ಸಿದ್ದೇಶ್ವರ ಶ್ರೀಗಳಲ್ಲಿ ವಿವೇಕಾನಂದರ ರೂಪ

| Published : Jan 03 2025, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಿದ್ದೇಶ್ವರ ಅಪ್ಪಗಳು ತಮ್ಮ ಜ್ಞಾನ ದಿವಿಟಿಗೆ ಹಿಡಿದು ನಾಡಿನಾದ್ಯಂತ ತಿರುಗಾಡಿ ನಡೆನುಡಿಗಳಿಂದ ನಮ್ಮಲ್ಲಿ ಬದಲಾವಣೆ ತಂದ ಅಪರೂಪದ ಸಂತ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ದೇಶ್ವರ ಅಪ್ಪಗಳು ತಮ್ಮ ಜ್ಞಾನ ದಿವಿಟಿಗೆ ಹಿಡಿದು ನಾಡಿನಾದ್ಯಂತ ತಿರುಗಾಡಿ ನಡೆನುಡಿಗಳಿಂದ ನಮ್ಮಲ್ಲಿ ಬದಲಾವಣೆ ತಂದ ಅಪರೂಪದ ಸಂತ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಹೇಳಿದರು.

ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದಲ್ಲಿ ಮಾತನಾಡಿದ ಅವರು, ತನ್ನಲ್ಲಿರುವ ಜ್ಞಾನವನ್ನು ಧಾರೆ ಎರೆದು ತಾನು ಮಾಡುವ ಕೆಲಸವನ್ನು ಶಿಷ್ಯನಿಂದ ಮಾಡಿಸುವಾತ ಗುರು. ತಾಯಿ ನಮಗೆ ಜನ್ಮ ನೀಡಿದ್ದಾಳೆ. ಅವಳು ಜನ್ಮಕೊಟ್ಟ ಮಗನಿಗೆ ಗುರುವಾಗಿ ನಿಲ್ಲುತ್ತಾಳೆ. ಆದರೆ, ಸಿದ್ಧೇಶ್ವರ ಸ್ವಾಮೀಜಿಗಳು ತಾಯಿ ಹಾಗೂ ಗುರುವಿನ ಸ್ಥಾನ ಎರಡನ್ನೂ ತುಂಬಿದ್ದಾರೆ. ಕಲ್ಕತ್ತಾ ಸ್ವಾಮಿ ವಿವೇಕಾನಂದರ ಕರ್ಮಭೂಮಿ. ಹಾಗೇ ವಿಜಯಪುರ ಸಿದ್ಧೇಶ್ವರ ಶ್ರೀಗಳ ಕರ್ಮ ಭೂಮಿಯಾಗಿದೆ. ಈ ಭರತ ಭೂಮಿಯಲ್ಲಿ ಸಿದ್ಧೇಶ್ವರ ಶ್ರೀಗಳ ರೂಪದಲ್ಲಿ ಸ್ವಾಮಿ ವಿವೇಕಾನಂದರನ್ನು ಕಂಡಿದ್ದೇವೆ ಎಂದು ಬಣ್ಣಿಸಿದರು.ಸನಾತನ ಧರ್ಮ, ನಾಡಿನ ಸಂಸ್ಕೃತಿ ಹಾಗೂ ವಚನ ಸಾಹಿತ್ಯದ ರಾಯಭಾರಿಯಾಗಿ ಸಿದ್ಧೇಶ್ವರ ಸ್ವಾಮೀಜಿಗಳನ್ನು ನೋಡಿದ್ದೇವೆ. ಯಾವುದೇ ಬದಲಾವಣೆ ಪ್ರಾರಂಭವಾಗಬೇಕಾದರೆ ಅದು ನನ್ನಿಂದಲೇ ಆಗಲಿ ಎಂದು ಸರ್ವ ಸಂತರಿಗೂ ಮಾದರಿಯಾಗಿ ನಿಂತವರು ಪೂಜ್ಯರು. ಯಾವುದನ್ನು ಸಮಾಜ ಒಪ್ಪಲ್ಲವೋ, ಅದನ್ನು ಆ ಭಗವಂತ ಕೂಡ ಒಪ್ಪಲು ಸಾಧ್ಯವಿಲ್ಲ. ಅದನ್ನೇ ನಮಗೆಲ್ಲ ತಿಳಿಸಿದ್ದಾರೆ ಎಂದರು.

