ಸಾರಾಂಶ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರು ನಮ್ಮ ಯೋಜನೆ ಜಾರಿಗೆ ಸ್ಪಂದಿಸುವ ಪಕ್ಷಕ್ಕೆ ಮತದಾನ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಹೇಳಿದರು.
ಕನ್ನಡಪ್ರಭ ವಾರ್ತೆ ನರಗುಂದ
ಲೋಕಸಭೆ ಚುನಾವಣಿಯಲ್ಲಿ ಮಲಪ್ರಭೆ ಅಚ್ಚುಕಟ್ಟು ಪ್ರದೇಶ ರೈತರು ನಮ್ಮ ಮಹದಾಯಿ ಹಾಗೂ ಕಳಸಾ -ಬಂಡೂರಿ ನಾಲಾ ಯೋಜನೆ ಜಾರಿಗೆ ಸ್ಪಂದಿಸುವ ಪಕ್ಷಕ್ಕೆ ಮತ ಹಾಕಬೇಕು ಎಂದು ರಾಜ್ಯ ರೈತ ಸಂಘಟನೆ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಹೇಳಿದರು.3167ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಅವರು ಮಾತನಾಡಿದರು. ರೈತರು 9 ವರ್ಷದಿಂದ ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿನ ನೀರನ್ನು ತಂದು ಮಲಪ್ರಭೆ ಜಲಾಶಯಕ್ಕೆ ಜೋಡಣೆ ಮಾಡಬೇಕೆಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರು ನಮ್ಮ ಯೋಜನೆ ಜಾರಿಗೆ ಸ್ಪಂದಿಸುವ ಪಕ್ಷಕ್ಕೆ ಮತದಾನ ಮಾಡಬೇಕು. ಈ ಯೋಜನೆಯ ಹೆಸರು ಹೇಳಿಕೊಂಡು ಕೇಂದ್ರದಲ್ಲಿ 10 ವರ್ಷ ಅಧಿಕಾರಿ ಮಾಡಿದ ಬಿಜೆಪಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಹೇಳಿದರು.
ಈ ಯೋಜನೆ ಜಾರಿಗೆ ಯಾವುದೇ ಕಾನೂನು ತೊಡಕುಗಳು ಇಲ್ಲ. ಆದರೆ, ಬಿಜೆಪಿಯವರು ಈ ಯೋಜನೆ ಜಾರಿಗೆ ಕಾನೂನು ತೊಡಕುಗಳಿವೆ ಎಂದು ಈ ಭಾಗದ ರೈತರಿಗೆ ತಪ್ಪು ಸಂದೇಶ ನೀಡಿ ಅನ್ನದಾತರ ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ಯೋಜನೆ ಜಾರಿಗೆ ಅನ್ಯಾಯ ಮಾಡಿದವರಿಗೆ ಬುದ್ಧಿ ಕಲಿಸುವ ಸಮಯ ಬಂದಿದೆ ಎಂದರು.ವೀರಭಸಪ್ಪ ಹೂಗಾರ, ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಸಿ.ಎಸ್. ಪಾಟೀಲ, ಎ.ಪಿ. ಪಾಟೀಲ, ಸೋಮಲಿಂಗಪ್ಪ ಆಯಿಟ್ಟಿ, ಹನಮಂತ ಸರನಾಯ್ಕರ, ಶಂಕ್ರಪ್ಪ ಜಾಧವ, ಅನಸವ್ವ ಶಿಂದೆ, ನಾಗರತ್ನಾ ಸವಳಭಾವಿ, ಮಲ್ಲೇಶ ಅಣ್ಣಿಗೇರಿ, ವಾಸು ಚವಾಣ, ವಿಜಯಕುಮಾರ ಹೂಗಾರ ಉಪಸ್ಥಿತರಿದ್ದರು.