ಸಾರಾಂಶ
ಕಲುಷಿತ ನೀರು ಕುಡಿದು ಏಳು ಜನರಲ್ಲಿ ವಾಂತಿ-ಭೇದಿ ಜ್ವರದ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸುದ್ದಿ ಹಿನ್ನೆಲೆ ಗ್ರಾಮಕ್ಕೆ ಶಾಸಕ ಡಿ.ಜಿ.ಶಾಂತನಗೌಡ, ಹೊನ್ನಾಳಿ-ಚನ್ನಗಿರಿ ಉಪ-ವಿಭಾಗದ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ತಂಡ ಭೇಟಿ ನೀಡಿತು.
ಹೊನ್ನಾಳಿ : ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಳೆದ ಬುಧವಾರ ಕಲುಷಿತ ನೀರು ಕುಡಿದು ಏಳು ಜನರಲ್ಲಿ ವಾಂತಿ-ಭೇದಿ ಜ್ವರದ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸುದ್ದಿಯು ಪತ್ರಿಕೆಗಳಲ್ಲಿ ಪ್ರಕಟಗೊಂಡ ಹಿನ್ನೆಲೆ ಗ್ರಾಮಕ್ಕೆ ಶಾಸಕ ಡಿ.ಜಿ.ಶಾಂತನಗೌಡ, ಹೊನ್ನಾಳಿ-ಚನ್ನಗಿರಿ ಉಪ-ವಿಭಾಗದ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿತು.
ಗ್ರೇಡ್-2 ತಹಸೀಲ್ದಾರ್ ಸುರೇಶ್ ನಾಯ್ಕ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಗಿರೀಶ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಸೋಮ್ಲಾನಾಯ್ಕ್, ಡಾ. ಜಿ.ಬಿ.ಚಂದ್ರಪ್ಪ, ತಾ.ಪಂ. ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್, ಹೊನ್ನಾಳಿ ಪೊಲೀಸ್ ಠಾಣೆಯ ಪಿಐ ಸುನೀಲ್ ಕುಮಾರ್, ಗ್ರಾಮದಲ್ಲಿ ನೀರಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಮಯದಲ್ಲಿ ಗ್ರಾಮಸ್ಥರು ಅವ್ಯವಸ್ಥೆಗಳನ್ನು ತೆರೆದಿಟ್ಟರು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅದರಲ್ಲಿ ನೀರಿನ ಶುದ್ಧೀಕರಣವಾಗುತ್ತಿಲ್ಲ. ಹೆಸರಿಗಷ್ಟೇ ಅದು ನೀರು ಶುದ್ಧೀಕರಣ ಘಟಕವಾಗಿದೆ. ಅದರಲ್ಲಿ ಶುದ್ಧವಾದ ನೀರು ಸರಿಯಾಗಿ ಬರುತ್ತಿಲ್ಲ. ಗ್ರಾಮದಲ್ಲಿ ಗ್ರಾಪಂ ವತಿಯಿಂದ ಸರಬರಾಜು ಮಾಡಲಾಗುತ್ತಿರುವ ನೀರಿನ ಪೈಪ್ ಲೈನ್‌ಗಳು ಒಡೆದುಹೋಗಿವೆ. ಅದರಲ್ಲಿ ಕಲುಷಿತ ನೀರು ಸೇರಿಕೊಂಡು ಈ ಅವಾಂತರಗಳಿಗೆ ಕಾರಣವಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ಎಂದು ಶಾಸಕರಲ್ಲಿ ಮತ್ತು ಅಧಿಕಾರಿಗಳಲ್ಲಿ ಅಳಲನ್ನು ತೋಡಿಕೊಂಡರು.
ಗ್ರಾಮಸ್ಥರ ಮನವಿಯನ್ನು ಆಲಿಸಿದ ನಂತರ ಶಾಸಕರು, ಗ್ರಾ.ಪಂ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿ ಕೂಡಲೇ ಗ್ರಾಮದ ಸ್ವಚ್ಛತೆಗೆ ಕ್ರಮ ತೆಗೆದುಕೋಳ್ಳುವಂತೆ ಸೂಚಿಸಿದರು. ಈಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೂಡಲೇ ದುರಸ್ತಿಗೊಳಿಸಬೇಕು. ಜೊತೆಗೆ ಗ್ರಾಮಕ್ಕೆ ಇನ್ನೂ 2 ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಮಾತನಾಡಿ, ಕೂಡಲೇ ಸ್ಥಳೀಯ ಗ್ರಾಪಂ ಅಧಿಕಾರಿಗಳು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಗ್ರಾಮದಲ್ಲಿರುವ ರಸ್ತೆ, ಚರಂಡಿಗಳನ್ನು ಸ್ವಚ್ಛಗೋಳಿಸಿ ಬ್ಲೀಚಿಂಗ್ ಪೌಡರ್‌ಗಳನ್ನು ಸಿಂಪಡಿಸಿ ರಸ್ತೆಯ ಇಕ್ಕೆಲಗಳಲ್ಲಿರುವ ಗಿಡಗಳನ್ನು ತೆರವುಗೊಳಿಸಬೇಕು. ಮತ್ತೊಮ್ಮೆ ಇಂಥ ಪ್ರಕರಣ ನಡಯದಂತೆ ನೋಡಿಕೊಳ್ಳಬೇಕು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಧಿಕಾರಿಗಳು, ಗ್ರಾಮದ ಮುಖಂಡ ಎಚ್.ಎ.ಗದ್ದಿಗೇಶ್ ಇತರರು ಇದ್ದರು.