ಸಂತರು-ಶರಣರು ಬದುಕಿದ ನಾಡು ಇದು, ಜಗತ್ತನಲ್ಲಿ ಎಲ್ಲಿಯಾದರೂ ತಪೋ ಭೂಮಿ ಇದ್ದರೆ, ಅದು ಭರತ ಭೂಮಿ. ಮನುಷ್ಯನಿಗೆ ಜೀವಿಸಲು ಪ್ರಾಣವಾಯು ಸಿಗುವುದು ವನಗಳಿಂದ. ಸಿದ್ಧೇಶ್ವರ ಶ್ರೀಗಳು ಹೇಳಿರುವ ಗಿಡ ನೆಡುವ ಕಾರ್ಯವನ್ನು ಮುಂದುವರೆಸೋಣ ಎಂದು ಹೇಳಿದರು.ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ತದ್ರೂಪಿಯಾಗಿ ನಾವು ಸಿದ್ಧೇಶ್ವರ ಅಪ್ಪಾವರನ್ನು 21ನೇ ಶತಮಾನದಲ್ಲಿ ನೋಡಿದ್ದೇವೆ. ಅವಿಭಜಿತ ವಿಜಯಪುರ ಜಿಲ್ಲೆಯ ಬಗ್ಗೆ ಅಪ್ಪಗಳ ಕನಸು ಬಹಳ ದೊಡ್ಡದು. ಎಲ್ಲ ಪಾಟೀಲರು ಸುದ್ದ ಆದರೆ, ವಿಜಯಪುರ ಸುದ್ದ ಆಗ್ತದ ಎಂದು ಅಪ್ಪಗಳು ಹೇಳಿದ್ದರು. ಅವರು ಪ್ರಾಂಜಲ ಮನಸ್ಸಿನಿಂದ ನುಡಿದ ಮಾತುಗಳು ನಮ್ಮ ಹೃದಯದಲ್ಲಿ ಉಳಿದಿವೆ. ಅವರು ಸೂಚಿಸಿರುವ ಕೆಲಸಗಳನ್ನು ಸಾಧ್ಯವಾದಷ್ಟು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಬಸವಲಿಂಗ ಸ್ವಾಮೀಜಿಗಳು ಸಿದ್ಧೇಶ್ವರ ಅಪ್ಪಗಳು ತೋರಿದ ಮಾರ್ಗದಲ್ಲಿ ಆಶ್ರಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ನಾಡಿನ ಅನೇಕ ಪೂಜ್ಯರು ಹೆಗಲು ಕೊಟ್ಟಿದ್ದಾರೆ. ಸಿದ್ದೇಶ್ವರ ಅಪ್ಪಗಳನ್ನು ಕಂಡಿರುವ ವಿಜಯಪುರ-ಬಾಗಲಕೋಟ ಜನ ನಾವು ಬಹಳ ಪುಣ್ಯವಂತರು. ಪೂಜ್ಯರು ಈ ಶತಮಾನದ ಶ್ರೇಷ್ಠ ಸಂತರು. ಸೂರ್ಯ-ಚಂದ್ರ ಇರುವವರೆಗೂ ಅವರ ಹೆಸರು ಈ ಭೂಮಿಯ ಮೇಲೆ ಶಾಶ್ವತವಾಗಿ ಇರಲಿದೆ ಎಂದರು.

ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷಗುರು ಬಸವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ನಿವೃತ್ತ ನ್ಯಾಯಾಧೀಶ ಎ.ಎಸ್.ಪಾಶ್ಚಾಪುರೆ, ಸಂಸದ ರಮೇಶ ಜಿಗಜಿಣಗಿ, ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸೇರಿ ಹಲವು ಮಠಾಧೀಶರು, ಸ್ವಾಮೀಜಿಗಳು ಹಾಗೂ ಭಕ್ತರು ಹಾಜರಿದ್ದರು.