ನಾವು ವಾಸಿಸುತ್ತಿರುವ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಮೂಲ ಸೌಕರ್ಯಗಳಿಲ್ಲ. ಹಾಗಾಗಿ ಬೇರೆ ಸ್ಥಳ ಗುರಿತಿಸಿ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಮನೆ ನಿರ್ಮಿಸಿಕೊಟ್ಟು ಸೌಕರ್ಯ ಒದಗಿಸಬೇಕು. ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಮಾಸಿಕ ವೇತನ ನೀಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಎಸ್.ಶಂಕರ ಅಂಕನಶೆಟ್ಟಿಪುರ ಅವರು ಪಟ್ಟಣದ ಪೌರಕಾರ್ಮಿರ ಕಾಲೋನಿಗೆ ಶುಕ್ರವಾರ ಭೇಟಿಕೊಟ್ಟು ಅಲ್ಲಿನ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.ಬಳಿಕ ಪಟ್ಟಣದ ಶಿಕ್ಷಕರ ಭವನದಲ್ಲಿ ನಾಗಮಂಗಲ ಹಾಗೂ ಪಾಂಡವಪುರ ತಾಲೂಕು ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳ ಕುಂದು ಕೊರತೆ ಸಭೆ ನಡೆಸಿದರು.
ಪಟ್ಟಣದ ಪೌರಕಾರ್ಮಿರ ಕಾಲೋನಿಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟ ಎಸ್.ಶಂಕರ ಅಂಕನಶೆಟ್ಟಿಪುರ ಅವರಿಗೆ ಅಲ್ಲಿನ ನಿವಾಸಿಗಳು ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.ನಾವು ವಾಸಿಸುತ್ತಿರುವ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಮೂಲ ಸೌಕರ್ಯಗಳಿಲ್ಲ. ಹಾಗಾಗಿ ಬೇರೆ ಸ್ಥಳ ಗುರಿತಿಸಿ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಮನೆ ನಿರ್ಮಿಸಿಕೊಟ್ಟು ಕುಡಿವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಬೇಕು. ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ಸರಿಯಾದ ರೀತಿಯಲ್ಲಿ ಮಾಸಿಕ ವೇತನ ನೀಡುತ್ತಿಲ್ಲ ಎಂದು ದೂರಿದರು.
ನಮಗೆ ಕೊಟ್ಟಿರುವ ಸ್ಮಶಾನ ಜಾಗವು ಕಲ್ಲುಬಂಡೆಗಳಿಂದ ಕೂಡಿರುವುದರಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ನಮ್ಮ ಸಮುದಾಯಕ್ಕೆ ಮೀಸಲಿಟ್ಟಿರುವ ಸ್ಮಶಾನ ಭೂಮಿಯ ಒತ್ತುವರಿಯಾಗಿದೆ. ಹಾಗಾಗಿ ಒತ್ತುವರಿಯನ್ನು ತೆರವುಗೊಳಿಸಿ ಸ್ಮಶಾನ ಜಾಗವನ್ನು ಬಿಡಿಸಿಕೊಡಬೇಕು. ಹೊರಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಮನವಿ ಮಾಡಿದರು.ನಂತರ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಎಸ್.ಶಂಕರ ಅಂಕನಶೆಟ್ಟಿಪುರ ಮಾತನಾಡಿ, ಪೌರಕಾರ್ಮಿಕರು ಒಂದು ದಿನ ಪಟ್ಟಣವನ್ನು ಸ್ವಚ್ಛಗೊಳಿಸದಿದ್ದರೆ ಯಾರೂ ಸಹ ಉಸಿರಾಡಲೂ ಆಗುವುದಿಲ್ಲ. ಅಂತಹ ಜನರ ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ಕೊಡಬೇಕು ಎಂದರು.
ನಾಗಮಂಗಲ ಹಾಗೂ ಪಾಂಡವಪುರ ತಾಲೂಕು ವ್ಯಾಪ್ತಿಯಲ್ಲಿ ಎಷ್ಟು ಮಂದಿ ಸ್ವಚ್ಛತಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಸಂಪೂರ್ಣ ಮಾಹಿತಿ ನೀಡಬೇಕು. ಶಿಥಿಲಗೊಂಡಿರುವ ಪೌರಕಾರ್ಮಿಕರ ಮನೆಗಳ ದುರಸ್ಥಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಎರಡೂ ತಾಲೂಕುಗಳ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು.ಇದಕ್ಕೂ ಮುನ್ನ ಡಾ.ಅಂಬೇಡ್ಕರ್ ಮತ್ತು ಡಾ.ಬಾಬು ಜಗಜೀವನ್‌ರಾಂ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಸಭೆಯಲ್ಲಿ ನಾಗಮಂಗಲ ಹಾಗೂ ಪಾಂಡವಪುರ ತಾಲೂಕು ವ್ಯಾಪ್ತಿಯ ಸ್ವಚ್ಛತಾ ಕಾರ್ಮಿಕರು ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಎಸ್.ಶಂಕರ ಅಂಕನಶೆಟ್ಟಿಪುರ ಅವರಿಗೆ ಸಹವಾಲು ಸಲ್ಲಿಸಿದರು.
ನಾಗಮಂಗಲ ತಹಸೀಲ್ದಾರ್ ಲೆಫ್ಟಿನೆಂಟ್ ಜನರಲ್ ಡಾ.ಅಶೋಕ್, ಪಾಂಡವಪುರ ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಬಿ.ಎಸ್.ಸತೀಶ್, ಪುರಸಭೆ ಮುಖ್ಯಾಧಿಕಾರಿ ವೀಣಾ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ, ಪಾಂಡವಪುರ ಪುರಸಭೆ ಮುಖ್ಯಾಧಿಕಾರಿ ಸತೀಶ್‌ಕುಮಾರ್, ಪಾಂಡವಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಕೋಮಲ, ಬೆಳ್ಳೂರು ಪಪಂ ಮುಖ್ಯಾಧಿಕಾರಿ ಲಕ್ಷ್ಮಣ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎನ್.ಎಸ್.ಮಂಜುನಾಥ ಸೇರಿದಂತೆ ನಾಗಮಂಗಲ ಹಾಗೂ ಪಾಂಡವಪುರ ತಾಲೂಕಿನ ಪೌರಕಾರ್ಮಿಕರು ಇದ್ದರು.