ದೇಶಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ

| Published : Sep 18 2025, 01:10 AM IST

ಸಾರಾಂಶ

ಸಾವಿರಾರು ವರ್ಷಗಳ ಇತಿಹಾಸವಿರುವ ವಿಶ್ವಕರ್ಮ ಸಮುದಾಯವು ಸಮಾಜಕ್ಕೆ ಮಾದರಿಯಾಗಿದೆ

ಶಿರಹಟ್ಟಿ: ವಿಶ್ವಕರ್ಮ ಸಮುದಾಯವು ಹಿಂದೂ ಧರ್ಮಕ್ಕೆ ನೀಡಿರುವ ಕೊಡುಗೆ ಅಪಾರ. ಸನಾತನ ಕಾಲದಿಂದಲೂ ಶಿಲ್ಪಿಗಳು, ಸ್ವರ್ಣಕಾರರು ಸೇರಿದಂತೆ ವಿಶ್ವಕರ್ಮ ಸಮುದಾಯದವರು ಪಂಚಕಸುಬುಗಳ ನೈಪುಣ್ಯತೆ ಮೂಲಕ ದೇಶ, ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ ಕೆ.ರಾಘವೇಂದ್ರರಾವ್ ಹೇಳಿದರು.

ತಹಸೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಶ್ವಕರ್ಮ ಸಮುದಾಯದ ಅಭಿವೃದ್ಧಿಯ ಚಿಂತನೆ ನಡೆಯಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ವಿಶ್ವಕರ್ಮ ಸಮುದಾಯವು ಸಮಾಜಕ್ಕೆ ಮಾದರಿಯಾಗಿದೆ. ವಿಶ್ವಕರ್ಮ ಸಮುದಾಯದ ಉಪಜಾತಿಗಳಲ್ಲಿ ಹಿಂದುಳಿದ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಆಧುನಿಕತೆಗೆ ತಕ್ಕಂತೆ ತಾಂತ್ರಿಕವಾಗಿ ಮುಂದುವರೆಯಲು ದಾರಿ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ನೂರಾರು ವರ್ಷಗಳ ಹಿಂದೆಯೇ ಶಿಲ್ಪಕಲೆಗೆ ಅತ್ಯುನ್ನತ ಮೆರಗು ತಂದು ಇತಿಹಾಸದ ಭವ್ಯ ಸಾಕ್ಷಿ ನೀಡಿದ ಮೇರು ವ್ಯಕ್ತಿ ಅಮರಶಿಲ್ಪಿ ಜಕಣಾಚಾರಿ. ಅವರ ಕಲೆಗಾರಿಕೆ ಅಮರ. ದೇಶವು ಕಲೆ, ಸಂಸ್ಕೃತಿಗೆ ಪ್ರಸಿದ್ದವಾದುದು. ವಿಶೇಷವಾಗಿ ಕರ್ನಾಟಕದ ಬೇಲೂರಿನಲ್ಲಿ ಅದನ್ನು ಕಣ್ಣಾರೆ ನೋಡಲು ಒಂದು ದಿನ ಸಾಲದು. ಇತಿಹಾಸವನ್ನು ಕಲ್ಲಿನಲ್ಲಿ ಕೆತ್ತಿ ಈಗಲೂ ಕಣ್ಮನ ಸೆಳೆಯಲು ಕಾರಣರಾಗಿರುವರು. ಅಂತೆಯೇ ದೇಶದ ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದರು.

ಚಿನ್ನ,ಬೆಳ್ಳಿ,ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಲೋಹಗಳ ಕಸಬು ಮಾಡುವ ಮೂಲಕ ವಿಶ್ವಕರ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಶಿವ, ವಿಷ್ಣು,ಇಂದ್ರ ಮುಂತಾದ ದೇವರುಗಳಿಗೆ ಅಸ್ತ್ರ ಹಾಗೂ ರಥಗಳನ್ನು ಮಾಡಿಕೊಟ್ಟ ವಿಶ್ವಕರ್ಮ ಅವರ ಕೌಶಲ್ಯ, ತಾಳ್ಮೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕು. ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಸಮುದಾಯದ ಮುಖಂಡರು ಶ್ರಮಿಸಬೇಕು ಎಂದು ಹೇಳಿದರು.

