ಸಾರಾಂಶ
ಚಾಮರಾಜನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನ ಕಾರ್ಯಕ್ರಮವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಿಲ್ಪಕಲೆಗೆ ಜೀವತುಂಬಿದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರು ಇಂದಿಗೂ ಚಿರಸ್ಮರಣೀಯರಾಗಿದ್ದಾರೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರು ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಸುಂದರ ದೇವಾಲಯಗಳನ್ನು ನಿರ್ಮಿಸುವ ಮೂಲಕ ಶಿಲೆಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ಶಿಲ್ಪಕಲೆಗಳಲ್ಲಿನ ಕೆತ್ತನೆಗಳು ಈಗಲೂ ಜನರ ಮನಸೂರೆಗೊಂಡಿವೆ. ಅವರ ತ್ಯಾಗ, ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.ಕರ್ನಾಟಕವನ್ನು ಆಳಿದ ಚಾಲುಕ್ಯ, ಹೊಯ್ಸಳ ಅರಸರು ಸಹ ಶಿಲ್ಪಕಲೆಯನ್ನು ಪ್ರೋತ್ಸಾಹಿಸಿದ್ದರು. ರಾಜ್ಯದ ಪ್ರಮುಖ ಐತಿಹಾಸಿಕ ತಾಣಗಳಾದ ಬೇಲೂರು, ಹಳೇಬೀಡು, ಪಟ್ಟದಕಲ್ಲುಗಳಲ್ಲಿನ ದೇವಾಲಯಗಳಲ್ಲಿ ಶಿಲ್ಪಕಲೆಯ ಸುಂದರ ಕೆತ್ತನೆಗಳನ್ನು ಕಾಣಬಹುದು. ಆ ಮೂಲಕ ತಮ್ಮ ಜೀವಂತಿಕೆಯನ್ನು ಉಳಿಸಿಕೊಂಡಿರುವ ಜಕಣಾಚಾರಿ ಎಂದೆಂದಿಗೂ ಸ್ಮರಣೀಯರಾಗಿದ್ದಾರೆ ಎಂದರು.
ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭಾ ಉಪಾಧ್ಯಕ್ಷರಾದ ಮಮತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉದಯ್‌ಕುಮಾರ್, ಸಮಾಜದ ಮುಖಂಡರಾದ ಶಂಭುಲಿಂಗ, ಕುಮಾರ, ಮಹೇಶ್ ಹೊನ್ನಳ್ಳಿ, ಮಂಜು, ರಂಗಸ್ವಾಮಿ, ಮಹೇಶ್ ಚಾಮರಾಜನಗರ, ಸ್ವಾಮಿ, ಸೋಮಣ್ಣ, ಇತರರು ಕಾರ್ಯಕ್ರಮದಲ್ಲಿ ಇದ್ದರು.