ಮೇ 7ರಂದು ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು

| Published : Apr 29 2024, 01:35 AM IST

ಮೇ 7ರಂದು ಮತದಾರರು ಮತಗಟ್ಟೆಗೆ ಬಂದು ಮತ ಚಲಾಯಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿ ತೋಳನಕೆರೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ, ಜಿಲ್ಲಾ ಸ್ವಿಪ್ ಸಮಿತಿ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾರರ ಜಾಗೃತಿ ಅಭಿಯಾನ ನಡೆಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಲೋಕಸಭಾ ಚುನಾವಣೆಯಲ್ಲಿ ಮತದಾರರು ತಪ್ಪದೇ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ. ಆರ್.ಜೆ. ಹೇಳಿದರು.

ಇಲ್ಲಿನ ತೋಳನಕೆರೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ, ಜಿಲ್ಲಾ ಸ್ವಿಪ್ ಸಮಿತಿ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾರರ ಜಾಗೃತಿ ಅಭಿಯಾನದ ಅಂಗವಾಗಿ ನಮ್ಮ ನಡೆ ಮತಗಟ್ಟೆ ಕಡೆ ಘೋಷವಾಕ್ಯದ ಸೈಕ್ಲೋಥಾನ್, ಬೈಕ್ ರ್‍ಯಾಲಿಗೆ ‌ಚಾಲನೆ ನೀಡಿ ಅವರು ಮಾತನಾಡಿದರು.

ಮತದಾರರಿಗೆ ತಮ್ಮ ಮತಗಟ್ಟೆ ಪರಿಚಯಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ 1660 ಮತಗಟ್ಟೆಗಳಲ್ಲಿ ಏಕಕಾಲಕ್ಕೆ ಚುನಾವಣಾ ಪರ್ವ ದೇಶದ ಗರ್ವ ಘೋಷ ವಾಕ್ಯದ ಬಟ್ಟೆಯ ಧ್ವಜಾರೋಹಣ ನೆರವೇರಿಸಲಾಗುತ್ತಿದೆ. ಆ ಮೂಲಕ ಮತದಾರರು ತಮ್ಮ ಮತಗಟ್ಟೆಯ ಮಾಹಿತಿ ಪಡೆದುಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ ಎನ್ನುವುದರ ಕುರಿತು ಬಿಎಲ್‌‌‌ಒಗಳ ಮೂಲಕ ಖಚಿತ ಪಡಿಸಿಕೊಳ್ಳಬಹುದಾಗಿದೆ. ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರು, ವಿಶೇಷಚೇತನರಿಗೆ ಗಾಲಿ ಕುರ್ಚಿ, ಬಿಸಿಲಿರುವ ಕಾರಣ ನೆರಳಿನ ವ್ಯವಸ್ಥೆ, ವೇಟಿಂಗ್ ಹಾಲ್, ಅಂಧ ಮತದಾರರಿಗಾಗಿ ಬ್ರೈಲ್ ಲಿಪಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಲಾಗಿದೆ ಎಂದರು.

ಸಕ್ಷಮ ಅಪ್ಲಿಕೇಷನ್ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು. ಮಹಿಳೆಯರು, ಬಾಣಂತಿಯರಿಗಾಗಿ ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರಬೇಕು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕ್ಯೂಆರ್‌ ಕೋಡ್‌

ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ಮತದಾರರ ಚೀಟಿಯಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಗೂಗಲ್ ಮ್ಯಾಪ್ ನಿಂದ ತಮ್ಮ ಮತಗಟ್ಟೆ ಎಲ್ಲಿದೆ ಎಂಬುದರ ಮಾಹಿತಿ ಪಡೆಯಬಹುದು.

ಸ್ವೀಪ್ ಸಮಿತಿಯ ಚುನಾವಣೆ ಗೀತೆಯು ಎಲ್ಲೆಡೆ ವೈರಲ್ ಆಗುತ್ತಿದೆ‌. ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಿ ವಿಜಿಲ್ ಅಪ್ಲಿಕೇಶನ್ ಮೂಲಕ ಸಲ್ಲಿಸಬಹುದಾಗಿದೆ.

ಜಿಲ್ಲಾ ಸ್ವಿಪ್ ಸಮಿತಿ ನೋಡಲ್ ಅಧಿಕಾರಿ, ಜಿಪಂ ಸಿಇಒ ಸ್ವರೂಪ್ ಟಿ.ಕೆ. ಮಾತನಾಡಿ, ಮತದಾನ ನಿಮ್ಮ ಮೂಲಭೂತ ಕರ್ತವ್ಯ. ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಮತ ಚಲಾಯಿಸಬೇಕು. ಮೇ 7ರಂದು ಮತದಾನ ದಿನಾಂಕ ನಿಗದಿಯಾಗಿದೆ ಎಂದರು.

ಸಹಾಯಕ ಚುನಾವಣಾಧಿಕಾರಿ, ಮಹಾನಗರ ಪಾಲಿಕೆಯ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಪಾಲಿಕೆಯ ವ್ಯಾಪ್ತಿಯಲ್ಲಿನ ಮತಗಟ್ಟೆ ಕೇಂದ್ರಗಳಲ್ಲಿ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಎಲ್ಲರೂ ತಪ್ಪದೇ ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಆರ್ ಜೆ ಮಾಧುರಿ ಮಾತನಾಡಿ, ರೆಡಿಯೋ ಕಾರ್ಯಕ್ರಮಗಳ ಮೂಲಕ ಸಹ ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ.

ತೋಳನಕೆರೆಯಿಂದ ಆರಂಭಗೊಂಡ ಮತದಾರರ ಜಾಗೃತಿ ಬೈಕ್ ಮತ್ತು ಸೈಕಲ್ ಜಾಥಾವು ಕಿಮ್ಸ್ ಆಸ್ಪತ್ರೆಗೆ ತಲುಪಿ ಕೊನೆಗೊಂಡಿತು.

ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ‌ ಮಡಿವಾಳರ, ಕಿಮ್ಸ್ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ಆರ್. ಅಂಬಿಗೇರ, ಪಾಲಿಕೆಯ ವಲಯ ಆಯುಕ್ತ ಗಿರೀಶ ತಳವಾರ, ಘನತ್ಯಾಜ್ಯ ವಸ್ತು ನಿರ್ವಹಣಾ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ, ಸಹಾಯಕ ಅಭಿಯಂತರ ಅಭಿಷೇಕ, ಕಾರ್ಯನಿರ್ವಾಹಕ ಅಭಿಯಂತರ ವಿಠ್ಠಲ ತುಬಾಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪೌರ ಕಾರ್ಮಿಕರು, ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.ಗಮನ‌ ಸೆಳೆದ ನೃತ್ಯ

ಜಿಲ್ಲಾ ಸ್ವೀಪ್ ಸಮಿತಿಯಿಂದ ರಚಿಸಲಾಗಿರುವ ''''ಓಟು ಓಟು ನಿಮಗಾಗಿ ಓಟು, ಓಟು ಓಟು ದೇಶಕ್ಕಾಗಿ ಓಟು'''' ಎಂಬ ಚುನಾವಣಾ ಗೀತೆಗೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಇದು ನೋಡುಗರ ಗಮನ ಸೆಳೆದರು.

ಗೀತೆಯ ಮೂಲಕ ಚುನಾವಣಾ ಆಯೋಗದ ಅಪ್ಲಿಕೇಶನ್, 1950, ಮತಗಟ್ಟೆಯ ಸೌಲಭ್ಯಗಳ ಬಗ್ಗೆ ಅಚ್ಚುಕಟ್ಟಾಗಿ ತಿಳಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಸೆಂಟ್ ಅಂಥೋನಿ ಶಾಲೆಗೆ ಭೇಟಿ ನೀಡಿ, ಪಿಂಕ್ ಸಖಿ ಬೂತ್ ( ಮತಗಟ್ಟೆ -95) ಅನಾವರಣಗೊಳಿಸಿದರು. ಹುಬ್ಬಳ್ಳಿಯ ಕಿಮ್ಸ್ ಕಾಲೇಜು ಆವರಣದ 109 ನೇ ಸಂಖ್ಯೆ ಮತಗಟ್ಟೆಯಲ್ಲಿ ಧ್ವಜಾರೋಹಣವನ್ನು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ನೆರವೇರಿಸಿದರು.