ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಾಥಪುರ
ತಮ್ಮ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ತೊಡಗಿಸಿಕೊಳ್ಳದೇ ಶಾಲೆಗಳಿಗೆ ತಪ್ಪದೇ ಪ್ರತಿನಿತ್ಯ ಕಳುಹಿಸಿಕೊಡಬೇಕೆಂದು ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ರವಿಕುಮಾರ ಕೆ. ಎನ್. ಕರೆ ಕೊಟ್ಟರು.ಹನ್ಯಾಳು ಸರ್ಕಾರಿ ಪ್ರೌಢಶಾಲೆಗೆ ಬರುವ ವಿದ್ಯಾರ್ಥಿಗಳ ಮನೆಗಳಿಗೆ ರಾತ್ರಿ ಸಂಚಾರ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಭೇಟಿ ಕೊಟ್ಟು ಪೋಷಕರೊಂದಿಗೆ ಸಂವಹನ ನಡೆಸಿ ಅವರು ಮನವಿ ಮಾಡಿದರು. ತಮ್ಮ ಶಾಲೆಗಳಿಗೆ ಹನ್ಯಾಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಸೋಂಪುರ, ಮಧರನಹಳ್ಳಿ, ಸುಬೇದಾರನಕೊಪ್ಪಲು, ಆನಂದೂರುಗಳಿಂದ ಬರುವ ವಿದ್ಯಾರ್ಥಿಗಳ ಮನೆಗಳಿಗೆ ತಮ್ಮ ಶಾಲಾ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪೋಷಕರೊಂದಿಗೆ ಅವರವರ ಮಕ್ಕಳ ಪ್ರಗತಿಯನ್ನು ಮುಕ್ತವಾಗಿ ಚರ್ಚಿಸಿ, ಮಗುವಿನ ಓದಿನ ಮಟ್ಟ ಹೇಗಿದೆ, ಇನ್ನೂ ಯಾವ ಮಟ್ಟದಲ್ಲಿ ತಮ್ಮ ಮಕ್ಕಳು ಓದಬೇಕು, ಓದಿನಲ್ಲಿ ಪೋಷಕರ ಪಾತ್ರ ಏನು, ಹಾಗೆಯೇ ಓದುವ ವಾತಾವರಣವನ್ನು ತಮ್ಮ ತಮ್ಮ ಮಕ್ಕಳಿಗೆ ಮನೆಗಳಲ್ಲಿ ಹೇಗೆ ಒದಗಿಸಿಕೊಡಬೇಕು ಎಂಬುವುದರ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ತನ್ನ ವೃತ್ತಿ ಜೀವನದ ಹದಿನೆಂಟು ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ಶಾಲೆ ಬಿಟ್ಟ ನಂದನ್, ಶಿವಕುಮಾರ್, ಪ್ರೀತಮಾಚಾರ್ ಇನ್ನೂ ಅನೇಕ ವಿದ್ಯಾರ್ಥಿಗಳು ಶಾಲಾ ವ್ಯಾಪ್ತಿಗೆ ಬಂದು ತಮ್ಮ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಹಾಗೆಯೇ ನನ್ನ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗದಲ್ಲಿದ್ದು, ವೈದ್ಯರುಗಳಾಗಿ ಡಾ.ಯಧುಕುಮಾರ್, ಡಾ. ಸುದರ್ಶನ್, ಡಾ. ಶಾಲಿನಿ, ಡಾ.ಯಶಸ್ವಿನಿ, ಡಾ. ಭಾವನಾ, ಡಾ. ಪುನೀತ್, ಡಾ. ಜ್ಞಾನೇಶ್ವರಿ ಸೇವೆ ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ. ನಿಜಕ್ಕೂ ಇಂತಹ ವಿದ್ಯಾರ್ಥಿಗಳನ್ನು ನನ್ನ ವೃತ್ತಿ ಬದುಕಿನಲ್ಲಿ ಪಡೆದುಕೊಂಡಿದ್ದು ನನ್ನ ಪುಣ್ಯವಾಗಿದೆ ಎಂದು ಹೆಮ್ಮೆ ಪಟ್ಟರು.ಈ ಸಂದರ್ಭದಲ್ಲಿ ನನ್ನ ತಂದೆ ತಾಯಿಗಳು, ಗುರುಗಳಾದ ಎಸ್. ಪಿ. ಸಂಜೀವಮೂರ್ತಿ, ಎಂ. ಗಿಡ್ಡೇಗೌಡ, ವೈ. ಸಿ. ರಾಮಶೇಷ, ರಾಚಪ್ಪಶೆಟ್ಟಿ, ಬಾಳಿಗ ಹಾಗೂ ಇನ್ನಿತರರು ನನ್ನ ಎಲ್ಲಾ ಕೆಲಸ ಕಾರ್ಯಗಳಿಗೆ ಸ್ಫೂರ್ತಿಯಾಗಿರುತ್ತಾರೆ ಎಂದರು.ಈ ಬಾರಿ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ನೀಡುವ ನಿಟ್ಟಿನಲ್ಲಿ ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಕಾರ್ಯೋನ್ಮುಖರಾಗಿದ್ದಾರೆ ಎಂದರು.
