ಸಾರಾಂಶ
ಸಾಯಿ ಗುರುಕುಲ ಸಂಸ್ಥೆಯ ವಿದ್ಯಾರ್ಥಿ ಆರ್.ಆರ್.ವಿಶ್ವಾಸ್ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 16ನೇ ಸ್ಥಾನ ಮತ್ತು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ಬರಲು ಕಾರಣರಾಗಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷರೂ ಆಗಿರುವ ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ.
ಹೊನ್ನಾಳಿ : ಸಾಯಿ ಗುರುಕುಲ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತಿರುವ ಫಲವಾಗಿ ವಿದ್ಯಾರ್ಥಿ ಆರ್.ಆರ್.ವಿಶ್ವಾಸ್ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 16ನೇ ಸ್ಥಾನ ಮತ್ತು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ಬರಲು ಕಾರಣರಾಗಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷರೂ ಆಗಿರುವ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಪಟ್ಟಣದ ಹೊರವಲಯದ ಶ್ರೀ ಸಾಯಿ ಗುರುಕುಲ ವಸತಿಯುತ ಶಾಲಾ-ಕಾಲೇಜುಗಳ ಆಶ್ರಯದಲ್ಲಿ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಥೆಯ ಮತ್ತೊಬ್ಬ ವಿದ್ಯಾರ್ಥಿ ಪಿ.ಎಚ್. ಕುಬೇರ ಕೂಡ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 456ನೇ ರ್ಯಾಂಕ್ ಗಳಿಸಿದ್ದಾರೆ ಎಂದರು.
ಆರ್. ಆರ್. ವಿಶ್ವಾಸ್ 5ನೇ ತರಗತಿಯಿಂದಲೂ ಸಂಸ್ಥೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಪಿ.ಎಚ್.ಕುಬೇರ ಪಿಯುಸಿಯನ್ನು ಮಾತ್ರವೇ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿ, ಜೆಇಇ ಅಂತಹ ಕಠಿಣವಾಗಿರುವ ಪರೀಕ್ಷೆಯಲ್ಲೂ ಪಿಯುಸಿ ವಿಜ್ಞಾನ ವಿಭಾಗದ ಉಪನ್ಯಾಸಕರ ಮಾರ್ಗದರ್ಶನದಲ್ಲಿ, ಸತತ ಅಭ್ಯಾಸ ಮಾಡಿ ಸಾಧನೆ ಮೆರೆದಿದ್ದಾರೆ. ಸಂಸ್ಥೆಗೆ ಒಳ್ಳೆಯ ಹೆಸರು ತಂದುಕೊಟ್ಟಿರುವ ಅವರು ಅಭಿನಂದನಾರ್ಹರು. ಉಪನ್ಯಾಸಕರು ಮತ್ತು ಪೋಷಕ ವರ್ಗಕ್ಕೂ ಹೃತ್ಫೂರ್ವಕ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ರಿಯಾಯತಿ ದರದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ಆರ್.ಆರ್. ವಿಶ್ವಾಸ್ ಮತ್ತು ಶಿವಮೊಗ್ಗ ತಾಲೂಕಿನ ಹೊಳೆ ಹನಸವಾಡಿ ಗ್ರಾಮದ ಪಿ.ಎಚ್. ಕುಬೇರ ಮಾತನಾಡಿ, ಸಂಸ್ಥೆಯ ಉಪನ್ಯಾಸಕರು ನಮ್ಮ ಆರೋಗ್ಯದ ಕಡೆಗೂ ವಿಶೇಷ ಗಮನಹರಿಸುವುದರ ಜೊತೆಗೆ ಅತ್ಯುತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದರು. ಇದರ ಪರಿಣಾಮ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ಈ ಸಂದರ್ಭ ಸಂಸ್ಥೆ ಕಾರ್ಯದರ್ಶಿ ಸೌಮ್ಯ ಪ್ರದೀಪ ಗೌಡ, ಆಡಳಿತಾಧಿಕಾರಿ ಡಿ.ಎಸ್. ಅರುಣ್, ಖಜಾಂಚಿ ಡಿ.ಜಿ.ಸೋಮಪ್ಪ, ನಿರ್ದೇಶಕರಾದ ಡಿ.ಎಸ್. ಪ್ರದೀಪಗೌಡ, ಪ್ರಾಂಶುಪಾಲ ಎಚ್.ಎಂ. ದರ್ಶನ್, ಶಿಕ್ಷಣ ಸಂಯೋಜಕ ಎ.ಜಿ. ಹರೀಶ್ ಕುಮಾರ್, ಉಪನ್ಯಾಸಕರಾದ ಕೆ.ಎನ್. ಉಷಾ, ಸುದರ್ಶನ್, ರೂಪಾ, ಮಹೇಶ್, ಜಿ.ಕೃಷ್ಣಮೂರ್ತಿ, ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು