ತಾಲೂಕಿನಲ್ಲಿ ದೀಪಾವಳಿಗೆ ಗೃಹ ಲಕ್ಷ್ಮೀ ಯೋಜನೆಯ ಮೂರು ಕಂತುಗಳು ಬಿಡುಗಡೆಯಾಗಿವೆ, ಇನ್ನೂ ಶೇ.20 ರಷ್ಟು ಜನರಿಗೆ ಹಣ ಜಮಾ ಆಗಿಲ್ಲ

ಹರಪನಹಳ್ಳಿ: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ನಿರೀಕ್ಷಿತ ಪ್ರಮಾಣದಲ್ಲಿ ನೊಂದಣಿಯಾಗಿಲ್ಲ, ಆದ್ದರಿಂದ ಪದವಿ ಕಾಲೇಜುಗಳ ಕ್ಯಾಂಪಸ್‌ ಗೆ ತೆರಳಿ ಈ ಕುರಿತು ಅರಿವು ಮೂಡಿಸಿ ಎಂದು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅವರು ನಗರದ ತಾಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.

ಹರಪನಹಳ್ಳಿ ತಾಲೂಕಿನಲ್ಲಿ ಯುವನಿಧಿ ಯೋಜನೆಯಲ್ಲಿ 3280 ಫಲಾನುಭವಿಗಳಿದ್ದು, ಅದಕ್ಕೆ ₹9.39 ಕೋಟಿ ಅನುದಾನ ಭರಿಸಲಾಗಿದೆ ಎಂದು ಕೌಶಲ್ಯಾಭಿವೃದ್ದಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಮಟ್ಟದ ಅಧಿಕಾರಿ ನಾಗರಾಜ ಅವರು ತಿಳಿಸಿದಾಗ ಪಿ.ಟಿ. ಪರಮೇಶ್ವರನಾಯ್ಕ ಇದು ಅತಿ ಕಡಿಮೆಯಾಯಿತು, ಹೆಚ್ಚು ನೊಂದಣಿಯಾಗಬೇಕು, ಯುವ ನಿಧಿ ನೊಂದಣಿಗೆ ಯಾವುದೇ ಷರತ್ತುಗಳಿಲ್ಲ, ಯುವಕರು ಹೆಚ್ಚು ಇದರಲ್ಲಿ ತೊಡಗಿಸಿಕೊಳ್ಳಬೇಕು, ಆದ್ದರಿಂದ ಪದವಿ ಕಾಲೇಜುಗಳ ಕ್ಯಾಂಪಸ್‌ ಗೆ ತೆರಳಿ ಕರಪತ್ರ ವಿತರಿಸಿ ಅರಿವು ಮೂಡಿಸಿ ಎಂದು ಸೂಚಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮನಗೌಡ ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಮಾಹಿತಿ ನೀಡಿ ತಾಲೂಕಿನಲ್ಲಿ ದೀಪಾವಳಿಗೆ ಗೃಹ ಲಕ್ಷ್ಮೀ ಯೋಜನೆಯ ಮೂರು ಕಂತುಗಳು ಬಿಡುಗಡೆಯಾಗಿವೆ, ಇನ್ನೂ ಶೇ.20 ರಷ್ಟು ಜನರಿಗೆ ಹಣ ಜಮಾ ಆಗಿಲ್ಲ, ಜಮಾ ಆಗುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

1700 ಫಲಾನುಭವಿಗಳು ನಿಧನ: ತಾಲೂಕಿನಲ್ಲಿ ಗೃಹ ಲಕ್ಷ್ಮೀ ಯೋಜನೆ 1700 ಫಲಾನುಭವಿಗಳು ನಿಧನ ಹೊಂದಿದ್ದು, ಅವರಲ್ಲಿ ಶೇ.60 ರಷ್ಟು ಹಣ ಡ್ರಾ ಆಗಿದೆ, 3.60 ಲಕ್ಷ ಹಣ ವಾಪಸ್‌ ಸರ್ಕಾರಕ್ಕೆ ಜಮಾ ಮಾಡಿಸಿದ್ದೇವೆ ಎಂದು ಹೇಳಿದರು.

ಆಗ ಪಿ.ಟಿ. ಪರಮೇಶ್ನರನಾಯ್ಕ ಮಾತನಾಡಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಉಪಯೋಗಸಿಕೊಂಡು ಫಲಾನುಭವಿಗಳು ನಿಧನರಾದ ಕೂಡಲೇ ಜಿಪಂ ಸಿಇಒ ಗೆ ಕೂಡಲೇ ಮಾಹಿತಿ ಕೊಡಬೇಕು ಹಾಗೂ ಅಂತವರ ಖಾತೆ ಬ್ಲಾಕ್‌ ಮಾಡಬೇಕು ಇಲ್ಲದಿದ್ದರೆ ದುರುಪಯೋಗವಾಗುತ್ತದೆ ಎಂದು ಹೇಳಿದರು.

ಗೃಹ ಜ್ಯೋತಿ ಯೋಜನೆಯಲ್ಲಿ ಪರಿಷ್ಕರಣೆ ಕಾರ್ಯ ಶೇ100 ರಷ್ಟು ಪೂರ್ಣ ಗೊಂಡಿದೆ, 30 ರಿಂದ 35 ಜನ ಹೊರ ರಾಜ್ಯದವರು ಆಚಾರ ಬಡಾವಣೆಯಲ್ಲಿ ಈ ಯೋಜನೆಯಲ್ಲಿ ಇದ್ದರು ಅಂತವರನ್ನು ಈ ಯೋಜನೆಯಿಂದ ಹೊರ ಕಳಿಸಲಾಗಿದೆ, ಇನ್ನೂ 200 ಯುನಿಟ್‌ ಗಿಂತ ಹೆಚ್ಚಿಗೆ ವಿದ್ಯುತ್ ಬಳಸುವವರು ಸಹ ಈ ಯೋಜನೆಯಿಂದ ಹೊರಗಿದ್ದಾರೆ ಎಂದು ಬೆಸ್ಕಾಂ ಎಇಇ ಪ್ರಕಾಶ ಪತ್ತೇನೂರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಾನು ಸಹ ಗೃಹ ಜ್ಯೋತಿ ಯೋಜನೆಯ ಫಲಾನುಭವಿ ಅಲ್ಲ ಎಂದು ಪಿ.ಟಿ.ಪರಮೇಶ್ವರ ನಾಯ್ಕ ನಗುತ್ತಾ ಸ್ಪಷ್ಟ ಪಡಿಸಿದರು.

ಐದು ಗ್ಯಾರಂಟಿ ಹೊರ ರಾಜ್ಯದವರಿಗೆ ಕೊಡುವಂತಿಲ್ಲ ಎಂದು ಈ ಸಂದರ್ಭದಲ್ಲಿ ಪಿ.ಟಿ.ಪರಮೇಶ್ವರನಾಯ್ಕ ತಿಳಿಸಿದರು.

