ಸಾರಾಂಶ
ಬಳ್ಳಾರಿ: ನಾಡು-ನುಡಿ, ಸಂಸ್ಕಾರ-ಸಂಸ್ಕೃತಿಯನ್ನು ಅನುಸರಿಸುವ ವಿಶ್ವಕರ್ಮ ಒಂದು ಸಮುದಾಯವಲ್ಲ. ಅದು ಸಾಂಸ್ಕೃತಿಕ ನೆಲೆಗಟ್ಟು ಎಂದು ಮರಿಯಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಡಿಗೇರ ಮೌನೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ದೇವಾನು ದೇವತೆಗಳನ್ನು ಸೃಷ್ಟಿ ಮಾಡುವ ಭಕ್ತಿ-ಶಕ್ತಿ ವಿಶ್ವಕರ್ಮ ಸಮುದಾಯದವರಲ್ಲಿದ್ದು, ಯಾವುದೇ ಬೇಧ-ಭಾವವಿಲ್ಲದೆ ಹಾಗೂ ತಾವು ಮಾಡುವ ಕಾರ್ಯಗಳಿಗೆ ಅಪೇಕ್ಷೆ ಪಡದೆ ಪ್ರಾಮಾಣಿಕವಾಗಿ ಜೀವನ ನಡೆಸುತ್ತಾರೆ ಎಂದರು.
ವಿಶ್ವಕರ್ಮ ಎನ್ನುವ ಪದದಲ್ಲಿ ಸಕಾರಾತ್ಮಕ ತತ್ವವಿದೆ. ಪ್ರಕೃತಿ ಎನ್ನುವುದು ವಸ್ತು ಸಾಮಗ್ರಿಯಲ್ಲ, ಮನಸ್ಸು ಚೈತನ್ಯಗೊಳಿಸುವ ಅಂಶವಾಗಿದೆ ಎಂದು ಮನಗಾಣಬೇಕು ಎಂದು ತಿಳಿಸಿದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಜಗಜ್ಯೋತಿ ಬಸವಣ್ಣನವರ ಕಾಯಕವೇ ಕೈಲಾಸ ಎನ್ನುವ ನುಡಿಯಂತೆ ಅನುಸರಿಸುವ ಸಮುದಾಯ ಎಂದರೆ ಅದು ವಿಶ್ವಕರ್ಮ ಸಮುದಾಯ ಎಂದರು.
ವಿಶ್ವಕರ್ಮ ಸಮುದಾಯದವರು ಒಂದೇ ಕಾಯಕಕ್ಕೆ ಸೀಮಿತವಾಗದೆ ಬಡಗಿತನ, ಅಕ್ಕ ಸಾಲಿಗ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತಾವು ವಿಶಿಷ್ಟವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ಸ.ಸೋನಾರ, ಚಂದ್ರಶೇಖರ ಆಚಾರ್ ಕಪ್ಪಗಲ್, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಾಮ ನಿರ್ದೇಶಕ ಚಂದ್ರಶೇಖರ ಆಚಾರ್ ಶ್ರೀಧರಗಡ್ಡೆ ಮತ್ತಿತರರಿದ್ದರು.
ಕಂಪ್ಲಿ ತಾಲ್ಲೂಕಿನ ಚಿಕ್ಕಜಾಯಿಗನೂರು ಗ್ರಾಮದ ಪುರುಷೋತ್ತಮ.ಡಿ ಅವರ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.ಮೆರವಣಿಗೆ
ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಶ್ರೀ ವಿಶ್ವಕರ್ಮ ಭಾವಚಿತ್ರದ ಮೂಲಕ ಕಾಳಿಕಾ ಕಮಠೇಶ್ವರ ದೇವಸ್ಥಾನದಿಂದ ಆರಂಭಗೊಂಡು ವಿವಿಧ ಕಲಾ ತಂಡಗಳ ವಾದ್ಯಗಳೊಂದಿಗೆ ಬೆಂಗಳೂರು ರಸ್ತೆ, ಹಳೇ ಬ್ರೂಸ್‌ಪೇಟೆ ಪೊಲೀಸ್ ಸ್ಟೇಷನ್ ರಸ್ತೆ, ತೇರು ಬೀದಿ, ಎಚ್.ಆರ್. ಗವಿಯಪ್ಪ ವೃತ್ತದ ಮುಖಾಂತರ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದ ವರೆಗೆ ಸಾಗಿ ಬಂದು ಸಂಪನ್ನಗೊಂಡಿತು.ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ಸ.ಸೋನಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.