ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು

| Published : Apr 24 2025, 02:04 AM IST

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಕೆಮಿಕಲ್‌ ಕಂಪನಿಗಳಿಂದ ಹೊರ ಹೊಮ್ಮುತ್ತಿರುವ ವಿಷಗಾಳಿ-ತ್ಯಾಜ್ಯ ದುರ್ನಾತದಿಂದಾಗಿ ಉಸಿರಾಡಲೂ ಕಷ್ಟವಾಗುತ್ತಿದೆ ಎಂದು ದೂರಿ, ಕಡೇಚೂರು ಪ್ರದೇಶದಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವಿದ್ಯಾರ್ಥಿಗಳ ಕುರಿತ ಏ.16 ರಂದು ಪ್ರಕಟಗೊಂಡಿದ್ದ "ಕನ್ನಡಪ್ರಭ " ವರದಿಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಏ.16 ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ತರಬೇತಿ ಕೇಂದ್ರದ ಪ್ರಾಂಶುಪಾಲರು, ಪರಿಸರ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ನೀಡಿದ್ದ ಸಮನ್ಸ್‌ನಂತೆ ಏ.23 ರಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಈ ಕುರಿತು ವಿಚಾರಣೆ ನಡೆಸಿದೆ.

ಕೈಗಾರಿಕಾ ಪ್ರದೇಶ ಹಾಗೂ ಜಿಟಿಸಿಸಿ ಸ್ಥಾಪನೆ ಕುರಿತು ಆಯೋಗಕ್ಕೆ ವಿವರಗಳನ್ನು ಸಲ್ಲಿಸಿರುವ ಪರಿಸರ ಅಧಿಕಾರಿಯು, ಪರಿಸರ ಮಾಲಿನ್ಯ ಕುರಿತು ದೂರುಗಳ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಆದೇಶದಂತೆ ನಡೆಸಿದ ಪರಿಶೀಲನೆ ವೇಳೆ, ತಾಂತ್ರಿಕ ಸಮಿತಿಯ ಶಿಫಾರಸ್ಸಿನಂತೆ, ಪರಿಶೀಲನೆ ವೇಳೆ ಕಂಡುಬಂದ ನ್ಯೂನ್ಯತೆಗಳನ್ನು ಸರಿಪಡಿಸುವಂತೆ ನೋಟೀಸ್‌ ನೀಡಲು ತೀರ್ಮಾನಿಸಲಾಗಿದೆ. ಹಾಗೆಯೇ, ಕಡೇಚೂರು ಕೈಗಾರಿಕಾ ಪ್ರದೇಶವು "ರೆಡ್ ಝೋನ್‌ "ಗೆ ಬರುವುದರಿಂದ ಕಡೇಚೂರು ಜಿಟಿಟಿಸಿಯನ್ನು ಸ್ಥಳಾಂತರಿಸುವ ಕುರಿತು ಶಿಫಾರಸ್ಸು ಮಾಡಲಾಗಿದೆ ಎಂದು ಆಯೋಗಕ್ಕೆ ನೀಡಿದ ವಿವರಣೆಗಳಲ್ಲಿ ತಿಳಿಸಿದ್ದಾರೆ.

ಸದರಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ವಿರುದ್ಧ "ಕನ್ನಡಪ್ರಭ " ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ವಿಷಯವಾಗಿ, ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿ, ಜಂಟಿಸ್ಥಳ ಪರಿಶೀಲನೆ ಕೈಗೊಂಡು ವರದಿ ನೀಡವಂತೆ ಏ.19 ರಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಪರಿವೀಕ್ಷಣೆ ಬಾಕಿಯಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿಗಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನೀಡಿದ ವಿವರಣೆ ವರದಿಯಲ್ಲಿ ತಿಳಿಸಿದ್ದಾರೆ. ಕನ್ನಡಪ್ರಭ ವರದಿ ಆಧರಿಸಿ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಏ.23 ರಂದು ಬೆಂಗಳೂರು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿದ್ದರಿಂದ ಇಲ್ಲಿಗೆ ಆಗಮಿಸಿದ್ದ ಅಧಿಕಾರಿಗಳ ತಂಡದಿಂದ ಮಾಹಿತಿ ಪಡೆಯಲಾಗಿದೆ. ಜಿಟಿಸಿಸಿ ಸ್ಥಳಾಂತರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಡ್‌ ಝೋನ್‌ನಲ್ಲಿ ಮಕ್ಕಳ ತರಬೇತಿ ಕೇಂದ್ರ ಸ್ತಾಪನೆಗೆ ಕೆಐಎಡಿಬಿ ಹೇಗೆ ತೀರ್ಮಾನಿಸಿತ್ತು ? ಈ ಕುರಿತು ನೋಟೀಸ್‌ ನೀಡಲಾಗುವುದು.

-ಶಶಿಧರ್‌, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು.