ಕುಮಾರಪಟ್ಟಣ: ವಿಶ್ವಕರ್ಮ ಎಂದರೆ ಹಿಂದೂ ಧರ್ಮದ ಪುರಾಣಗಳ ಪ್ರಕಾರ, ದೇವತೆಗಳ ಮೂರ್ತಿಗಳ ಸೃಷ್ಟಿಕರ್ತರು. ವಿಶ್ವಕರ್ಮ ಅನ್ನುವ ಪಂಗಡಗಳು ಭಾರತದಾದ್ಯಂತ ವಿಸ್ತರಿಸಿ ವಿಂಗಡನೆಯಾಗಿವೆ ಎಂದು ವಡ್ನಾಳ ವಿಶ್ವಕರ್ಮ ಮಹಾ ಸಂಸ್ಥಾನ ಸಾವಿತ್ರಿ ಪೀಠ, ಕಾಶಿ ಮಠದ ಅಷ್ಟೋತ್ತರ ಶತಶ್ರೀ ಶಂರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.

ರಾಣಿಬೆನ್ನೂರು ತಾಲೂಕು ಚಳಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವಸ್ಥಾನದ ಪಕ್ಕದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿರುವ ಕಾಳಿಕಾದೇವಿ, ವಿಶ್ವಕರ್ಮ, ಮೌನೇಶ್ವರ ದೇವರ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ವಿಶ್ವಕರ್ಮ ಸಮಾಜದಲ್ಲಿ ಗುರುತಿಸಿಕೊಂಡಿರುವ ಬಡಗಿತನದವರು, ಕಮ್ಮಾರರು, ಅಕ್ಕಸಾಲಿಗರು, ಪತ್ತಾರರು ಇವರೆಲ್ಲರೂ ರೈತರಿಗೆ ಬೆನ್ನೆಲುಬಾಗಿದ್ದಾರೆ. ಏಕೆಂದರೆ ರೈತ ದೇಶಕ್ಕಾಗಿ ಅನ್ನ ಕೊಡುತ್ತಿದ್ದು, ಅನ್ನವನ್ನು ಬೆಳೆಯುವ ರೈತರು ತಮ್ಮ ಜಮೀನನ್ನು ಹದಗೊಳಿಸಲು, ಬಿತ್ತನೆಗಾಗಿ ಸಿದ್ಧಪಡಿಸಲು, ಬಿತ್ತಲು ಬೇಕಾಗುವ ಸಾಧನ-ಸಲಕರಣೆಗಳನ್ನು ಸಿದ್ಧಪಡಿಸುವ ಮಹತ್ವದ ಕಾರ್ಯ ಮಾಡುತ್ತಾರೆ ಎಂದರು.

ವಿಶ್ವಕರ್ಮ ಸಮಾಜದವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸರ್ಕಾರ ವಿಶ್ವಕರ್ಮಿಗಳ ಆರ್ಥಿಕಾಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಯ ಲಾಭ ಪಡೆಯಬೇಕು. ದೇಶದ ಅಭಿವೃದ್ಧಿಗೆ ವಿಶ್ವಕರ್ಮರ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸಣ್ಣತಮ್ಮಪ್ಪ ಬಾರ್ಕಿ ಮಾತನಾಡಿ, ಗುರು-ಹಿರಿಯರ ಆಶೀರ್ವಾದದಲ್ಲಿ, ನಮ್ಮ ಊರಲ್ಲಿ ಎಲ್ಲ ಜಾತಿ ಜನಾಂಗದವರು ಒಂದು, ಸರ್ವ ಜನಾಂಗದ ಶಾಂತಿಯ ತೋಟದಂತೆ ಇದ್ದೇವೆ. ಪಕ್ಷಭೇದ ಮರೆತು ಊರಿನ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತೇವೆ. ಒಟ್ಟಾರೆ ನಮ್ಮ ಚಳಗೇರಿ ಗ್ರಾಮದಲ್ಲಿ ಧರ್ಮಸಭೆಗಳು, ಇನ್ನಿತರ ಎಲ್ಲ ಕಾರ್ಯಕ್ರಮಗಳಿಗೆ ಒಗ್ಗಟ್ಟಾಗಿ ಎಲ್ಲ ಸಮಾಜದವರು ಭಾಗವಹಿಸಿ ಯಶಸ್ವಿಗೊಳಿಸುತ್ತೇವೆ ಎಂದು ಹೇಳಿದರು.

ಧರ್ಮಸಭೆಯ ಅಧ್ಯಕ್ಷತೆಯನ್ನು ಚಂದ್ರಚಾರಿ ಪತ್ತಾರ್ ವಹಿಸಿದ್ದರು. ಮಾಜಿ ಶಾಸಕ ಅರುಣಕುಮಾರ್ ಪೂಜಾರ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಮಂಜುನಾಥಗೌಡ ಶಿವಣ್ಣನವರ, ಜಿಪಂ ಮಾಜಿ ಸದಸ್ಯ ಸಂತೋಷ್‌ಕುಮಾರ್ ಪಾಟೀಲ್ ಮಾತನಾಡಿದರು. ಊರಿನ ಪ್ರಮುಖರಾದ ಗುರುಸಿದ್ದನಗೌಡ ಪಾಟೀಲ್, ಜಕಣಾಚಾರಿ, ಮಾಯಾಚಾರಿ, ಬಸಪ್ಪಎತ್ತಿನಮನಿ, ಕುಮಾರ್‌ ತೋಟದ ಭಾಗವಹಿಸಿದ್ದರು.


ಶುಕ್ರವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕಾಳಿಕಾದೇವಿ, ಶ್ರೀ ವಿಶ್ವಕರ್ಮ, ಶ್ರೀ ಗುರು ಮುನೇಶ್ವರ ಪ್ರತಿಷ್ಠಾಪನೆ, ಕದಳಿ ಚೇದನ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ನವಲಗುಂದದ ಅಜಾತ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಮಹಾಸ್ವಾಮಿಗಳು, ಹುಲಗೂರಿನ ಮೌನೇಶ್ವರ ಮಠದ ಮೌನೇಶ್ವರ ಸ್ವಾಮಿಗಳು, ರಾಣಿಬೆನ್ನೂರಿನ ವಿರಕ್ತಮಠದ ಗುರುಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಬಾಜಾ, ಭಜಂತ್ರಿ, ಡೊಳ್ಳು, ಸಮಾಳ ವಾದ್ಯಗಳೊಂದಿಗೆ, ವೀರಾಚಾರಿ ಕಮ್ಮಾರ್‌ ತಂಡದವರಿಂದ ಪುರವಂತಿಕೆ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ, ವಿಶ್ವಕರ್ಮ, ಮೌನೇಶ್ವರ ದೇವರ ಶಿಲಾಮೂರ್ತಿಗಳ ಮೆರವಣಿಗೆ ಸಾಗಿ, ಕಾಳಿಕಾ ದೇವಿ ದೇವಸ್ಥಾನಕ್ಕೆ ಬಂದು ತಲುಪಿತು.

ಮೌನೇಶ್‌ ಕಮ್ಮಾರ್ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಮನೋಚಾರಿ ಸ್ವಾಗತಿಸಿದರು. ಚಂದ್ರಶೇಖರ್‌ ಕಮ್ಮಾರ್ ವಂದಿಸಿದರು.