ಎಲ್ಲ ಸನ್ಯಾಸಿಗಳು ವೀರ ಸನ್ಯಾಸಿಗಳು ಆಗುವುದಕ್ಕೆ ಸಾಧ್ಯವಿಲ್ಲ. ಇಂದ್ರಿಯಗಳ ಮೇಲೆ ಗೆಲುವು ಸಾಧಿಸಿ, ಭಾರತದ ಜ್ಞಾನ ಪರಂಪರೆ ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ಮಾತ್ರ ವೀರ ಸನ್ಯಾಸಿ ವಿವೇಕಾನಂದ ಎಂದು ಕರೆಸಿಕೊಂಡರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎಲ್ಲ ಸನ್ಯಾಸಿಗಳು ವೀರ ಸನ್ಯಾಸಿಗಳು ಆಗುವುದಕ್ಕೆ ಸಾಧ್ಯವಿಲ್ಲ. ಇಂದ್ರಿಯಗಳ ಮೇಲೆ ಗೆಲುವು ಸಾಧಿಸಿ, ಭಾರತದ ಜ್ಞಾನ ಪರಂಪರೆ ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ಮಾತ್ರ ವೀರ ಸನ್ಯಾಸಿ ವಿವೇಕಾನಂದ ಎಂದು ಕರೆಸಿಕೊಂಡರು. ಅಂದಿನಿಂದ ಇಂದಿನವರೆಗೂ ಯುವಕರ ಪಾಲಿನ ಚೈತನ್ಯವಾಗಿ ಗುರುತಿಸಿಕೊಂಡರು ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವೀರ ಸನ್ಯಾಸಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ನಡೆದ ರಾಷ್ಟ್ರೀಯ ಯುವದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಎಂದರೆ ಶಕ್ತಿಯ ಭಂಡಾರ. ನಮ್ಮೊಳಗಿರುವ ಸೂಪ್ತ ಚೇತನ ಬಡಿದೆಚ್ಚರಿಸುವ ಕಾರ್ಯವನ್ನು ವಿವೇಕ ಚಿಂತನೆಗಳು ಮಾಡುತ್ತವೆ. ಒಂದು ಬಾರಿ ವಿವೇಕಾನಂದರ ವಿಚಾರಗಳು ನಮ್ಮ ಮನ ಹೊಕ್ಕರೆ

ನಮಗೆ ಅರಿವಿಲ್ಲದಂತೆ ಪರಿವರ್ತನೆಗಳು ಪ್ರಾರಂಭವಾಗುತ್ತವೆ. ಹೀಗಾಗಿಯೇ ವಿಶ್ವದ ಬಹುತೇಕ ರಾಷ್ಟ್ರಗಳ ಜನರು ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿದ್ದಾರೆ, ಅವರ ಆದರ್ಶಗಳನ್ನೇ ಆಧಾರವಾಗಿಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಮುಖ್ಯ ಅತಿಥಿ ಧಾರವಾಡದ ಎಕ್ಸಲಂಟ್ ನೀಟ್ ಅಕಾಡೆಮಿಯ ಪ್ರಾಂಶುಪಾಲ ಡಾ.ಜಗದೀಶ ಚಿತ್ತರಗಿ‌ ಮಾತನಾಡಿ, ಅಂದು ಸ್ವಾಮಿ ವಿವೇಕಾನಂದರು ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಹೇಳಿದರು. ಅದರರ್ಥ ಒಂದು ಸೋಲಿಗೆ ಸಾಕೆಂದುಕೊಂಡು ಹಿಂದೆ ಸರಿಯುವುದಲ್ಲ. ಒಂದು ಗೆಲುವಿಗೆ ಸಂತೃಪ್ತಿಪಟ್ಟುಕೊಂಡು ಸುಮ್ಮನೆ ಉಳಿಯುವುದೂ ಅಲ್ಲ. ಬದಲಿಗೆ ನಮ್ಮೊಳಗಿನ ಶಕ್ತಿ ಅರಿತುಕೊಂಡು ವೇಗವಾಗಿ ಮುನ್ನುಗ್ಗುವುದಾಗಿದೆ. ಇಡೀ ಪ್ರಪಂಚವನ್ನೇ ಗೆಲ್ಲುವ ಶಕ್ತಿ ನಮ್ಮೊಳಗೇ ಇದೆ. ಅದನ್ನು ಕಂಡುಕೊಂಡರೆ ಸಾಕು ಯಾವ ಪರೀಕ್ಷೆಯನ್ನಾದರು ಸುಲಭವಾಗಿ ಎದುರಿಸಬಹುದು ಎಂದರು.

ಮಕ್ಕಳಲ್ಲಿ ಓದುವ ಹವ್ಯಾಸ ಮೂಡಿಸುವುದಕ್ಕೆ ಹಾಗೂ ವಿವೇಕಾನಂದರ ಚಿಂತನೆಗಳನ್ನು ಪರಿಚಯಿಸಿಲು ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿತ್ತು. ಪ್ರಾಂಶುಪಾಲ ಮಂಜುನಾಥ ಜುನಗೊಂಡ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕ ರವಿ ಕಲ್ಲೂರಮಠ ವಂದಿಸಿದರು.