ವಿದ್ಯಾರ್ಥಿಗಳು ಸಂಘಟಿತರಾಗಲು ವಿವೇಕಾನಂದರೇ ಸ್ಫೂರ್ತಿ

| Published : Jan 13 2024, 01:33 AM IST

ವಿದ್ಯಾರ್ಥಿಗಳು ಸಂಘಟಿತರಾಗಲು ವಿವೇಕಾನಂದರೇ ಸ್ಫೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದಲ್ಲಿ ಇಂದು ವಿದ್ಯಾರ್ಥಿಗಳು ಸಂಘಟಿತರಾಗುತ್ತಿದ್ದಾರೆ ಎಂದರೇ ಅದಕ್ಕೆ ಸ್ಫೂರ್ತಿಯಾಗಿ ಸ್ವಾಮಿ ವಿವೇಕಾನಂದರ ತತ್ವಗಳನ್ನಾಧರಿಸಿಕೊಂಡು ಮುನ್ನುಗ್ಗುತ್ತಿರುವ ಎಬಿವಿಪಿಯ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಗ್ರಾಮೀಣ ಭಾಗದಲ್ಲಿ ಇಂದು ವಿದ್ಯಾರ್ಥಿಗಳು ಸಂಘಟಿತರಾಗುತ್ತಿದ್ದಾರೆ ಎಂದರೇ ಅದಕ್ಕೆ ಸ್ಫೂರ್ತಿಯಾಗಿ ಸ್ವಾಮಿ ವಿವೇಕಾನಂದರ ತತ್ವಗಳನ್ನಾಧರಿಸಿಕೊಂಡು ಮುನ್ನುಗ್ಗುತ್ತಿರುವ ಎಬಿವಿಪಿಯ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳೇ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಹೇಳಿದರು.

ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಭವ್ಯ ಪರಂಪರೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಸ್ವಾಮಿ ವಿವೇಕಾನಂದರು ಮಾಡಿದಂತ ಸಾಧನೆಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಿದೆ ಎಂದರು. ರಾಜಕಾರಣದಲ್ಲಿ ಸಾಕಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದು ರಾಜಕೀಯ ಕ್ಷೇತ್ರವಲ್ಲದೆ ಪ್ರತಿಭಾವಂತರ ಮೇಲೂ ಸಾಗುತ್ತಿರುವುದರಿಂದ ಅದನ್ನು ಖಂಡಿಸುವಂತ ಶಕ್ತಿಗಳು ಸಮಾಜದಲ್ಲಿ ನಿರ್ಮಾಣವಾಗಬೇಕಿದೆ. ನೇಮಕಾತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದು, ಎಬಿವಿಪಿ ಸಂಘಟನೆಯವರು ಅದನ್ನು ಖಂಡಿಸಿ ನ್ಯಾಯ ಒದಗಿಸುವಂತ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಎಬಿವಿಪಿ ಪ್ರಾಂತ ಕಾರ್ಯ ಸಮಿತಿ ಸದಸ್ಯ ಅಪ್ಪಣ್ಣ ಹಡಪದ ಮಾತನಾಡಿ, ಅಂದು ಸ್ವಾಮಿ ವಿವೇಕಾನಂದರು ಹೇಳಿದಂತ ವಿಚಾರಧಾರೆಗಳು ಇಂದು ನೆರವೇರುವ ನಿಟ್ಟಿನಲ್ಲಿ ಸಾಗುತ್ತಿದ್ದು, ಬರುವಂತ ದಿನಗಳಲ್ಲಿ ಭಾರತವು ವಿಶ್ವಗುರುವಾಗಿ ಹೊರಹೊಮ್ಮುವದರಲ್ಲಿ ಸಂದೇಹವಿಲ್ಲ ಎಂದರು.

ಅಮೃತ ಮಹೋತ್ಸವದ ಉತ್ಸಾಹದಲ್ಲಿರುವ ಎಬಿವಿಪಿಯ ಸಂಘಟನೆಯಲ್ಲಿ ಇಂದು 64 ಲಕ್ಷ ಕಾರ್ಯಕರ್ತರಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಂಘಟನೆಯು ನಿರಂತರ ಶ್ರಮಿಸುತ್ತಿದೆ. ಎಬಿವಿಪಿಯ ಸಾಕಷ್ಟು ಕಾರ್ಯಕರ್ತರು ಭಾರತವು ವಿಶ್ವ ಗುರುವಾಗಿ ಹೊರಹೊಮ್ಮಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಎಬಿವಿಪಿ ಬೆಳಗಾವಿ ವಿಭಾಗದ ಮುಖ್ಯ ವಕ್ತಾರ ಡಾ.ಎಚ್.ಎಂ.ಚನ್ನಪ್ಪಗೋಳ ಮಾತನಾಡಿದರು. ಎಬಿವಿಪಿ ತಾಲೂಕು ಅಧ್ಯಕ್ಷ ಭೀಮಪ್ಪ ಕೊಕಟನೂರ ಅಧ್ಯಕ್ಷತೆ ವಹಿಸಿದ್ದರು. ಸಾಗರ ಶಾಮರಾಯನವರ, ಅಭಿಷೇಕ ಪವಾರ, ಪ್ರವೀಣ ಹೂಗಾರ, ಯಲ್ಲಪ್ಪ ಹೂಲಿ, ವಿಶ್ವನಾಥ ಮುನವಳ್ಳಿ, ಮಾರುತಿ ಬಿಜ್ಜೂರ, ಶ್ರೀರಾಮ ಜೋರಾಪುರ ಇತರರು ಉಪಸ್ಥಿತರಿದ್ದರು. ಸೌಂದರ್ಯ ಸುಳ್ಳದ ಸ್ವಾಗತಿಸಿದರು. ಪೂಜಾ ಬೇವೂರ ನಿರೂಪಿಸಿದರು. ಕಾವ್ಯ ಬಡಿಗೇರ ವಂದಿಸಿದರು.