ವಿಶ್ವಕರ್ಮ ಸಮಾಜ ಜಗತ್ತಿಗೆ ವಿಶೇಷ ಕೊಡುಗೆ ನೀಡಿದೆ

| Published : Dec 25 2023, 01:30 AM IST

ಸಾರಾಂಶ

ಮುಂಡರಗಿ ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ಕೋಟೆ ಭಾಗದ ಕಾಳಿಕಾ ದೇವಸ್ಥಾನದಲ್ಲಿ ಕಾಳಿಕಾ ದೇವಿ ಮಹಾ ಕಾರ್ತಿಕೋತ್ಸವ ಹಾಗೂ ಸಮುದಾಯ ಭವನ ಉದ್ಘಾಟನಾ ಸಮಾರಂಭ ನಡೆಯಿತು.

ಕಾಳಿಕಾದೇವಿ ಕಾರ್ತಿಕೋತ್ಸವ, ಸಮುದಾಯ ಭವನ ಉದ್ಘಾಟನೆ

ಮುಂಡರಗಿ: ಜಗತ್ತಿಗೆ ಬಹಳ ವಿಶೇಷವಾದ ಕೊಡುಗೆಗಳನ್ನು ಕೊಟ್ಟಿರುವಂತಹ ಸಮಾಜ ವಿಶ್ವಕರ್ಮ ಸಮಾಜ ಎಂದು ಶಹಪೂರ ವಿಶ್ವಕರ್ಮ ಏಕದಂಡಗಿ ಮಠದ ಪೀಠಾಧ್ಯಕ್ಷ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಹೇಳಿದರು.

ಅವರು ಪಟ್ಟಣದಲ್ಲಿ ವಿಶ್ವಕರ್ಮ ಸಮಾಜ ಮುಂಡರಗಿ ಇವರ ಆಶ್ರಯದಲ್ಲಿ ಕೋಟೆ ಭಾಗದ ಕಾಳಿಕಾ ದೇವಸ್ಥಾನದಲ್ಲಿ ಜರುಗಿದ ಕಾಳಿಕಾ ದೇವಿ ಮಹಾ ಕಾರ್ತಿಕೋತ್ಸವ ಹಾಗೂ ಸಮುದಾಯ ಭವನ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ‍

ವಿಶ್ವಕರ್ಮ ಸಮಾಜ ಬಾಂಧವರು ಒಗ್ಗಟ್ಟಿನಿಂದ ಬದುಕಬೇಕು. ಒಬ್ಬ ವಿಶ್ವಕರ್ಮ ಇನ್ನೊಬ್ಬ ವಿಶ್ವಕರ್ಮರಿಗೆ ಕೆಟ್ಟದ್ದನ್ನು ಮಾಡದೇ ಸದಾ ಅವರಿಗೆ ಆಸರೆಯಾಗಬೇಕು.

ಈ ಜಗತ್ತಿನಲ್ಲಿ ವಿಶ್ವಕರ್ಮರಿಲ್ಲದಿದ್ದರೆ ಜಗತ್ತಿನಲ್ಲಿ ಎಲ್ಲವೂ ನಶ್ವರ. ವಿಶ್ಬಕರ್ಮ ಅಭಿವೃದ್ಧಿ ನಿಗಮ ಮಾಡಿದ ಶ್ರೇಯಸ್ಸು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಉಪನಯನವಾದ ಮಕ್ಕಳಿಗೆ ತಂದೆ, ತಾಯೆಂದಿರು ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡುವುದರ ಜೊತೆಗೆ ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ವಿಶ್ವಕರ್ಮ ಸಮಾಜ ಕಾಯಕ ಮಾಡುವ ಸಮಾಜ. ಕಾಯಕವನ್ನು ಜಗತ್ತಿಗೆ ಸಾರಿ ಹೇಳಿದ ಸಮಾಜ. ಈ ಸಮಾಜವು ಕಣ್ಣೀರು ಬರಿಸುವುದಕ್ಕಿಂತ ಕಣ್ಣೀರು ಒರೆಸುವ ಕಾರ್ಯಕ್ಕೆ ಮಹತ್ವ ನೀಡುವುದು ಹೆಚ್ವು ಸೂಕ್ತ. ನಾವು ನಮ್ಮವರ ಸುಖದಲ್ಲಿ ಪಾಲ್ಗೊಳ್ಳುವುದಕ್ಕಿಂತ ಅವರ ದುಃಖದಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದ ಸ್ವಾಮೀಜಿಯವರು ಮುಂಡರಗಿಯಲ್ಲಿನ ಸಮಾಜ ಬಾಂಧವರು ಎಲ್ಲರೂ ಒಗ್ಗಟ್ಟಾಗಿರುವುದು ಕಂಡು ಸಂತಸವಾಗಿದೆ ಎಂದರು.

ಸಮುದಾಯ ಭವನ ಉದ್ಘಾಟಿಸಿ ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ನಾವು ಕೊಟ್ಟಿರುವಂತಹ ಸರ್ಕಾರದ ಅನುದಾನವನ್ನು ಸಮಾಜದ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ ಉತ್ತಮವಾಗಿ ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರದ ಅನುದಾನ ಸದುಪಯೋಗವಾಗಿರುವುದು ಖುಷಿ ತಂದಿದೆ. ಸಣ್ಣ ಸಮಾಜಗಳಿಂದ ಹೆಚ್ಚಿನ ಅಭಿವೃದ್ದಿ‌ ಕಾರ್ಯಗಳು ಆಗುತ್ತವೆ. ಆ ಕಾಳಿಕಾ ದೇವಿ ಆಶೀರ್ವಾದ ನಮ್ಮನಿಮ್ಮೆಲ್ಲರ ಮೇಲಿರಲಿ ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಸಿಂಗಟಾಲೂರು ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, ತಾಲೂಕಿನ ಸಿಂಗಟಾಲೂರು ಕ್ಷೇತ್ರದಲ್ಲಿ ನಿರ್ಮಿಸಿರುವ ಕಾಳಿಕಾ ದೇವಿ ದೇವಸ್ಥಾನಕ್ಕೆ ರವೀಂದ್ರ ಉಪ್ಪಿನಬೆಟಗೇರಿ 1 ಲಕ್ಷ ರು.ಗಳ ದೇಣಿಗೆ ನೀಡಿದ್ದಾರೆ. ಈ ಸಮಾಜ ಎಲ್ಲ ಸಮಾಜದವರೊಂದಿಗೆ ಅವಿನಾಭಾವ ಸಂಬಂಧವನ್ನು ಇರಿಸಿಕೊಂಡಿದ್ದಾರೆ. ಕಾರ್ತಿಕೋತ್ಸವದ ನೆಪದಲ್ಲಿ ಸಮಾಜ ಬಾಂಧವರೆಲ್ಲರೂ ಒಂದೆಡೆ ಕೂಡಿಕೊಂಡು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಮಾಜದ ಬೆಳವಣಿಗೆಗೆ ನಮ್ಮ ಸಮಾಜದ ಎಲ್ಲ ಮಹನೀಯರ ಸಹಕಾರವಿದೆ. ಕೇವಲ ನಮ್ಮ ಸಮಾಜ ಮಾತ್ರವಲ್ಲದೇ ನಾವು ಎಲ್ಲ ಸಮಾಜದೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಸುಂದರವಾದ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಹಾದೇವಪ್ಪ ಪತ್ತಾರ, ನಾರಾಯಣಪ್ಪ ಸೂಡಿ, ಲೋಕಪ್ಪ ಪತ್ತಾರ, ಸೋಮಶೇಖರಪ್ಪ ಉಪ್ಪಿನಬೆಟಗೇರಿ, ಶಂಕರ ವೀರಾಪೂರ, ಮೌನೇಶ ಉಪ್ಪಿನಬೇಟಗೇರಿ, ಶ್ರೀನಿವಾಸ ಉಪ್ಪಿನಬೆಟಗೇರಿ, ಸೋಮಶೇಖರ ಬಡಿಗೇರ, ನಾಗಪ್ಪ ಬಡಿಗೇರ, ಚಂದ್ರಶೇಖರ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾಳಪ್ಪ ಕಮ್ಮಾರ ಸ್ವಾಗತಿಸಿ, ಶಿವಾನಂದಪ್ಪ ಪತ್ತಾರ ನಿರೂಪಿಸಿ, ಮೌನೇಶ ಉಪ್ಪಿನಬೆಟಗೇರಿ ವಂದಿಸಿದರು.