ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಮ ಸಮಾಜವನ್ನು ನಿರ್ಮಾಣ ಮಾಡಲು ವಿಶ್ವಕರ್ಮರಂತಹ ಮಹಾ ಪುರುಷರು ಶ್ರಮಿಸಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಬುಧವಾರ ನಡೆದ ಶ್ರೀ ವಿಶ್ವಕರ್ಮ ಜಯಂತಿ ಆಚರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜಕ್ಕೆ ಬಸವಣ್ಣನವರು, ಕನಕದಾಸರು, ವಿಶ್ವಕರ್ಮರು, ಅಂಬೇಡ್ಕರ್, ಮಹರ್ಷಿ ವಾಲ್ಮೀಕಿಯವರಂತಹ ಮಹನೀಯರ ಕೊಡುಗೆ ಅಪಾರ. ಈ ಪ್ರಪಂಚ ಇರುವವರೆಗೂ ಈ ಮಹಾಪುರುಷರು ತಮ್ಮ ವಿಚಾರಧಾರೆಗಳಿಂದ ಬದುಕಿರುತ್ತಾರೆ ಎಂದು ತಿಳಿಸಿದರು.ವಿಶ್ವದ ಶಿಲ್ಪಕಲೆಯ ಪ್ರಥಮ ಗುರುಗಳು ಇದ್ದರೆ ಅದು ವಿಶ್ವಕರ್ಮರು ಮಾತ್ರ. ಇತ್ತೀಚೆಗೆ ವೈವಿಧ್ಯಮಯವಾದ ವಾಸ್ತುಶಿಲ್ಪಗಳು, ತಂತ್ರಜ್ಞಾನಗಳು ಬಂದಿರಬಹುದು. ಹೀಗಿದ್ದರೂ ವಿಶ್ವಕರ್ಮರು ಹಾಗೂ ಅವರ ಶಿಲ್ಪಕಲೆಯನ್ನು ಮರೆಯಲು ಸಾಧ್ಯವಿಲ್ಲ. ಸಂಸ್ಕೃತಿಯ ದೈವಶಕ್ತಿಯಾಗಿರುವ ವಿಶ್ವಕರ್ಮರು, ಮಹತ್ತರವಾದ ನಗರಗಳನ್ನು, ಪುಷ್ಪಕ ವಿಮಾನ, ಬಗೆಬಗೆಯ ಅಸ್ತ್ರ-ಶಸ್ತ್ರಗಳನ್ನು ಸೃಷ್ಟಿಸಿ ಕೊಟ್ಟಿರುವುದು ವರ್ಣನೆಗೂ ಮೀರಿರುವಂತಹದ್ದು ಎಂದು ಹೇಳಿದರು.
ವಿಶ್ವಕರ್ಮರ ಕುರಿತು ಹಾಸನದ ಎಚ್.ಕೆ.ಎಸ್. ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ರಮೇಶ್ ಉಪನ್ಯಾಸ ನೀಡಿದರು.ತಾಲೂಕು ಕಚೇರಿಯ ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಉಮಾಶಂಕರ್, ಶಿಲ್ಪ ಕಲಾವಿದ ವಿಶ್ವಕರ್ಮ ಆಚಾರ್, ತಾಲ್ಲೂಕು ಅಧ್ಯಕ್ಷ ದಿವಾಕರ್, ಮಹಿಳಾ ಸಂಘದ ಅಧ್ಯಕ್ಷರಾದ ಮಂಜುಳಾ, ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ.ರಮೇಶ್ ಸ್ವಾಗತಿಸಿದರು.