ಅಭಿವೃದ್ಧಿಯ ದೂರದೃಷ್ಟಿ ಆಡಳಿತಗಾರ ನಾಲ್ವಡಿ: ತಗ್ಗಹಳ್ಳಿ ವೆಂಕಟೇಶ್

| Published : Jun 07 2024, 12:30 AM IST

ಅಭಿವೃದ್ಧಿಯ ದೂರದೃಷ್ಟಿ ಆಡಳಿತಗಾರ ನಾಲ್ವಡಿ: ತಗ್ಗಹಳ್ಳಿ ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾತ:ಸ್ಮರಣೀಯರಲ್ಲಿ ನಾಲ್ವಡಿಯವರೂ ಒಬ್ಬರಾಗಿದ್ದಾರೆ. ಆಧುನಿಕ ಮೈಸೂರು ರಾಜ್ಯ ನಿರ್ಮಾಣಕ್ಕೆ, ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅಪಾರ. ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ ಸಾಹಿತ್ಯ, ರಾಜಕೀಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಡುಗೆ ನೀಡದ ಕ್ಷೇತ್ರಗಳೇ ಇಲ್ಲ. ಅವರೊಬ್ಬ ಅಭಿವೃದ್ಧಿಯ ದೂರದೃಷ್ಟಿಯುಳ್ಳ ಅಪರೂಪದ ಆಡಳಿತಗಾರ ಎಂದು ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಬಣ್ಣಿಸಿದರು.

ನಗರದ ಪ್ರವಾಸಿಮಂದಿರ ಸಮೀಪ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಮತ್ತು ನೆಲದನಿ ಬಳಗ, ಮಂಗಲ ಇವರ ಸಹಯೋಗದಲ್ಲಿ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಾತ:ಸ್ಮರಣೀಯರಲ್ಲಿ ನಾಲ್ವಡಿಯವರೂ ಒಬ್ಬರಾಗಿದ್ದಾರೆ. ಆಧುನಿಕ ಮೈಸೂರು ರಾಜ್ಯ ನಿರ್ಮಾಣಕ್ಕೆ, ಕರುನಾಡ ಅಭಿವೃದ್ಧಿಗೆ ಒಡೆಯರ್ ಕೊಡುಗೆ ಅಪಾರ. ಕೃಷಿ, ಕೈಗಾರಿಕೆ, ನೀರಾವರಿ, ಜಲ ವಿದ್ಯುತ್, ಶಿಕ್ಷಣ, ಆರೋಗ್ಯ ಸಾಹಿತ್ಯ, ರಾಜಕೀಯ ಸೇರಿದಂತೆ ಹಲವು ವಲಯಗಳಲ್ಲಿ ಅಂದಿನ ಮೈಸೂರು ರಾಜ್ಯ ಮುಂಚೂಣಿಯಲ್ಲಿತ್ತು. ಅಭಿವೃದ್ಧಿಯ ಹಿಂದೆ ಇವರ ಕೊಡುಗೆ ಅಪಾರವಾಗಿತ್ತು. ಅಂದು ಬೆಂಗಳೂರು, ಮೈಸೂರು ನಗರಗಳು ಎಲ್ಲರ ಆಕರ್ಷಣೆಯ ಕೇಂದ್ರವಾಗುವಂತೆ ಮಾಡಿದ್ದು ಅವರ ದೂರದೃಷ್ಟಿ ಆಡಳಿತಕ್ಕೆ ಸಾಕ್ಷಿ ಎಂದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾಲ್ವಡಿಯವರ ಶ್ರಮ ಮತ್ತು ತ್ಯಾಗವನ್ನು ಎಂದಿಗೂ ಮರೆಯಲಾಗದು, ಕೃಷ್ಣರಾಜಸಾಗರ ಜಲಾಶಯ ನಿರ್ಮಿಸಿ ರೈತರ ಬದುಕನ್ನು ಹಸನಾಗಿಸಿದ ಮಹಾಪುರುಷ ನಾಲ್ವಡಿ. ಇಂತಹ ಸಾಧಕ ಮಹಾರಾಜರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ನೆಲದನಿ ಬಳಗದ ಅಧ್ಯಕ್ಷ ಮಂಗಲ ಎಂ.ಸಿ.ಲಂಕೇಶ್ ಮಾತನಾಡಿ, ಗಾಂಧೀಜಿ ಕಂಡ ಕನಸನ್ನು ನನಸು ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ವಜನಾಂಗವನ್ನು ಒಂದೇ ಸೂರಿನಲ್ಲಿ ಬದುಕುವಂತೆ ಮಾಡಿ ಸರ್ವರಿಗೂ ಸಮಾನತೆ ಸಾರಿ, ದಲಿತರಿಗೆ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಎಲ್ಲರಿಗೂ ಎಲ್ಲಾ ವರ್ಗದ ಜನರಿಗೂ ವಿದ್ಯಾಭ್ಯಾಸ, ಉದ್ಯೋಗವನ್ನು ಕಲ್ಪಿಸಿಕೊಟ್ಟು ಸರ್ವಜನಾಂಗದ ನಾಯಕರಾಗಿದ್ದಾರೆ ಎಂದರು.

ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಅನಿಷ್ಠ ಪದ್ಧತಿಗಳನ್ನು ನಿಷೇಧಿಸಿ, ಹೊಸ ಕಾನೂನು ಜಾರಿಗೊಳಿಸಿದರು. ಮಹಿಳೆಯ ಪ್ರಗತಿಗೆ ಹೊಸ ನಾಂದಿ ಹಾಡಿದರು ಎಂದು ನುಡಿದರು.

ಕಸಾಪ ನಗರಾಧ್ಯಕ್ಷೆ ಸುಜಾತಕೃಷ್ಣ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ನಾಗರತ್ನ, ತಗ್ಗಹಳ್ಳಿ ನಾಗರಾಜು, ಮಂಗಲ ಮಹಾದೇವ, ರತ್ನಜೈನ್, ಸಚ್ಚಿನ್, ಬುಜಹಳ್ಳಿ ರಾಮಚಂದ್ರ, ಲಿಂಗಪ್ಪ, ಸಿದ್ದೇಗೌಡ, ಜಗದೀಶ್, ನವೀನ್ ಮತ್ತಿತರರಿದ್ದರು.