ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ, ಆ ಸಂಬಂಧ ಉಳಿಯಬೇಕಾದರೆ ಲೋಕಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ಬರುವಂತೆ ನೀವೆಲ್ಲಾ ಶ್ರಮಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ಪಟ್ಟಣದ ಎಸ್.ಎನ್.ರೆಸಾರ್ಟ್‌ನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿಯನ್ನು ಮತದಾರರಿಗೆ ಪರಿಚಯಿಸಿ, ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳೊಂದಿಗೆ ಉತ್ತಮ ಸಂಬಂಧವಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬರುತ್ತಿದೆ, ಇದು ಹೀಗೆ ಮುಂದುವರೆಯಬೇಕಾದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಲೀಡ್ ಕೊಡಿಸುವ ಮೂಲಕ ನಮ್ಮಿಬ್ಬರ ಸಂಬಂಧವನ್ನು ಉಳಿಸಿ, ಇಲ್ಲದಿದ್ದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಭಾವನಾತ್ಮ ಟಾಸ್ಕ್ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಸ್ಥಳಿಯರಲ್ಲ, ಹೊರಗಿನವರು ಎಂದು ಅಪಪ್ರಚಾರ ಮಾಡುವ ಜೆಡಿಎಸ್ ನಾಯಕರು, ಕೋಲಾರದಲ್ಲಿ ಸತತವಾಗಿ ೭ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ, ಹಾಲಿ ಸಂಸದ ಎಸ್.ಮುನಿಸ್ವಾಮಿ ಕೋಲಾರದವರೇ. ಇಷ್ಟೇ ಯಾಕೆ ಜೆಡಿಎಸ್ ಅಭ್ಯರ್ಥಿ ಎಂ.ಮಲ್ಲೇಶಬಾಬು ಮೈಸೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದವರು ಈಗ ಕೋಲಾರದಲ್ಲಿ ಸ್ಪರ್ಧಿಸುತ್ತಿಲ್ಲವೇ, ಎಚ್.ಡಿ.ಕುಮಾರಸ್ವಾಮಿ ಹಾಸನ ಜಿಲ್ಲೆಯವರು, ಅಲ್ಲಿಂದ ರಾಮನಗರ, ಚನ್ನಪಟ್ಟಣ ಈಗ ಮಂಡ್ಯದಲ್ಲಿ ನಿಂತಿಲ್ಲವೇ? ಅವರ ಬಗ್ಗೆ ಇಲ್ಲದ ಅಪಸ್ವರ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಯಾಕೆ ಎಂದು ಪ್ರಶ್ನಿಸಿದರು.ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿ, ಕೋಲಾರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ, ಆದರೆ ಕಳೆದ ಬಾರಿ ಪುಲ್ವಾಮಾ ದಾಳಿ ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಗೆದ್ದಿದೆ. ಆದರೆ ಈ ಬಾರಿ ಮರಳಿ ಕೋಲಾರದಲ್ಲಿ ಕೈ ಬಲಗೊಳ್ಳಲಿದೆ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ವಿರುದ್ಧ ಲೋಕಸಭೆಯಲ್ಲಿ ಧ್ವನಿ ಎತ್ತಿ ಅನ್ಯಾಯ ಸರಿಪಡಿಸುವೆ ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರ ವರ್ಷಕ್ಕೆ ೨ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು, ಹತ್ತು ವರ್ಷಗಳಲ್ಲಿ ೨೦ಕೋಟಿ ಉದ್ಯೋಗ ಬರಬೇಕಿತ್ತು,ಬಂತೇ? ಬಿಜೆಪಿ ನಾಯಕರದ್ದು ಬರೀ ಸುಳ್ಳು ಭರವಸೆ. ಕಾಂಗ್ರೆಸ್ ಸರ್ಕಾರದ್ದು ಕೊಟ್ಟ ಮಾತಿನಂತೆ ನಡೆಯುವುದು, ಈ ಬದಲಾವಣೆ ಗಮನಿಸಿ ಮತ ನೀಡಿ, ಪಕ್ಷಕ್ಕಾಗಿ ನಾವು ಶ್ರಮಿಸಿದರೆ ಮುಂದೆ ಪಕ್ಷ ನಮ್ಮನ್ನು ಗುರುತಿಸಿ ಸ್ಥಾನಮಾನ ನೀಡಲಿದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದರು.ಬೂತ್ ಮಟ್ಟದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ನನ್ನ ಗೆಲುವಿನಲ್ಲಿ ಪಾಲುದಾರರಾಗಿ ಎಂದು ಮನವಿ ಮಾಡಿದರು.
ಎಂಎಲ್‌ಸಿ ಅನಿಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ, ಕೆ.ವಿ.ನಾಗರಾಜ್, ಚಂದ್ರುಕುಮಾರ್, ಮುಖಂಡರಾದ ಎಸ್.ಎ.ಪಾರ್ಥಸಾರಥಿ, ಶಂಷುದ್ದಿನ್ ಬಾಬು, ಫರ್ಜಾನ, ಸುಹೇಲ್, ಎಸ್.ಕೆ.ಜಯಣ್ಣ, ಆದಿನಾರಾಯಣ, ಎಚ್.ಕೆ.ನಾರಾಯಣಸ್ವಾಮಿ, ಗೋಪಾಲರೆಡ್ಡಿ, ಅ.ನಾ.ಹರೀಶ್ ಮತ್ತಿತರರು ಇದ್ದರು.