾವುಗಳು ಕೂಡ ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಬೇಕಿದೆ. ವಿಶ್ವಕರ್ಮ ಕಲಾವಿದರು ಸಂಕಷ್ಟದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳು ನಮ್ಮನ್ನು ಕಡೆಗಣಿಸುತ್ತಿವೆ. ಹಾಗಾಗಿ ನಾವುಗಳು ಒಗ್ಗಟ್ಟಾಬೇಕಿದೆ ಎಂದರು. ಈ ವೇಳೆ ಪ್ರವೀಣ್ ಎನ್, ಶ್ರೀನಿವಾಸ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಎ.ಶಂಕರಾಚಾರ್, ಎಸ್.ಶ್ರೀಧರಾಚಾರಿ, ಶ್ಯಾಂಪ್ರಸಾದ್, ಪ್ರದೀಪ್‍ಕುಮಾರ್ ಎಸ್, ಸಂಜಯ್ ಡಿ ಇದ್ದರು.