ಸಾರಾಂಶ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ಕಳೆದ ವಿಧಾನಸಭೆ-ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಮತಕಳವು ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ತಾಂತ್ರಿಕ ಸಮಸ್ಯೆ ಎದುರಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಆಯಾ ಕ್ಷೇತ್ರಗಳ ಸ್ಥಳೀಯ ಚುನಾವಣಾಧಿಕಾರಿ ಅಥವಾ ಕೇಂದ್ರ ಚುನಾವಣಾ ಆಯೋಗ ಅಧಿಕೃತ ದೂರು ನೀಡದೆ ಚುನಾವಣಾ ಅಕ್ರಮಗಳ ಕುರಿತು ತನಿಖೆಗೆ ಕಾನೂತ್ಮಾಕವಾಗಿ ಪೊಲೀಸರಿಗೆ ಅಧಿಕಾರ ಇಲ್ಲ. ಹೀಗಾಗಿ ರಾಜ್ಯದಲ್ಲಿ ಮತ ಕಳವು ಆರೋಪ ಕುರಿತು ಸವಿಸ್ತಾರ ತನಿಖೆಗೆ ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ ಎನ್ನಲಾಗಿದೆ.
ರಾಜ್ಯದ ವಿಧಾನಸಭಾ ಚುನಾವಣೆಯ ವೇಳೆ ಕಲಬುರಗಿ ಜಿಲ್ಲೆಯ ಮೂರು ಹಾಗೂ ಬೆಂಗಳೂರಿನ ಒಂದು ಕ್ಷೇತ್ರದಲ್ಲಿ ಮತ ಕಳವು ಯತ್ನ ನಡೆದಿರುವುದು ಎಸ್ಐಟಿ ತನಿಖೆಯಲ್ಲಿ ಪತ್ತೆಯಾಗಿದೆ. ಅದೇ ರೀತಿ ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ 1.05 ಲಕ್ಷ ಹೊಸ ಮತದಾರರು ಸೃಷ್ಟಿಯಾಗಿದ್ದರು ಎಂದು ಆರೋಪಿಸಲಾಗಿತ್ತು.ಈ ಮತಕಳವು ಜಾಲದ ಶೋಧನೆಗೆ ಎಸ್‌ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದರು. ಆದರೆ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಆಳಂದ ಕ್ಷೇತ್ರ ಮತಕಳವು ಯತ್ನ ಪ್ರಕರಣಕ್ಕೆ ಮಾತ್ರ ಸೀಮಿತವಾಗಿ ತನಿಖೆಗೆ ಎಸ್‌ಐಟಿ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಆಂಧ್ರಪ್ರದೇಶದ ಪ್ರಕರಣ:
2024ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆ ಆಂಧ್ರಪ್ರದೇಶದ ಪರ್ಚುರು ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಆರೋಪ ಕೇಳಿ ಬಂದಿತ್ತು. ಆಂಧ್ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲಗು ದೇಶಂ ಪಕ್ಷ, ಪರ್ಚುರು ಕ್ಷೇತ್ರದ ಅಕ್ರಮದ ಕುರಿತು ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚುನಾವಣಾ ಆಯೋಗ, ತನ್ನ ಕಾರ್ಯವ್ಯಾಪ್ತಿಗೆ ರಾಜ್ಯ ಸರ್ಕಾರ ಅತಿಕ್ರಮ ಪ್ರವೇಶಿಸಿದೆ ಎಂದು ಹೈಕೋರ್ಟ್‌ಗೆ ಮೊರೆ ಹೋಗಿತ್ತು. ಕೊನೆಗೆ ಎಸ್‌ಐಟಿಯನ್ನು ಆಂಧ್ರಪ್ರದೇಶ ಸರ್ಕಾರ ರದ್ದುಪಡಿಸಿತ್ತು.
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಪ್ರಕ್ರಿಯೆ ನಡೆಸುವ ಸಂಪೂರ್ಣ ಅಧಿಕಾರವು ಚುನಾವಣಾ ಆಯೋಗಕ್ಕಿದ್ದು, ಆಯೋಗವು ಸ್ವಾಯತ್ತ ಸಂಸ್ಥೆಯಾಗಿದೆ. ಹೀಗಾಗಿ ಚುನಾವಣಾ ಅಕ್ರಮಗಳ ಕುರಿತು ಆಯೋಗ ಅಥವಾ ಆ ಕ್ಷೇತ್ರದ ಆಯೋಗದ ಪ್ರತಿನಿಧಿಯಾಗಿ ಕೆಲಸ ಮಾಡುವ ಚುನಾವಣಾಧಿಕಾರಿ ದೂರು ನೀಡಬೇಕು. ಇಲ್ಲಿ ಮೂರನೇ ವ್ಯಕ್ತಿ ದೂರು ಆಧರಿಸಿ ಚುನಾವಣಾ ಅಕ್ರಮಗಳ ಕುರಿತು ತನಿಖೆ ನಡೆಸುವ ಅಧಿಕಾರಕ್ಕೆ ಪೊಲೀಸರಿಗೆ ಇಲ್ಲ ಹಾಗೂ ಸ್ವತಂತ್ರವಾಗಿ ತನಿಖೆಗೆ ಆದೇಶಿಸುವ ಅಧಿಕಾರವು ಸರ್ಕಾರಕ್ಕೆ ಇಲ್ಲ ಎಂದು ಆಂಧ್ರಪ್ರದೇಶದ ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ಎಸ್‌ಐಟಿ ತಂದಿದೆ ಎಂದು ಮೂಲಗಳು ಹೇಳಿವೆ.
ಎಲ್ಲೆಲ್ಲಿ ಮತಕಳವು ಶಂಕೆ?:
ರಾಜ್ಯದಲ್ಲಿ ಕಲಬುರಗಿ ಜಿಲ್ಲೆಯ ಆಳಂದ, ಕಲಬುರಗಿ ಉತ್ತರ ಹಾಗೂ ದಕ್ಷಿಣ ಹಾಗೂ ಬೆಂಗಳೂರಿನ ಶಿವಾಜಿನಗರ ಕ್ಷೇತ್ರ ಸೇರಿ ನಾಲ್ಕು ಕ್ಷೇತ್ರಗಳಲ್ಲಿ ಮತಕಳವು ನಡೆದಿರುವ ಬಗ್ಗೆ ಎಸ್‌ಐಟಿ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದೆ. ಈ ಪೈಕಿ ಆಳಂದ ಕ್ಷೇತ್ರದ ಮತಕಳವು ಯತ್ನಕ್ಕೆ ಪೂರಕ ಸಾಕ್ಷ್ಯಗಳು ಸಿಕ್ಕಿವೆ. ಅದೇ ರೀತಿ ಶಿವಾಜಿನಗರ ಕ್ಷೇತ್ರದಲ್ಲಿ ಚುನಾವಣೆ ವೇಳೆ ಮತ ರದ್ದತಿಗೆ 27 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 8 ಸಾವಿರ ಮತಗಳು ರದ್ದಾಗಿದ್ದವು. ಹಾಗೆಯೇ ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ 1.05 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದವು ಎಂದು ಗಂಭೀರ ಸ್ವರೂಪದ ಆರೋಪ ಕೇಳಿ ಬಂದಿದೆ. ಮಹದೇವಪುರ ಹಾಗೂ ಅಳಂದ ಕ್ಷೇತ್ರಗಳ ಪ್ರಕರಣಗಳ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದನಿ ಎತ್ತಿದ್ದರು.
ಆಳಂದ ತನಿಖೆ ಅಡ್ಡಿ ಇಲ್ಲ
ಆಳಂದ ಕ್ಷೇತ್ರದ ಮತಕಳವು ಯತ್ನ ಆರೋಪ ಸಂಬಂಧ ಚುನಾವಣೆ ವೇಳೆಯೇ ಸ್ಥಳೀಯ ಠಾಣೆಯಲ್ಲಿ ಆ ಕ್ಷೇತ್ರದ ಚುನಾವಣಾಧಿಕಾರಿ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿತ್ತು. ಹೀಗಾಗಿ ಆ ಎಫ್‌ಐಆರ್ ಆಧರಿಸಿ ತನಿಖೆಗೆ ಯಾವುದೇ ಕಾನೂನು ತೊಡಕು ಎದುರಾಗಿಲ್ಲ. ಆದರೆ ಹೊಸದಾಗಿ ಎಫ್‌ಐಆರ್‌ಗೆ ತಾಂತ್ರಿಕ ಅಡಚಣೆ ಇದೆ ಎಂದು ಮೂಲಗಳು ಹೇಳಿವೆ.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))