ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಪಟ್ಟಣದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ನಿರ್ವಹಣೆಯಲ್ಲಿ ನಡೆಯುತ್ತಿರುವ ಕರ್ನಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹದಿನೈದು ದಿನಗಳಿಂದ ಸರಿಯಾಗಿ ಊಟ ತಿಂಡಿ ನೀಡಿದೆ ಹಸಿವಿನಿಂದ ಓದುತ್ತಿರುವ ಮಕ್ಕಳ ಕುರಿತಾಗಿ ಎಚ್ಚೆತ್ತ ಜಿಲ್ಲಾಡಳಿತ ಸಮಗ್ರ ವರದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡರಚಿಸಿ ತನಿಖೆ ನಡೆಸುತ್ತಿದೆ.ತಹಸೀಲ್ದಾರ್ ಶ್ರೀನಿವಾಸ್ ಅವರು ಹಾಸ್ಟೆಲ್ ಗೆ ಭೇಟಿ ನೀಡಿ ಆಹಾರ ಪದಾರ್ಥಗಳು. ಅಡುಗೆ ಕೋಣೆ ಮತ್ತು ಅಡುಗೆ ಸಾಮಾನುಗಳನ್ನು ಕಂಡು ನಿಬ್ಬೆರಗಾದರು. ಸ್ಥಳದಲ್ಲಿಯೇ ಬಿಇಒ ಕಾಂತರಾಜ್ ಅವರಿಗೆ ಸೂಚಿಸಿ ಈ ಹಾಸ್ಟೆಲ್ ನಿರ್ವಹಣೆಯಲ್ಲಿ ಯಾರ್ಯಾರು ಜವಾಬ್ದಾರಿ ಇದ್ದಾರೆ ಎಂಬುದದರ ಕುರಿತು ವಿವರವಾದ ವರದಿ ತಯಾರಿಸಿ ನಾಳೆಯೊಳಗೆ ಸಲ್ಲಿಸಿ ಎಂದು ಅವರು ಸೂಚಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತಾನಾಡಿದ ತಹಸೀಲ್ದಾರ್ ಶ್ರೀನಿವಾಸ್, ಜಿಲ್ಲಾಡಳಿತದ ಸೂಚನೆ ಮೇರೆಗೆ ನಾನು ಹಾಸ್ಟೆಲ್ ಗೆ ಬಂದು ಪರಿಶೀಲಿಸಿ ಮಕ್ಕಳೊಂದಿಗೆ ಮಾತನಾಡಿದಾಗ ಕಳೆದ ಹದಿನೈದು ದಿನಗಳಿಂದ ಅಧಿಕಾರಿಗಳ ನಿರ್ವಹಣೆ ವೈಪಲ್ಯದಿಂದ ಹಾಗೂ ಟೆಂಡರ್ ದಾರನ ಬೇಜವಾಬ್ದಾರಿಯಿಂದ ವಸತಿ ನಿಲಯದ ವಿಧ್ಯಾರ್ಥಿಗಳಿಗೆ ಸೊಸೈಟಿ ಅಕ್ಕಿ ಅನ್ನ ಮತ್ತು ಟೊಮ್ಯಾಟೊ ಸಾಂಬರ್ ನೀಡಲಾಗಿದ್ದು ನಿಲಯದ ಮೆನು ಪ್ರಕಾರ ಆಹಾರ ನೀಡದೆ ಮಕ್ಕಳಿಗೆ ವಂಚನೆ ಮಾಡಿರುವುದು ಮೇಲುನೋಟಕ್ಕೆ ಕಂಡು ಬಂದಿದ್ದು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡುತ್ತೆನೆ ಎಂದು ತಿಳಿಸಿದರು.ಡಿಡಿಪಿಐ ಇಲಾಖೆಯಿಂದ ತನಿಖೆಗೆ ಬಂದಿದ್ದ ಶೋಭಾ ಮಾತಾನಾ,ಡಿ ಡಿಡಿಪಿಐ ಆದೇಶದ ಮೇರೆಗೆ ನಾವು ತನಿಖೆಗಾಗಿ ಬಂದಿದ್ದು ಈ ಹಾಸ್ಟೇಲ್ ವ್ಯವಸ್ಥೆಯಲ್ಲಿ ಲೋಪವಾಗಿರುವುದು ಎದ್ದು ಕಾಣುತ್ತಿದ್ದು, ಇದರ ನಿರ್ವಹಣೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡಿಲ್ಲದೆ ಇರುವುದು ಎದ್ದು ಕಾಣುತ್ತಿದೆ. ಇದರ ಸಂಪೂರ್ಣ ವರದಿಯನ್ನು ನಾವು ಹಿರಿಯ ಅಧಿಕಾರಿಗಳಿಗೆ ಸಲ್ಲಿಸುತ್ತೆವೆ ಮತ್ತು ಅಂತವರ ಮೇಲೆ ಕ್ರಮ ಜರುಗಿಸುವುದು ಜಿಲ್ಲಾಡಳಿತಕ್ಕೆ ಸಂಬಂಧಿಸಿದ್ದು ಎಂದು ತಿಳಿಸಿದರು.
ಬಿಇಒ ಕಾಂತರಾಜ್ ಮಾತಾನಾಡಿ, ಜಿಲ್ಲಾಡಳಿತದ ಸೂಚನೆ ಮೇರೆಗೆ ನಾನು ಸಂಪೂರ್ಣವಾಗಿ ನಿರ್ವಹಣೆಯಲ್ಲಾಗಿರುವ ಲೋಪದೋಷದ ಬಗ್ಗೆ ವಿವರವಾಗಿ ವರದಿ ನೀಡುತ್ತೇನೆ. ಮತ್ತೆ ಈ ಕ್ಷಣದಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಅವರು ಹೇಳಿದರು.ಈ ವೇಳೆ ಎಪಿಸಿ ಸುರೇಶ್. ಬಿ.ಆರ್.ಸಿ ಕೃಷ್ಣಯ್ಯ, ಅಕ್ಷರ ದಾಸೋಹ ರಾಜು, ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಇಸಿಒ ಕೃಷ್ಣಮೂರ್ತಿ, ಶಿಕ್ಷಕ ಪ್ರಮೋದ್, ಬಂಗಾರಯ್ಯ ಮೊದಲಾದವರು ಇದ್ದರು.