ಆಧುನಿಕ ತಂತ್ರಜ್ಞಾನ ನಮ್ಮ ಉತ್ತಮ ಸಂಬಂಧಗಳನ್ನು ದೂರ ಮಾಡುತ್ತಿರುವ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ನಮ್ಮ ಪಾರಂಪರಿಕ ಮೌಲ್ಯಗಳನ್ನು ಮರು ಸ್ಥಾಪಿಸುವಂತಿದೆ.
ಕನ್ನಡಪ್ರಭ ವಾರ್ತೆ ಕೋಲಾರಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಆದರ್ಶವಾಗಬಹುದಾದ ದೊಡ್ಡ ವ್ಯಕ್ತಿತ್ವವಾಗಿದ್ದು, ಅವರ ಹೆಸರು ಕೇಳಿದ ತಕ್ಷಣ ನಮಗೆ ನೆನಪಾಗುವುದು ಕಬ್ಬಿಣದ ಸ್ನಾಯುಗಳು, ಉಕ್ಕಿನಂತ ನರಗಳು, ಸಿಡಿಲಿನಂತ ಆತ್ಮವಿಶ್ವಾಸ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ. ರವಿ ತಿಳಿಸಿದರು.ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಗರ ಹೊರವಲಯದ ಮಂಗಸಂದ್ರದಲ್ಲಿರುವ ಸುವರ್ಣಗಂಗೆ ಕ್ಯಾಂಪಸ್‌ನಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ವಿವೇಕಾನಂದರು ಚಿಕಾಗೋ ಭಾಷಣ ಇಡೀ ಜಗತ್ತನ್ನು ಅಲ್ಲೋಲ ಕಲ್ಲೋಲ ಗೊಳಿಸಿಬಿಟ್ಟಿತು ವಿವೇಕಾನಂದರ ಆ ಮಾತಿಗೆ ಶಕ್ತಿ ಎಲ್ಲಿಂದ ಬಂದಿತ್ತು, ಈ ನೆಲದ ಸತ್ವದಿಂದ ಬಂದದ್ದು, ಭಾರತೀಯ ನೆಲವೆಂದರೆ ಭಾವನೆಗಳಿಗೆ ಹೆಚ್ಚಿನ ಒತ್ತು ನೀಡುವ ರಾಷ್ಟ್ರ, ಇಲ್ಲಿ ಅಪ್ಪ ಅಮ್ಮ ಅಕ್ಕ ತಂಗಿ ಅಣ್ಣ ತಮ್ಮ ಹೀಗೆ ಇಡೀ ಕುಟುಂಬದ ಭಾವನಾತ್ಮಕ ಬೆಸುಗೆ ಇಡೀ ರಾಷ್ಟ್ರವನ್ನು ವಾತ್ಸಲ್ಯದಿಂದ ಬಂಧಿಸಿದೆ ಎಂದರು. ಆಧುನಿಕ ತಂತ್ರಜ್ಞಾನ ನಮ್ಮ ಉತ್ತಮ ಸಂಬಂಧಗಳನ್ನು ದೂರ ಮಾಡುತ್ತಿರುವ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ನಮ್ಮ ಪಾರಂಪರಿಕ ಮೌಲ್ಯಗಳನ್ನು ಮರು ಸ್ಥಾಪಿಸುವಂತಿದೆ ಎಂದು ಹೇಳಿದ ಅವರು, ದೀನ ದಲಿತರ ಸೇವೆಯೇ ದೇವರ ಸೇವೆ ಎಂದು ನಂಬಿದ ವಿವೇಕಾನಂದರು, ಭಾರತೀಯ ಜ್ಞಾನಪರಂಪರೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದರು ಎಂದರು.ಆದ್ದರಿಂದ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಕೇವಲ ವೇದಿಕೆಗೆ ಭಾಷಣಕ್ಕೆ ಸೀಮಿತಗೊಳಿಸದೆ ನಮ್ಮ ಆಡಳಿತದಲ್ಲಿ ನಿತ್ಯ ಜೀವನದ ಬದುಕಿನಲ್ಲಿ ಅಳವಡಿಸಿಕೊಂಡಾಗ ಅವು ಸಾರ್ಥಕ ಗೊಳ್ಳುತ್ತ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ವಿವೇಕಾನಂದರ ಮತ್ತು ಅಂಬೇಡ್ಕರ್ ಚಿಂತನೆಗಳ ಆಧಾರದ ಮೇಲೆ ಮತ್ತು ಸಮುದಾಯದ ವಿಶ್ವವಿದ್ಯಾಲಯವಾಗಿ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲವಾಗಲಿದೆ ಎಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಗಣ್ಯರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿ ಪ್ರೊ. ಲೋಕನಾಥ್ ಅವರು ವಿವೇಕಾನಂದರ ಬದುಕಿನ ಬೇರೆ ಬೇರೆ ಮಜಲುಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಆಡಳಿತ ಕುಲಸಚಿವ ಸಿಎಂ ಶ್ರೀಧರ್, ಹಣಕಾಸು ಅಧಿಕಾರದ ಬಿವಿ ವಸಂತ್ ಕುಮಾರ್ ರಾಜ್ಯಶಾಸ್ತ್ರ ಪ್ರಾಧ್ಯಾಪಕಡಾ. ರಮೇಶ್ ಎಲ್ಲಾ ವಿಭಾಗದ ಅಧ್ಯಾಪಕರು ಹಾಜರಿದ್ದರು.
ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರದ ಅಧ್ಯಾಪಕಿ ಪ್ರೊ. ಮಮತಾ ನಿರೂಪಿಸಿ, ಕನ್ನಡ ವಿಭಾಗದ ಸಂಯೋಜಕ ಡಾ.ಎಸ್.ಜಿ. ಶ್ರೀನಿವಾಸ, ಕುಲಪತಿಗಳ ಪರಿಚಯ ಮಾಡಿಕೊಟ್ಟರು. ಡಾ. ರಮೇಶ್ ಸ್ವಾಗತಿಸಿದರೆ ಡಾ.ಎನ್. ಶ್ರೀನಿವಾಸ್ ವಂದಿಸಿದರು.ಎಲ್ಲಾ ವಿಶ್ವವಿದ್ಯಾಲಯದ ಎಲ್ಲಾ ಅಧ್ಯಾಪಕರು ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮದ ಮೊದಲಿಗೆ ಕುಲಪತಿಗಳಾದ ಪ್ರೊ.ಬಿಕೆ ರವಿ ಅವರು ಎಲ್ಲರಿಗೂ ಸಂವಿಧಾನದ ಪ್ರಸ್ತಾವನೆ ವಿಧಿ ಬೋಧಿಸಿದರು.