ವಿಶ್ವಕರ್ಮ ಸಮುದಾಯ ಕಲೆ,ಸಂಗೀತ ಕ್ಷೇತ್ರ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ವಜ್ರ, ಬಂಗಾರ, ಬೆಳ್ಳಿ ವ್ಯಾಪಾರವಲ್ಲದೆ, ರಾಜಕೀಯ ಕ್ಷೇತ್ರದಲ್ಲಿ ಕೂಡ ತನ್ನದೇ ಆದ ಛಾಪು ಮೂಡಿಸಿದೆ. ವಿವಿಧ ದೇವರ ಮೂರ್ತಿಗಳಿಗೆ ಒಂದು ರೂಪು ನೀಡುವ ಮೂಲಕ ಉತ್ತಮ ಸಮಾಜ ಕಲ್ಪಿಸಿದ ಕೀರ್ತಿ ಈ ಸಮುದಾಯಕ್ಕೆ ಸಲ್ಲುತ್ತದೆ ಎಂದರು.

ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ಲಮಾಣಿ ಮಾತನಾಡಿ, ಪಂಚಲೋಹ ಬಳಸಿ ಬಗೆಬಗೆಯ ಸಾಧನ, ಸಲಕರಣೆ, ಮೂರ್ತಿಸಿದ್ದಪಡಿಸುವ ಕರಕುಶಲತೆ ಹೊಂದಿರುವ ವಿಶ್ವಕರ್ಮ ಸಮುದಾಯದವರ ಕೈಯಲ್ಲಿ ಕಲ್ಲುಗಳು ಕೂಡ ಶಿಲೆಯಾಗಿ ಅರಳುತ್ತವೆ. ಜಾತಿ, ಧರ್ಮದ ತಾರತಮ್ಯವಿಲ್ಲದೇ ಎಲ್ಲ ಜನಾಂಗದವರನ್ನು ಸಮಾನವಾಗಿ ಕಂಡ ವಿಶ್ವಕರ್ಮ ಅವರಿಗೆ ಇಡೀ ವಿಶ್ವವೇ ಋಣಿಯಾಗಿದೆ ಎಂದು ಹೇಳಿದರು.

ವಿಶ್ವಕರ್ಮ ಸಮಾಜವು ಆರ್ಥಿಕ,ಸಾಮಾಜಿಕ,ಶೈಕ್ಷಣಿಕವಾಗಿ ಹಿಂದುಳಿದಿದೆ.ಸರ್ಕಾರದ ಸೌಲಭ್ಯ ಪಡೆಯಲು ಒಗ್ಗಟ್ಟಾಗಬೇಕು. ವಿಶ್ವಕರ್ಮರು ಅನಾದಿಕಾಲದಿಂದಲೂ ಗುಡಿ, ಮಂದಿರ, ಮಹಲ್‌ ನಿರ್ಮಿಸುತ್ತಿದ್ದಾರೆ. ಜಗತ್ತಿಗೆ ಶಿಲ್ಪಕಲೆ ಪರಿಚಯಿಸಿದ ಸಮಾಜವಾಗಿದೆ. ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುತ್ತಿರುವ ಸಮಾಜವಾಗಿದೆ. ಈ ಸಮಾಜಕ್ಕೆ ಗಟ್ಟಿಧ್ವನಿ ಬರಬೇಕಾದರೆ ಪ್ರತಿ ಕುಟುಂಬದ ಮಕ್ಕಳು ಶಿಕ್ಷಣವಂತರಾಗಬೇಕು ಎಂದು ತಿಳಿಸಿದರು.

ಶಿರಸ್ತೇದಾರ ಜೆ.ಪಿ.ಪೂಜಾರ, ಎಚ್.ಜೆ. ಭಾವಿಕಟ್ಟಿ, ಸಂತೋಷ ಅಸ್ಕಿ, ವಿನೋದ ಪಾಟೀಲ, ಮುತ್ತು ಬಡಿಗೇರ, ಬಡಿಗೇರ, ಕಡ್ಲಿಕೊಪ್ಪ ಸೇರಿದಂತೆ ಸಮಾಜದ ಅನೇಕರು ಇದ್ದರು.