ಸಾರಾಂಶ
ಮತದಾನ ಜಾಗೃತಿಗೆ ಸಹಿ ಸಂಗ್ರಹ ಅಭಿಯಾನ
ಕನ್ನಡಪ್ರಭ ವಾರ್ತೆ ಅರಸೀಕೆರೆಪ್ರಜಾಪ್ರಭುತ್ವ ಬುನಾದಿಯಲ್ಲಿ ವಿಶ್ವಾಸ ಪಾತ್ರವಾಗಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮತದಾರರಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಭವ್ಯ ಬಲಿಷ್ಠ ಭಾರತ ನಿರ್ಮಾಣ ಮಾಡೋಣ ಎಂದು ಸಹಾಯಕ ಚುನಾವಣಾ ಅಧಿಕಾರಿ ಅರುಣ್ ಕುಮಾರ್ ಹೇಳಿದರು.
ನಗರಸಭೆ ಆವರಣದಲ್ಲಿ ಸ್ವಿಪ್ ಸಮಿತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿಗಾಗಿ ಸಹಿ ಸಂಗ್ರಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕು. ಮತ ಹಾಕುವುದು ನಮ್ಮ ಹಕ್ಕು ಆಗಿದ್ದರೂ ಈ ಹಕ್ಕಿನಿಂದಲೇ ದೇಶದ ಅಭಿವೃದ್ಧಿ ಸಾದ್ಯವಾಗುತ್ತದೆ. ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಏ.26 ರಂದು ನಡೆಯಲಿದೆ. ಈ ಚುನಾವಣೆಗೆ ಪೂರಕವಾಗಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಮತದಾನ ಜಾಗೃತಿ ಮತ್ತು ಅರಿವು ಕಾರ್ಯಕ್ರಮವನ್ನು ಸ್ವಿಪ್ ಸಮಿತಿಯಿಂದ ಆಯೋಜಿಸಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳೊಂದಿಗೆ ಸರ್ಕಾರಿ ಕಚೇರಿ ಸಿಬ್ಬಂದಿ ಭಾಗವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿಯ ಲೋಕಸಭೆ ಚುನಾವಣೆ ಯಶಸ್ವಿಗೊಳಿಸೋಣ. ಆ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸೋಣ’ ಎಂದು ಹೇಳಿದರು.ತಹಸೀಲ್ದಾರ್ ರುಕಿಯಾ ಬೇಗಂ ಮಾತನಾಡಿ, ‘ಸರ್ಕಾರಿ ಕಚೇರಿಗಳ ಸಿಬ್ಬಂದಿಯು ರಜೆ ದಿನಗಳನ್ನು ಬದಿಗೊತ್ತಿ ಮತದಾನ ಜಾಗೃತಿಗೆ ಮುಂದಾಗಬೇಕು. ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ. ಚುನಾವಣಾ ಆಯೋಗವು ಮತದಾರರಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳ ಮೂಲಕ ಅವಕಾಶ ಕಲ್ಪಿಸಿದೆ. ಪ್ರತಿಯೊಬ್ಬರು ಮತದಾನದ ಬಗ್ಗೆ ಅರಿವು ಮೂಡಿಸುವುದರ ಮೂಲಕ ಮತದಾನ ಬಗ್ಗೆ ಪ್ರೋತ್ಸಾಹ ನೀಡಬೇಕು. ಯುವ ಜನತೆಯಲ್ಲಿ ಮತದಾನ ಹಕ್ಕಿನ ಬಗ್ಗೆ ಪ್ರೇರಣೆ ನೀಡಬೇಕು’ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಇಒ ಸುದರ್ಶನ್ ಮಾತನಾಡಿ, ‘ಹಳ್ಳಿಗಳ ದೇಶವಾದ ಭಾರತದಲ್ಲಿ ಎಲ್ಲಾ ಚುನಾವಣೆಗಳು ತನ್ನದೇ ಮಹತ್ವವನ್ನು ಹೊಂದಿವೆ. ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಮ ಪಂಚಾಯಿತಿ ಮತ್ತು ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಏ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜಾಗೃತಿ ಮೂಡಿಸಲು ಮನೆ ಮನೆಗೆ ಚೀಟಿ ಅಂಟಿಸಲಾಗುತ್ತಿದೆ. ಬಲಿಷ್ಠ ಭಾರತ ನಮ್ಮ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರೋತ್ಸಾಹಿಸೋಣ’ ಎಂದು ಹೇಳಿದರು.ಪೌರಾಯುಕ್ತ ಬಸವರಾಜು ಮಾತನಾಡಿ, ‘ನಗರದ ಎಲ್ಲ ವಾರ್ಡ್‌ಗಳ ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಜಾಗೃತಿ ಮಾಡಿಸಲಾಗುತ್ತಿದೆ. ಮತದಾನದ ಹಕ್ಕು ನಮ್ಮದಾಗಿದ್ದು, ನಮ್ಮ ಅಕ್ಕ ಪಕ್ಕದ ಜನತೆ, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಎಲ್ಲರಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸೋಣ’ ಎಂದು ಮನವಿ ಮಾಡಿದರು.
ಸ್ವಿಪ್ ಸಮಿತಿ ಕಾರ್ಯಕ್ರಮ ಆಯೋಜಕ ರಾಜಶೇಖರ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಓಂಕಾರಪ್ಪ, ನಗರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ವಿಷ್ಣುವರ್ಧನ್, ಆರೋಗ್ಯ ನಿರೀಕ್ಷಕ ಲಿಂಗರಾಜು, ನಗರಸಭೆ ಸಿಬ್ಬಂದಿ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.ಅರಸೀಕೆರೆ ನಗರಸಭೆ ಆವರಣದಲ್ಲಿ ಸ್ವಿಪ್ ಸಮಿತಿಯಿಂದ ಆಯೋಜಿಸಲಾಗಿದ್ದ ಮತದಾನ ಜಾಗೃತಿಗಾಗಿ ಸಹಿ ಸಂಗ್ರಹ ಕಾರ್ಯಕ್ರಮ ಉದ್ಘಾಟಿಸಿ ಸಹಾಯಕ ಚುನಾವಣಾಧಿಕಾರಿ ಅರುಣ್ ಕುಮಾರ್ ಮಾತನಾಡಿದರು