ಸಾರಾಂಶ
ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು ಹಾಗೂ ಮತದಾನ ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವಲ್ಲಿ ತನ್ನದೇ ಆದ ಪಾತ್ರವಹಿಸುತ್ತದೆ.
ನವಲಗುಂದ:
ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಎಲ್ಲು ತಪ್ಪದೇ ಸಂವಿಧಾನ ನೀಡಿರುವ ಮತದಾನದ ಹಕ್ಕು ಚಲಾಯಿಸಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸ್ವರೂಪಾ ಟಿ.ಕೆ. ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು ಹಾಗೂ ಮತದಾನ ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವಲ್ಲಿ ತನ್ನದೇ ಆದ ಪಾತ್ರವಹಿಸುತ್ತದೆ ಎಂದ ಅವರು, ದೇಶ ನಡೆಸಲು ನಿಮ್ಮ ಒಂದು ಮತ ಬಹಳ ಅಮೂಲ್ಯವಾದದ್ದು. ನಿಮಗೆ ಮೂಲಸೌಕರ್ಯ ಒದಗಿಸಲು ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ತಿಳಿಸಿದರು.
ಆನಂತರ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಕಡ್ಡಾಯ ಮತದಾನ ಮಾಡುವ ಘೋಷಣೆಗಳ ಮೂಲಕ ಮತದಾನ ಜಾಗೃತಿ ನಡೆಸಿ ಲಿಂಗರಾಜ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ತಾಪಂ ಇಒ ರಾಜೇಶ ಧನವಾಡ್ಕರ, ತಾಪಂ ಸಹಾಯಕ ನಿರ್ದೇಶಕ ಹರ್ಷವರ್ಧನ ಹಂಚಿನಾಳ, ಜಗದೀಶ ಹಡಪದ, ಬಿಇಒ ಶಿವಾನಂದ ಮಲ್ಲಾಡ, ಎಸ್.ಬಿ. ತೋಟದ, ತೋಟಗಾರಿಕೆ ಇಲಾಖಾ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವಕುಮಾರ ಗುಡಿಮನಿ ಸೇರಿದಂತೆ ಅಧಿಕಾರಿಗಳು, ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ತಾಪಂ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.