ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಲು ಮಂಡ್ಯ ಜಿಲ್ಲೆಯಲ್ಲಿ ಪೈಪೋಟಿ ತೀವ್ರಗೊಂಡಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹಲವರು ಒಕ್ಕಲಿಗರ ಸಂಘದ ಚುನಾವಣಾ ಅಖಾಡಕ್ಕಿಳಿದು ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಲು ಜಿಲ್ಲೆಯಲ್ಲಿ ಪೈಪೋಟಿ ತೀವ್ರಗೊಂಡಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹಲವರು ಒಕ್ಕಲಿಗರ ಸಂಘದ ಚುನಾವಣಾ ಅಖಾಡಕ್ಕಿಳಿದು ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘಕ್ಕೆ ಜಿಲ್ಲೆಯಿಂದ ನಾಲ್ಕು ನಿರ್ದೇಶಕ ಸ್ಥಾನಗಳಿವೆ. ಇರುವ ನಾಲ್ಕು ಸ್ಥಾನಗಳಿಗೆ ಹದಿನೈದು ಹೆಚ್ಚು ಮಂದಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಹೊಸ ಮುಖಗಳು ಒಕ್ಕಲಿಗರ ಸಂಘ ಪ್ರವೇಶಿಸುವ ಉತ್ಸಾಹದಲ್ಲಿದ್ದರೆ, ಹಳಬರು ಮರು ಆಯ್ಕೆಯಾಗುವುದಕ್ಕೆ ಪಣತೊಟ್ಟಿದ್ದಾರೆ.ಘೋಷಣೆಯಾಗದ ಜಿಪಂ-ತಾಪಂ ಚುನಾವಣೆ:
ಜಿಲ್ಲಾ ಮತ್ತು ತಾಪಂ ಚುನಾವಣೆ ವಿಳಂಬವಾಗುತ್ತಲೇ ಇದೆ. ಸರ್ಕಾರ ಮೀಸಲು ನಿಗದಿಪಡಿಸುವುದಕ್ಕೆ ಮೀನಮೇಷ ಎಣಿಸುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದವರು ತೀವ್ರ ನಿರಾಶರಾಗಿ ಚುನಾವಣೆ ಘೋಷಣೆಯಾಗಬಹುದಾದ ಕ್ಷೇತ್ರಗಳ ಕಡೆ ಕಣ್ಣಾಯಿಸಿದ್ದಾರೆ. ಇದರ ಪರಿಣಾಮ ಸ್ಪರ್ಧೆಗೆ ಎಲ್ಲಿಲ್ಲದ ಪೈಪೋಟಿ ಸೃಷ್ಟಿಯಾಗಿದೆ.ತಮ್ಮ ರಾಜಕೀಯ ಬೆಳವಣಿಗೆ ಬಗ್ಗೆ ಕನಸು ಕಾಣುತ್ತಿರುವವರು ವರ್ಷಾನುಗಟ್ಟಲೆ ಕಾದು ಕೂರುವುದಕ್ಕೆ ಸಿದ್ಧರಾಗಿಲ್ಲ. ಅವಕಾಶಗಳಿಗಾಗಿ ಎದುರುನೋಡುತ್ತಿದ್ದಾರೆ. ಅದಕ್ಕೆ ಸನಿಹದಲ್ಲಿರುವುದೇ ಒಕ್ಕಲಿಗರ ಸಂಘದ ಚುನಾವಣೆ. ಅದರಲ್ಲಿ ಅದೃಷ್ಟ ಪರೀಕ್ಷೆಗಿಳಿಯುವುದು. ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದರೆ ಆ ನಂತರದಲ್ಲಿ ಜಿಪಂ ಮತ್ತು ತಾಪಂ ಚುನಾವಣೆಯಲ್ಲೂ ಒಂದು ಕೈ ನೋಡೋಣ ಎಂಬ ಮನೋಭಾವದೊಂದಿಗೆ ಅಖಾಡಕ್ಕಿಳಿಯಲು ಸಿದ್ಧರಾಗುತ್ತಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಜಿದ್ದಾಜಿದ್ದಿನ ಅಖಾಡದಲ್ಲಿ ಇದೀಗ ಬಿಜೆಪಿ ಪಕ್ಷದ ಆಕಾಂಕ್ಷಿಗಳು ಅಷ್ಟೇ ಪ್ರಬಲ ಪೈಪೋಟಿ ನೀಡುವುದಕ್ಕೆ ರೆಡಿಯಾಗುತ್ತಿದ್ದಾರೆ. ಈಗಾಗಲೇ ಹಲವರು ಸದ್ದಿಲ್ಲದೆ ಒಕ್ಕಲಿಗರ ಮತದಾರರ ಪಟ್ಟಿಯನ್ನು ಕೈಯ್ಯಲ್ಲಿಡಿದುಕೊಂಡು ಮತದಾರರನ್ನು ಭೇಟಿಯಾಗುವ ಮೂಲಕ ಮತ ಸೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಒಕ್ಕಲಿಗ ಮತದಾರರನ್ನು ಸೇರಿಸಿಕೊಂಡು ಬಾಡೂಟ ಏರ್ಪಡಿಸುವುದು, ಉಡುಗೊರೆ ನೀಡುವುದು ಸೇರಿದಂತೆ ಮತಗಳನ್ನು ಸೆಳೆಯುವುದಕ್ಕೆ ಏನೆಲ್ಲಾ ತಂತ್ರಗಳನ್ನು ಉಪಯೋಗಿಸಬೇಕೋ ಅವೆಲ್ಲವನ್ನೂ ಪ್ರಯೋಗಿಸುತ್ತಾ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟಕ್ಕಿಳಿದಿದ್ದಾರೆ.ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ:
ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ಸಹೋದರ ಬಿ.ಆರ್.ಸುರೇಶ್, ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ, ಮಾಜಿ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್, ಜೆಡಿಎಸ್ ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಕಂಸಾಗರ ರವಿ, ಹೆಮ್ಮಿಗೆ ಕಾಳೇಗೌಡ, ವಕೀಲ ವಿಶಾಲ್ ರಘು, ಬಿಜೆಪಿ ಮುಖಂಡ ಡಾ.ಸದಾನಂದ, ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ರಘುಗೌಡ, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಉಪಾಧ್ಯಕ್ಷ ವೈ.ಎಚ್.ಲೋಹಿತ್‌ಕುಮಾರ್, ಹಳೆಯ ಮುಖಗಳಲ್ಲಿ ನೆಲ್ಲೀಗೆರೆ ಬಾಲು ಮತ್ತೊಮ್ಮೆ ಚುನಾವಣೆಗಿಳಿಯಲು ಬಯಸಿದ್ದರೆ, ರಾಘವೇಂದ್ರ ಅವರು ಈ ಬಾರಿ ಚುನಾವಣಾ ಅಖಾಡದಿಂದ ಹಿಂದೆ ಸರಿದು ತಮ್ಮ ಸಹೋದರ ಮುದ್ದನಘಟ್ಟ ಮಹಾಲಿಂಗೇಗೌಡರಿಗೆ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಲ್ಪಿಸಿ ತಾವು ಹಿಂದೆ ಸರಿದಿದ್ದಾರೆ. ಅವರು ಜಿಲ್ಲಾ ಪಂಚಾಯ್ತಿ ಚುನಾವಣೆ ಮೇಲೆ ಕಣ್ಣಿಟ್ಟಿರುವಂತೆ ಕಂಡುಬರುತ್ತಿದ್ದಾರೆ. ಇನ್ನೂ ಅನೇಕರು ಅಖಾಡ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.ಜಿಪಂ-ತಾಪಂ ಚುನಾವಣೆಯಲ್ಲಿ ಸೋತವರು-ಗೆದ್ದವರುಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧೆಗೆ ರೆಡಿಯಾಗಿರುವವರಲ್ಲಿ ಬಹುತೇಕರು ಜಿಲ್ಲಾ ಪಂಚಾಯ್ತಿ ಚುನಾವಣಾ ಆಕಾಂಕ್ಷಿಗಳಾಗಿದ್ದರು. ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಕಂಸಾಗರ ರವಿ, ಮಾಜಿ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ 2016ರಲ್ಲಿ ನಡೆದ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಮತ್ತೆ ಜಿಲ್ಲಾ ಪಂಚಾಯ್ತಿಗೆ ಮರು ಆಯ್ಕೆಯಾಗುವ ಆಸೆಯೊಂದಿಗೆ ಚುನಾವಣಾ ಘೋಷಣೆಗಾಗಿ ಎದುರುನೋಡುತ್ತಿದ್ದರು.
ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ರಘುಗೌಡ ಈ ಹಿಂದೆ ಭಾರತೀನಗರ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಅದೇ ರೀತಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್ ಕೂಡ ಮಳವಳ್ಳಿ ತಾಲೂಕಿನ ಧನಗೂರು ಮತ್ತು ಚೊಟ್ಟನಹಳ್ಳಿ ತಾಪಂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರಾದರೂ ಗೆಲುವು ಸಿಕ್ಕಿರಲಿಲ್ಲ.ಬಿ.ಆರ್.ರಾಮಚಂದ್ರ ಸಹೋದರ ಬಿ.ಆರ್.ಸುರೇಶ್, ಜೆಡಿಎಸ್ ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ ಅವರು ಬಸರಾಳು ಜಿಲ್ಲಾ ಪಂಚಾಯ್ತಿ ಕ್ಷೇತ್ರದವರಾಗಿದ್ದು ಅಲ್ಲಿಂದ ಜಿಪಂ ಕ್ಷೇತ್ರಕ್ಕೆ ಸ್ಪರ್ಧಿಸುವ ಮಹದಾಸೆ ಇಟ್ಟುಕೊಂಡಿದ್ದರು. ಚುನಾವಣೆ ನೆನೆಗುದಿಗೆ ಬಿದ್ದಿರುವುದರಿಂದ ಒಕ್ಕಲಿಗರ ಸಂಘದ ಚುನಾವಣೆಗಿಳಿದು ರಾಜಕೀಯ ಬೆಳವಣಿಗೆ ಸಾಧಿಸಲು ಮುಂದಾಗಿದ್ದಾರೆ.
ಬಿಜೆಪಿಯಿಂದಲೂ ಸ್ಪರ್ಧೆಗೆ ನಾ ಮುಂದು.. ತಾ ಮುಂದು..!
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಗೆ ಬಿಜೆಪಿಯಿಂದಲೂ ಹಲವರು ನಾ ಮುಂದು, ತಾ ಮುಂದು ಎಂದು ಆಕಾಂಕ್ಷಿಗಳಾಗಿ ತೊಡೆತಟ್ಟಿದ್ದಾರೆ.ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ರಘುಗೌಡ, ಮುಖಂಡ ಡಾ.ಸದಾನಂದ, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಉಪಾಧ್ಯಕ್ಷ ವೈ. ಎಚ್. ಲೋಹಿತ್‌ಕುಮಾರ್ ಅವರು ಸ್ಪರ್ಧೆಗೆ ಸಿದ್ಧರಾಗಿದ್ದಾರೆ.
ಎಚ್.ಆರ್.ಅಶೋಕ್‌ಕುಮಾರ್ ಅವರು 1986ರಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಪಕ್ಷ ನಿಷ್ಠೆಗೆ ಹೆಸರಾಗಿರುವ ಅವರು ಬಿಜೆಪಿ ಮಳವಳ್ಳಿ ತಾಲೂಕು ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಕೆಂಪೇಗೌಡ ಯುವ ಬಳಗದ ರಾಜ್ಯಾಧ್ಯಕ್ಷರಾಗಿ ಒಕ್ಕಲಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಒಕ್ಕಲಿಗರ ಪರವಾದ ಹೋರಾಟಗಳಲ್ಲಿ ನಿರಂತರವಾಗಿ ಪಾಲ್ಗೊಂಡು ಪ್ರಬಲವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ನಬಾರ್ಡ್‌ನಿಂದ ಪ್ರಶಂಸೆಗೆ ಒಳಗಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ರೈತರ ಸಮಸ್ಯೆಗಳಿಗೆ ಧ್ವನಿಯಾಗಿ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ.ಬಿಜೆಪಿ ಯುವ ಘಟಕದ ಅಧ್ಯಕ್ಷ ರಘುಗೌಡ ಅವರು ಎಂಟು-ಒಂಬತ್ತು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಒಮ್ಮೆ ಭಾರತೀನಗರ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಇದೀಗ ಮೊದಲ ಬಾರಿಗೆ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧೆಗೆ ಒಲವು ತೋರಿದ್ದು ರಾಜಕೀಯ ಬೆಳವಣಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಹಲವರ ಬೆಂಬಲ ಕೋರುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿರುವ ಪ್ರಭಾವಿ ನಾಯಕರೊಂದಿಗೆ ಉತ್ತಮ ಬಾಂಧವ್ಯ, ಸಂಪರ್ಕವನ್ನಿಟ್ಟುಕೊಂಡು ಚುನಾವಣೆಯಲ್ಲಿ ಆಯ್ಕೆಯಾಗುವುದಕ್ಕೆ ಮುಂದಾಗಿದ್ದಾರೆ.
ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಉಪಾಧ್ಯಕ್ಷ ವೈ.ಎಚ್.ಲೋಹಿತ್‌ಕುಮಾರ್ ಕೂಡ ಒಕ್ಕಲಿಗರ ಸಂಘದ ಚುನಾವಣಾ ಆಕಾಂಕ್ಷಿತರಾಗಿದ್ದಾರೆ. ಮೇಲುಕೋಟೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು ಇದೀಗ ಮದ್ದೂರು ಮಾಂಡವ್ಯ ಐಟಿಐ ಕಾಲೇಜು ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಹಾಗೂ ಬಿಜೆಪಿ ಸಹ ಪ್ರಭಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಅವರ ಬೆಂಬಲದೊಂದಿಗೆ ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸುತ್ತಿರುವ ವೈ.ಎಚ್.ಲೋಹಿತ್‌ಕುಮಾರ್ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಈ.ಸಿ.ನಿಂಗರಾಜ್‌ಗೌಡ ಜೊತೆಗೂಡಿ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಕ್ಕಲಿಗರಿಗೆ ಸಂಬಂಧಿಸಿದ ಹೋರಾಟ, ಕಾರ್ಯಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಮುಂದುವರೆದಿದ್ದಾರೆ.