ಪಂಚನಹಳ್ಳಿಗೆ ಕಲಬುರ್ಗಿಯ ಫಿರೋಜಾಬಾದ್ ಗ್ರಾಪಂ ಸದಸ್ಯರ ಭೇಟಿ
KannadaprabhaNewsNetwork | Published : Oct 20 2023, 01:00 AM IST
ಪಂಚನಹಳ್ಳಿಗೆ ಕಲಬುರ್ಗಿಯ ಫಿರೋಜಾಬಾದ್ ಗ್ರಾಪಂ ಸದಸ್ಯರ ಭೇಟಿ
ಸಾರಾಂಶ
ಪಂಚನಹಳ್ಳಿಗೆ ಕಲಬುರ್ಗಿಯ ಫಿರೋಜಾಬಾದ್ ಗ್ರಾಪಂ ಸದಸ್ಯರ ಭೇಟಿ
ಕನ್ನಡಪ್ರಭ ವಾರ್ತೆ, ಕಡೂರು ಕಲಬುರ್ಗಿ ಜಿಲ್ಲೆಯ ಫಿರೋಜಾಬಾದ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿ ಗಾಂಧಿ ಗ್ರಾಮ ಪುರಸ್ಕಾರ ಪಡೆದ ತಾಲೂಕಿನ ಪಂಚನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿಕೊಟ್ಟು ಅಭಿವೃದ್ದಿ ಕಾರ್ಯಗಳನ್ನು ವೀಕ್ಷಿಸಿದರು. ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ಪಂಚಾಯಿತಿ ಕಟ್ಟಡ, ಶಾಲಾ ಕಾಲೇಜು ಕಟ್ಟಡಗಳ ಅಭಿವೃದ್ಧಿ, ಕುಡಿವ ನೀರು ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಅಭಿವೃದ್ಧಿ ವಿಚಾರದಲ್ಲಿ ಪಂಚಾಯಿತಿ ಸದಸ್ಯರ ನಡುವಿನ ಒಗ್ಗಟ್ಟು, ಅಧಿಕಾರಿಗಳ ಪಾಲ್ಗೊಳ್ಳುವಿಕೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಂಚನಹಳ್ಳಿ ಗ್ರಾಪಂ ಅಧ್ಯಕ್ಷ ಸಾವೆ ಮರುಳಪ್ಪ ಸದ್ಯದ ಪರಿಸ್ಥಿತಿಯಲ್ಲಿ ಒಬ್ಬ ಶಾಸಕರಿಗೆ ವರ್ಷಕ್ಕೆ 50 ಲಕ್ಷ ಅನುದಾನ ಬಂದರೆ ಹೆಚ್ಚು. ಆದರೆ ಪಂಚನಹಳ್ಳಿ ಗ್ರಾಪಂನಿಂದ 5.7 ಕೋಟಿ ವೆಚ್ಚದಲ್ಲಿ ನರೆಗಾ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಎರಡು ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗಾಗಿ ಜಿಪಂಗೆ ಕಳುಹಿಸಿಕೊಡಲಿದ್ದೇವೆ. 2022-23 ನೇ ಸಾಲಿನಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಈ ಪಂಚಾಯಿತಿ ಆಯ್ಕೆಯಾಗುವಲ್ಲಿ ಎಲ್ಲರೂ ಕಾರಣ ಎಂದರು. ಸದಸ್ಯ ಪಿ.ಎಂ.ಪಾಪಣ್ಣ ಮಾತನಾಡಿ ಗ್ರಾಮ ಪಂಚಾಯಿತಿಗಳು ಸರಕಾರದ ಅನುದಾನ ಜತೆಗೆ ವೈಯಕ್ತಿಕ ಆದಾಯ ಹೆಚ್ಚಿಸಿಕೊಂಡಾಗ ಹೆಚ್ಚಿನ ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ. ಇನ್ನು ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದರೆ ಗ್ರಾಮ ಪಂಚಾಯಿತಿ ಆದಾಯ ಹೆಚ್ಚುತ್ತದೆ ಎಂದು ತಿಳಿಸಿದರು. ಸದಸ್ಯ ಪಿ.ಆರ್.ರಂಗನಾಥ್ ಮಾತನಾಡಿ .ಶಾಲೆ ಮತ್ತು ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಗ್ರಾಮದೊಳಗಿನ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಿದರು. ಗ್ರಾಮ ಪಂಚಾಯಿತಿ ನರೇಗಾ ಯೋಜನೆ ಜತೆಗೆ ಬೆಳ್ಳಿ ಪ್ರಕಾಶ್ ಶಾಸಕರ ಅನುದಾನದ ಹಣದಿಂದ ಗ್ರಾಮದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಇದರ ಜತೆಗೆ ಗ್ರಾಪಂನಿಂದ ಮಕ್ಕಳ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಗಳನ್ನು ಹಮ್ಮಿಕೊಳ್ಳಲಾಯಿತು. ಈ ಎಲ್ಲಾ ಕಾರಣಗಳಿಂದ ಪಂಚಾಯಿತಿಗೆ 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ದೊರೆಯಿತು ಎಂದರು. ಪಿರೋಜ್ ಬಾದ್ ಗ್ರಾಪಂ ಅಧ್ಯಕ್ಷ ರಾಜು ರಾಮಚಂದ್ರ ,ಉಪಾಧ್ಯಕ್ಷೆ ದೇವಕಿ ಬಸವರಾಜು, ಸದಸ್ಯರಾದ ಶಿವಕುಮಾರ್ ಸಾಹೇಬಣ್ಣ, ಬಾಬಾ ಪಾಟೀಲ್, ಶಶಿಕಾಂತ್, ಶರಣಮ್ಮ, ಯಮನಪ್ಪ, ಪಂಚನಹಳ್ಳಿ ಗ್ರಾಪಂ ಸದಸ್ಯರಾದ ಪಿ.ಎಸ್.ಸಂತೋಷ್, ಲತಾಮಣಿ ಹಾಲಪ್ಪ, ಶಾರದಮ್ಮ, ರೂಪ ಶ್ರೀನಿವಾಸ್, ಎರಡು ಗ್ರಾಮ ಪಂಚಾಯಿತಿಗಳ ಪಿಡಿಒಗಳು ಮತ್ತಿತರರು ಇದ್ದ್ರರು. 19ಕೆಕೆಡಿಯು2. ಕಲಬುರಗಿ ಜಿಲ್ಲೆಯ ಪಿರೋಜಾ ಬಾದ್ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು ಮತ್ತು ಸಿಬ್ಬಂದಿ ವರ್ಗ ಪಂಚನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಭಿವೃದ್ದಿ ಕಾರ್ಯಗಳನ್ನು ವೀಕ್ಷಿಸಿದರು.