ಕೂಲಹಳ್ಳಿ ಗ್ರಾಪಂ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಬಂದಾಗ ಕೇವಲ ಬೆಳಗ್ಗೆ 1 ಗಂಟೆ ವಿತರಿಸಿ ನಾಳೆ ಬಾ ಎನ್ನುತ್ತಾರೆ, ಜನರ ಸಂಗಡ ಬೇಕಾ ಬಿಟ್ಟಿ ಮಾತನಾಡುತ್ತಾರೆ ಎಂದು ಸದಸ್ಯ ಸೋಮನಾಥ ಆರೋಪಿಸಿದರು. ಆಗ ಪಿ.ಟಿ.ಪರಮೇಶ್ವರನಾಯ್ಕ ಆ ರೀತಿ ಆಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿಯ ಸಮಿತಿ ಸದಸ್ಯ ಲಕ್ಕಳ್ಳಿ ಗಂಗಾಧರಪ್ಪ ನಮ್ಮ ಭಾಗದಲ್ಲಿ ಬಸ್ಸಿನ ಸಮಸ್ಯೆ ಇದೆ ಎಂದಾಗ ಪರಮೇಶ್ವರನಾಯ್ಕ ಸಾರಿಗೆ ಸೌಕರ್ಯ ಸರಿಪಡಿಸಿ ಎಂದು ಸ್ಥಳೀಯ ಸಾರಿಗೆ ಘಟಕದ ವ್ಯವಸ್ಥಾಪಕಿ ಸುಶೀಲ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತಾಡಿದ ಪಿ.ಟಿ. ಪರಮೇಶ್ವರನಾಯ್ಕ ಅವರು ಪಂಚ ಗ್ಯಾರಂಟಿ ಯೋಜನೆ ಪಾರದರ್ಶಕವಾಗಿ ಅನುಷ್ಠಾನ ಮಾಡುತ್ತಿದ್ದೇವೆ, ಕೆಲವರು ಟೀಕೆ ಮಾಡುವುದು ರಾಜಕಾರಣಕ್ಕಾಗಿ ಎಂದ ಅವರು ಈ ಯೋಜನೆ ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

602.47 ಕೋಟಿ ಪಾವತಿ : ಹರಪನಹಳ್ಳಿ ತಾಲೂಕಿನಲ್ಲಿ ಗೃಹ ಲಕ್ಷ್ಮೀ ಯೋಜನೆಯಲ್ಲಿ 70,564 ಪಡಿತರ ಚೀಟಿಗಳಿದ್ದು, ಅವುಗಳಿಗೆ 421.28 ಕೋಟಿ, ಅನ್ನಭಾಗ್ಯ ಯೋಜನೆಯಲ್ಲಿ 2,71,162 ಫಲಾನುಭವಿಗಳಿದ್ದು, ಅವರಿಗೆ ₹7.20 ಕೋಟಿ ವೆಚ್ಚದಲ್ಲಿ ಅಕ್ಕಿ ವಿತರಿಸಲಾಗಿದೆ, ಗೃಹ ಜ್ಯೋತಿ ಯೋಜನೆಯಲ್ಲಿ 66,821 ಫಲಾನುಭವಿಗಳಿಗೆ 95.07 ಕೋಟಿ ಭರಿಸಲಾಗಿದೆ, ಶಕ್ತಿ ಯೋಜನೆಯಲ್ಲಿ 1,79,49,155 ಫಲಾನುಭವಿಗಳಿದ್ದು, ಅವರುಗಳ ಪ್ರಯಾಣಕ್ಕೆ ₹69.53 ಕೋಟಿ ಭರಿಸಲಾಗಿದೆ, ಯುವ ನಿಧಿ ಯೋಜನೆಯಲ್ಲಿ 3280 ಫಲಾನುಭವಿಗಳಿದ್ದು ಅವರಿಗೆ ₹9.39 ಕೋಟಿ ಸೇರಿದಂತೆ ಐದು ಗ್ಯಾರಂಟಿಗಳಿಂದ ತಾಲೂಕಿನಲ್ಲಿ 602.47 ಕೋಟಿ ಹಣ ರಾಜ್ಯ ಸರ್ಕಾರದಿಂದ ಭರಿಸಲಾಗಿದೆ ಎಂದು ಪಿ.ಟಿ. ಪರಮೇಶ್ವರನಾಯ್ಕ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಟಾನದ ತಾಲೂಕಾಧ್ಯಕ್ಷ ಉದಯಶಂಕರ, ಸದಸ್ಯರುಗಳಾದ ಲಕ್ಕಳ್ಳಿ ಗಂಗಪ್ಪ, ಸೋಮನಾಥ, ಪಂಪಾಚಾರ್, ನವರಂಗ, ಬಸವರಾಜ, ತಾಪಂ ಕಾರ್ಯನಿರ್ವಾಹಣಾಧಿಕಾರಿ ವೈ.ಎಚ್. ಚಂದ್ರಶೇಖರ ಉಪಸ್ಥಿತರಿದ್ದರು.