ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗಾಗಿ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರ ನಿರ್ವಹಿಸಬೇಕಾದ ಹಲವು ಸಮಾಜಮುಖಿ ಕಾರ್ಯಗಳನ್ನು ಸ್ವಯಂ ಆಸಕ್ತಿಯಿಂದ ಕೈಗೆತ್ತಿಕೊಂಡು ಮಾಡುತ್ತಿರುವುದು ಶ್ಲಾಘನೀಯ. ಆಪತ್ಕಾಲದಲ್ಲಿ ಜನರ ನೆರವಿಗೆ ಧಾವಿಸುವ ಉದ್ದೇಶದಿಂದ ಶೌರ್ಯ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿಕೊಂಡು ಸಮಾಜಸೇವೆ ಮಾಡುತ್ತಿರುವುದು ಮೆಚ್ಚುವಂತಹ ಕಾರ್ಯವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ ಸಮಾಜಸೇವೆಯೊಂದಿಗೆ ವಿಪತ್ತು ನಿರ್ವಹಣೆಯಲ್ಲಿ ಸಹ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೊಜನೆಯ ಶೌರ್ಯ ತಂಡಗಳ ಸೇವೆ ಶ್ಲಾಘನೀಯ ಎಂದು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಹೇಳಿದರು.ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಸಕಲೇಶಪುರ ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಗಾಗಿ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರ ನಿರ್ವಹಿಸಬೇಕಾದ ಹಲವು ಸಮಾಜಮುಖಿ ಕಾರ್ಯಗಳನ್ನು ಸ್ವಯಂ ಆಸಕ್ತಿಯಿಂದ ಕೈಗೆತ್ತಿಕೊಂಡು ಮಾಡುತ್ತಿರುವುದು ಶ್ಲಾಘನೀಯ. ಆಪತ್ಕಾಲದಲ್ಲಿ ಜನರ ನೆರವಿಗೆ ಧಾವಿಸುವ ಉದ್ದೇಶದಿಂದ ಶೌರ್ಯ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿಕೊಂಡು ಸಮಾಜಸೇವೆ ಮಾಡುತ್ತಿರುವುದು ಮೆಚ್ಚುವಂತಹ ಕಾರ್ಯವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಶೌರ್ಯ ತಂಡಕ್ಕೆ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಶೌರ್ಯ ತಂಡವು ನಮ್ಮ ಇಲಾಖೆಯ ಒಂದು ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿಯೂ ತಂಡದ ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗುವುದು, ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿ ಜನರ ಪ್ರಾಣ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳು ಶೌರ್ಯ ಸ್ವಯಂಸೇವಕರಿಗೆ ಹೆಚ್ಚಿನ ಆತ್ಮವಿಶ್ವಾಸ ಹಾಗೂ ಕಾರ್ಯಕ್ಷಮತೆಯನ್ನು ನೀಡಲಿವೆ ಎಂದು ಅವರು ಹೇಳಿದರು.ಎನ್‌ಡಿಆರ್‌ಎಫ್ ಕಮಾಂಡರ್ ಶಾಂತಿಲಾಲ್ ಜಟೀಯಾ ಮಾತನಾಡಿ ದೇಶದ ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ,ಯಾವುದೇ ರಾಜ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸುವ ಸಂಸ್ಥೆಗಳಿಲ್ಲ ಆದರೆ ಕರ್ನಾಟಕದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಹಳ್ಳಿ ಹಳ್ಳಿಗಳಲ್ಲಿಯೂ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ನಮ್ಮೊಂದಿಗೆ ಕೈಜೋಡಿಸುತ್ತಿರುವುದು ವಿಶೇಷವಾಗಿದೆ ಹೇಳಿದರು. ಈ ಮಹತ್ವದ ಸಮಾಜಮುಖಿ ಸೇವಾ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು. ಶೌರ್ಯ ಎಂದರೆ ಸಮಯಪ್ರಜ್ಞೆ, ಶೌರ್ಯ ಎಂದರೆ ಶಕ್ತಿ, ಶೌರ್ಯ ಎಂದರೆ ಬದ್ಧತೆ, ಶೌರ್ಯ ಎಂದರೆ ಪ್ರಾಮಾಣಿಕತೆ ಹಾಗೂ ಶೌರ್ಯ ಎಂದರೆ ಸಂಯಮ ಎಂದು ಶೌರ್ಯದ ಮಹತ್ವವನ್ನು ವಿವರಿಸಿದ ಶಾಂತಿಲಾಲ್ ಜಟೀಯಾ, ಶೌರ್ಯ ತಂಡದ ಸ್ವಯಂಸೇವಕರು ತುರ್ತು ಪರಿಸ್ಥಿತಿಗಳಲ್ಲಿ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸುವುದರ ಜೊತೆಗೆ ತಮ್ಮ ಸ್ವರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.ವಿಪತ್ತು ಸಂಭವಿಸಿದ ನಂತರ ಪರಿಹಾರ ಕಾರ್ಯ ನಡೆಸುವುದಕ್ಕಿಂತ ಮುನ್ನೆಚ್ಚರಿಕಾ ಕ್ರಮಗಳು ಅತ್ಯಂತ ಮುಖ್ಯವಾಗಿದ್ದು, ಅಗತ್ಯ ತರಬೇತಿ ಮತ್ತು ಮುಂಜಾಗ್ರತಾ ಕ್ರಮಗಳ ಮೂಲಕ ಜೀವಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವನ್ನು ಕಡಿಮೆ ಮಾಡಲು ಸಾಧ್ಯ. ಆದ್ದರಿಂದ ಶೌರ್ಯ ಸ್ವಯಂಸೇವಕರು ವಿಪತ್ತು ನಿರ್ವಹಣೆಯ ಜೊತೆಗೆ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಎನ್‌ಡಿಆರ್‌ಎಫ್ ತಂಡದ ಅಧಿಕಾರಿಗಳಾದ ಪಾಟೀಲ್ ನಿವೇಶ್, ಆಲ್ಬಿನ್ ಜಗದೀಶ್, ಮಹಾಂತೇಶ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇತ್ತೀಚೆಗೆ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡವರನ್ನು ತುರ್ತು ಸೇವೆಯ ಮೂಲಕ ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಶೌರ್ಯ ತಂಡದ ಹರೀಶ್ ರವರನ್ನು ಎನ್‌ಡಿಆರ್‌ಎಫ್ ಕಮಾಂಡರ್ ಶಾಂತಿಲಾಲ್ ಜಟಿಯಾ ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಲಯನ್ಸ್ ಸೇವಾಸಂಸ್ಥೆಯ ಅಧ್ಯಕ್ಷ ವಿಶ್ವನಾಥ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರೀಶ್ ಮಂಜುನಾಥ್, ಉಮಾನಾಥ ಸುವರ್ಣ, ಮಹೇಶ್ ಹೆತ್ತೂರು, ಜನಜಾಗೃತಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಕಿಶೋರ್, ಮುಖೇಶ್, ಕ್ಷೇತ್ರ ಯೋಜನಾಧಿಕಾರಿ ರಾಜೇಶ್ ಎಂ, ಮೇಲ್ವಿಚಾರಕರಾದ ಚಿರಾಂತ್, ಮೋಹಿನಿ, ಶಿವಾನಂದ, ಕಛೇರಿ ಸಿಬ್ಬಂದಿಯಾದ ಓಂಕಾರಪ್ಪ, ಮನೋಜ್, ಪ್ರತಿಮಾ, ವಿದ್ಯಾ ಮತ್ತು ಸೇವಾಪ್ರತಿನಿಧಿ ಯವರು ಹಾಗೂ ಶೌರ್ಯ ಸ್ವಯಂಸೇವಕರು ಉಪಸ್ಥಿತರಿದ್ದರು.