ಅಡಕೆ ಹಳದಿ ಎಲೆ ರೋಗ ಪತ್ತೆಗೆ ವಿಟ್ಲ ಸಿಪಿಸಿಆರ್‌ಐ ಲ್ಯಾಬ್‌ ಸಿದ್ಧ!

| Published : Jan 16 2024, 01:48 AM IST

ಅಡಕೆ ಹಳದಿ ಎಲೆ ರೋಗ ಪತ್ತೆಗೆ ವಿಟ್ಲ ಸಿಪಿಸಿಆರ್‌ಐ ಲ್ಯಾಬ್‌ ಸಿದ್ಧ!
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ದಲ್ಲಿ ಸುಸಜ್ಜಿತ ಲ್ಯಾಬ್‌ ಸಿದ್ಧಗೊಂಡಿದೆ. ಕರ್ನಾಟಕ ಸರ್ಕಾರದ 50 ಲಕ್ಷ ರು. ಅನುದಾನದ ನೆರವಿನಲ್ಲಿ ಸಿಪಿಸಿಆರ್‌ಐ ಸಮುಚ್ಛಯದಲ್ಲಿ ಈ ಲ್ಯಾಬ್‌ ತೆರೆಯಲಾಗಿದ್ದು, ಶೀಘ್ರವೇ ಕಾರ್ಯಾರಂಭಿಸಲಿದೆ.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ, ಮಲೆನಾಡು ಪ್ರದೇಶಗಳ ಪ್ರಮುಖ ವಾಣಿಜ್ಯ ಬೆಳೆ ಅಡಕೆ ತೋಟಕ್ಕೆ ಬಾಧಿಸಿರುವ ಹಳದಿ ಎಲೆ ರೋಗ ಪತ್ತೆಗೆ ಇನ್ನು ದೂರದ ದಕ್ಷಿಣ ಕೇರಳಕ್ಕೆ ಹೋಗಬೇಕಾಗಿಲ್ಲ. ಅಡಕೆ ಬೆಳೆ ಪ್ರದೇಶ ಕರಾವಳಿಯಲ್ಲೇ ಪ್ರತ್ಯೇಕ ಲ್ಯಾಬ್‌ ಸಜ್ಜುಗೊಂಡಿದೆ.

ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ದಲ್ಲಿ ಸುಸಜ್ಜಿತ ಲ್ಯಾಬ್‌ ಸಿದ್ಧಗೊಂಡಿದೆ. ಕರ್ನಾಟಕ ಸರ್ಕಾರದ 50 ಲಕ್ಷ ರು. ಅನುದಾನದ ನೆರವಿನಲ್ಲಿ ಸಿಪಿಸಿಆರ್‌ಐ ಸಮುಚ್ಛಯದಲ್ಲಿ ಈ ಲ್ಯಾಬ್‌ ತೆರೆಯಲಾಗಿದ್ದು, ಶೀಘ್ರವೇ ಕಾರ್ಯಾರಂಭಿಸಲಿದೆ.ಕರಾವಳಿ ದಕ್ಷಿಣ ಭಾಗದ ಹಾಗೂ ಮಲೆನಾಡು ಪ್ರದೇಶದ ಅಡಕೆ ಬೆಳೆಗಾರರು ಹಳದಿ ಎಲೆ ರೋಗ ಪತ್ತೆಗೆ ರೋಗಪೀಡಿತ ಸ್ಯಾಂಪಲ್‌ ಎಲೆಯನ್ನು ಕಾಸರಗೋಡು ಸಿಪಿಸಿಆರ್‌ಐ ಕೇಂದ್ರ ಕಚೇರಿಗೆ ತೆಗೆದುಕೊಂಡು ಹೋಗಬೇಕಿತ್ತು. ಅಲ್ಲಿಂದ ಸಿಪಿಸಿಆರ್‌ಐ ವಿಜ್ಞಾನಿಗಳು ಲ್ಯಾಬ್‌ ಪರೀಕ್ಷೆಗೆ ದಕ್ಷಿಣ ಕೇರಳದ ಕಾಯಂಗುಲಂಗೆ ಕಳುಹಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ 60 ರಿಂದ 70 ರಷ್ಟು ಸ್ಯಾಂಪಲ್‌ಗಳನ್ನು ಕಾಯಂಗುಲಂಗೆ ಕಳುಹಿಸಿ ಫಲಿತಾಂಶ ಪಡೆಯಲಾಗಿದೆ. ಆದರೆ ಇದು ಬಹಳ ವಿಳಂಬ ಪ್ರಕ್ರಿಯೆ. ಈ ತೊಂದರೆ ತಪ್ಪಿಸಲು ಸುಲಭದಲ್ಲಿ, ತ್ವರಿತವಾಗಿ ಪರೀಕ್ಷೆ ನಡೆಸಿ ಫಲಿತಾಂಶ ಪಡೆಯಲು ವಿಟ್ಲದಲ್ಲೇ ಲ್ಯಾಬ್‌ ತೆರೆಯಲಾಗಿದೆ. ಇದರೊದಿಗೆ ವಿಟ್ಲ ಸಿಪಿಸಿಆರ್‌ಐನಲ್ಲಿ ಲ್ಯಾಬ್‌ ತೆರೆಯುವ ಅಡಕೆ ಬೆಳೆಗಾರರ ಬಹುವರ್ಷದ ಬೇಡಿಕೆ ಈಡೇರಿದಂತಾಗಿದೆ.

ಪ್ರತ್ಯೇಕ ಲ್ಯಾಬ್‌ನಲ್ಲಿ ಪಿಸಿಆರ್‌ ಹಾಗೂ ಎಲಿಸಾ ರೀಡರ್‌ ವಿಧಾನ ಮೂಲಕ ಹಳದಿ ಎಲೆ ರೋಗ ಪತ್ತೆ ಮಾಡಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲ ಉಪಕರಣಗಳನ್ನೂ ಸಿದ್ಧಪಡಿಸಲಾಗಿದ್ದು, ಹಳದಿ ಎಲೆ ರೋಗ ಇದೆಯೇ ಅಥವಾ ಇಲ್ಲವೋ ಎಂಬುದನ್ನು ಈ ಲ್ಯಾಬ್‌ ಪರೀಕ್ಷೆಯಲ್ಲಿ ನಿಖರವಾಗಿ ತಿಳಿಯಬಹುದು. ಬಳಿಕ ರೋಗದ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಸಿಪಿಸಿಆರ್‌ಐ ವಿಜ್ಞಾನಿಗಳು ಶಿಫಾರಸು ಮಾಡಲು ಸುಲಭವಾಗಲಿದೆ.

ರೋಗ ಪತ್ತೆ ಹೇಗೆ?:

ಶಂಕಿತ ಹಳದಿ ಎಲೆ ರೋಗ ಪೀಡಿತ ಅಡಕೆ ಮರದ ಎಲೆಯ ತುಣುಕನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಬೇಕು. ಬಳಿಕ ತಾಜಾತನ ಕಾಪಾಡಲು ಐಸ್‌ಬಾಕ್ಸ್‌ನಲ್ಲಿ ಇರಿಸಿ ಲ್ಯಾಬ್‌ಗೆ ತರಬೇಕು. ಸಣ್ಣ ಪ್ರಮಾಣದಲ್ಲಿ ಸ್ಯಾಂಪಲ್‌ ಪರೀಕ್ಷೆ ಉಚಿತವಾಗಿಯೇ ಮಾಡಲು ನಿರ್ಧರಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಬರಲಾರಂಭಿಸಿದರೆ, ಲ್ಯಾಬ್‌ ನಿರ್ವಹಣೆಗೆಗಾಗಿ ಕನಿಷ್ಠ ಪರೀಕ್ಷಾ ಮೊತ್ತ ನಿಗದಿಪಡಿಸುವ ಆಲೋಚನೆಯನ್ನು ಸಿಪಿಸಿಆರ್‌ಐ ಹೊಂದಿದೆ. ರೋಗ ಪತ್ತೆ ಮಾಡುವ ಕೆಮಿಕಲ್‌ಗೆ ದುಬಾರಿ ದರ ಇದೆ. ಇದಕ್ಕೆ ಸರ್ಕಾರದಿಂದ ಬೇರೆ ಯಾವುದೇ ಅನುದಾನ ಲಭಿಸುವುದಿಲ್ಲ ಎಂದು ಮೂಲಗಳು ಹೇಳುತ್ತಿವೆ.

ಶಂಕಿತ ರೋಗಪೀಡಿತ ಎಲೆಯನ್ನು ಲ್ಯಾಬ್‌ನಲ್ಲಿ ಪಿಸಿಆರ್‌ ಮತ್ತು ಎಲಿಸಾ ರೀಡರ್‌ ವಿಧಾನದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಫಲಿತಾಂಶಕ್ಕೆ ಕನಿಷ್ಠ ಒಂದು ದಿನ ಬೇಕಾಗುತ್ತದೆ. ಫಲಿತಾಂಶ ಹೊಂದಿಕೊಂಡು ಹಳದಿ ಎಲೆ ರೋಗ ನಿಯಂತ್ರಣಕ್ಕೆ ಪರಿಹಾರ ಕ್ರಮವನ್ನು ವಿಜ್ಞಾನಿಗಳು ಸೂಚಿಸಲಿದ್ದಾರೆ.

ಎನಿದು ಹಳದಿ ಎಲೆ ರೋಗ?

ಅಡಕೆ ಮರದ ಗರಿ ಹಳದಿ ಬಣ್ಣಕ್ಕೆ ತಿರುಗುವುದು, ಕ್ರಮೇಣ ಸಾಯುವುದು. ಇದು ಆರಂಭದಲ್ಲಿ ಸುಳ್ಯ ತಾಲೂಕಿನಲ್ಲಿ ಕಾಣಿಸಿದ್ದು, ಈಗ ಮಡಿಕೇರಿ ಹಾಗೂ ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಹೆಚ್ಚಾಗಿ ಕಂಡುಬಂದಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಸುಮಾರು 3 ಸಾವಿರಕ್ಕೂ ಅಧಿಕ ಎಕರೆ ಪ್ರದೇಶಗಳಲ್ಲಿ ಅಡಕೆಗೆ ಹಳದಿ ಎಲೆ ರೋಗ ಕಾಣಿಸಿದೆ. ಇದರ ಸಂಪೂರ್ಣ ನಿರ್ಮೂಲನೆ ಸಾಧ್ಯವಾಗಿಲ್ಲ. ಈವರೆಗೆ ನಡೆಸಿದ ಸಂಶೋಧನೆಗಳು ಅಂತಿಮ ಫಲಿತಾಂಶ ನೀಡಿಲ್ಲ. ಸಿಪಿಸಿಆರ್‌ಐ ಮಾತ್ರವಲ್ಲ, ಬೆಳೆಗಾರರು ಕೂಡ ಸ್ವಯಂ ಆಗಿ ಸಂಶೋಧನೆ ಕೈಗೊಂಡು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.

ಕರ್ನಾಟಕ ಸರ್ಕಾರದ 50 ಲಕ್ಷ ರು. ಅನುದಾನದಲ್ಲಿ ಸಿಪಿಸಿಆರ್‌ಐ ವಿಟ್ಲ ಶಾಖೆಯಲ್ಲಿ ಅಡಕೆ ಮರ ಹಳದಿ ಎಲೆ ರೋಗ ಪತ್ತೆಗೆ ಸುಸಜ್ಜಿತ ಲ್ಯಾಬ್‌ ಸಿದ್ಧಪಡಿಸಲಾಗಿದೆ. ಸದ್ಯದಲ್ಲೇ ಈ ಲ್ಯಾಬ್‌ ಹಳದಿ ಎಲೆ ರೋಗ ಪರೀಕ್ಷೆಗೆ ತೆರೆದುಕೊಳ್ಳಲಿದೆ.

-ಡಾ.ಕೆ.ಬಿ.ಹೆಬ್ಬಾರ್‌, ನಿರ್ದೇಶಕರು, ಸಿಪಿಸಿಆರ್‌ಐ ಕಾಸರಗೋಡು