ಶಾಲೆಯ ಮತ್ತೊರ್ವ ಶಿಕ್ಷಕಿ ಗೀತಾ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳ ಕಡೆ ವಿಶೇಷ ಗಮನ ಕೊಟ್ಟಿದ್ದು, ಟಾರ್ಗೆಟ್ ನೀಡಿ ಸತತವಾಗಿ ಎಲ್ಲಾ ವಿಷಯದ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಮುಖ್ಯಶಿಕ್ಷಕರಾದ ರವಿಕುಮಾರ ಕೆ. ಎನ್. ಇಲಾಖೆ ಸೂಚಿಸುವ ಕಾರ್ಯಕ್ರಮಗಳನ್ನು ನಮಗೆ ಕಾಲ ಕಾಲಕ್ಕೆ ತಿಳಿಸಿ, ಅನುಷ್ಠಾನಕ್ಕೆ ತರುತ್ತಿರುವುದು ಗಮನಾರ್ಹವಾಗಿದೆ ಎಂದರು.ಅತಿಥಿ ಶಿಕ್ಷಕರಾದ ಯತೀಶ್ ಕುಮಾರ್ ರವರು ಸ್ಪೋಕನ್ ಇಂಗ್ಲಿಷ್ ಕ್ಲಾಸ್ ನಡೆಸುತ್ತಿದ್ದು, ಶಾಲಾವರಣದಲ್ಲಿ ಅಲ್ಪ ಮಟ್ಟಿಗೆ ಮಕ್ಕಳು ಇಂಗ್ಲಿಷ್ ನಲ್ಲಿ ಮಾತನಾಡುತ್ತಿರುವುದು ಶೈಕ್ಷಣಿಕ ಪ್ರಗತಿಯ ಸೂಚಕವಾಗಿದೆ. ಶಾಲೆಯ ಇನ್ನಿತರ ಅತಿಥಿ ಶಿಕ್ಷಕರಾದ ಕುಮಾರ್, ಭವ್ಯ ಹಾಗೂ ಇತ್ತೀಚೆಗೆ ನಿಯೋಜನೆಗೊಂಡ ಹಿಂದಿ ಭಾಷಾ ಶಿಕ್ಷಕಿ ಗಿರಿಜಾಂಭ ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಾಸಕರಾದ ಎ. ಮಂಜುರವರು, ಹಿರಿಯ ವಿದ್ಯಾರ್ಥಿಗಳ ಬಳಗದ ಗೌರವ ಉಪಾಧ್ಯಕ್ಷ, ನಿವೃತ್ತ ಅಬಕಾರಿ ಅಪರ ಆಯುಕ್ತ ಈರಪ್ಪ ನವರು, ತಾರಾ ಎ. ಮಂಜುರವರು, ಹಿರಿಯ ವಿದ್ಯಾರ್ಥಿ ಬಳಗದ ಸದಸ್ಯರಾದ ಡಾ.ಅಶೋಕ್ ಹನ್ಯಾಳು, ಶಂಕರಣ್ಣ, ಗುಂಡಣ್ಣ, ಆರ್ ಟಿಒ ದೀಪಕ್, ಅನುವಿಜಯ್, ಜಗದೀಶ್, ನಂದಿನಿ ರವಿ, ಸುಹಾಸ್, ರಾಘವೇಂದ್ರ, ಮಂಜೇಗೌಡ, ನಿವೃತ್ತ ಮುಖ್ಯಶಿಕ್ಷಕರಾದ ಲಕ್ಕೇಗೌಡ, ಪವನ್ ಹಾಗೂ ಇನ್ನಿತರ ಎಲ್ಲಾ ಸಕ್ರಿಯ ಸದಸ್ಯರು, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಣ್ಣರಾಜ್ ಮತ್ತು ಸದಸ್ಯರು, ಹನ್ಯಾಳು ಗ್ರಾಮ ಪಂಚಾಯಿತಿ, ಹನ್ಯಾಳು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಟೊಂಕ ಕಟ್ಟಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.---------------------------------------------------------------------