ಸಾರಾಂಶ
- ಸಣ್ಣಪುಟ್ಟ ಲೋಪದೋಷ ತಕ್ಷಣ ಪರಿಹಾರ, ಚುನಾವಣೆ ಬಹಿಷ್ಕರಿಸಿದ್ದವರ ಮನವೊಲಿಕೆ ।
- - - ಕನ್ನಡಪ್ರಭ ವಾರ್ತೆ, ದಾವಣಗೆರೆದಾವಣಗೆರೆ ಜಿಲ್ಲಾದ್ಯಂತ ಬೆಳಗ್ಗೆ 7 ಗಂಟೆಯಿಂದ ಶುರುವಾದ ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನಕ್ಕೆ ಆರಂಭದಲ್ಲಿ ನಗರ, ಗ್ರಾಮೀಣ ಭಾಗದಲ್ಲಿ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ನಗರ, ಜಿಲ್ಲಾದ್ಯಂತ ಕೆಲ ಮತಗಟ್ಟೆಗಳಲ್ಲಿ ತಾಂತ್ರಿಕ ದೋಷದ ಕಾರಣಕ್ಕೆ, ಕೆಲ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಿದ್ದಕ್ಕೆ ಚಾಲೆಂಜಿಂಗ್ ಮತದಾನಕ್ಕೆ ಅವಕಾಶ ನೀಡುವಂತೆ ನಾನಾ ಕಾರಣಕ್ಕೆ ಮತದಾನಕ್ಕೆ ಅಡ್ಡಿಯಾಗಿದ್ದ ಸಣ್ಣಪುಟ್ಟ ಸಂಗತಿ ಹೊರತುಪಡಿಸಿದರೆ ಕಡೆಯ ಕ್ಷಣದವರೆಗೂ ಚುನಾವಣೆ ಸರಾಗವಾಗಿ ನಡೆಯಿತು.ನಗರದ ಬಕ್ಕೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ಬೆಳಗ್ಗೆ ಮತದಾನ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ, ಜಿಲ್ಲಾದ್ಯಂತ ಶಾಂತಿಯುತವಾಗಿ, ಯಶಸ್ವಿಯಾಗಿಯೇ ಚುನಾವಣೆ ಆರಂಭವಾಗಿದೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಶೇ.9.35ರಷ್ಟು ಮತದಾನವಾಗಿತ್ತು. ನವಮತದಾರರು, ಮಹಿಳೆಯರು, ಪುರುಷರು, ಹಿರಿಯ ನಾಗರಿಕರು, ವಿಶೇಷಚೇತನರು ಸೇರಿ ಉತ್ಸಾಹದಿಂದ ಮತದಾರರು ಮತಗಟ್ಟೆಗೆ ಬಂದು, ಮತ ಚಲಾಯಿಸುತ್ತಿದ್ದಾರೆ ಎಂದರು.
ದಾಖಲೆ ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಮತದಾನವಾಗುವ ವಿಶ್ವಾಸವಿದೆ. ಜಿಲ್ಲಾದ್ಯಂತ ಪೂರ್ಣ ಪ್ರಮಾಣದಲ್ಲಿ ಶಾಂತಿಯುತ ವಾತಾವರಣವಿದೆ. ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 6.30ಕ್ಕೆ ಕೆಲವು ಕಡೆ ಕಂಟ್ರೋಲ್ ಯೂನಿಟ್‌ನಲ್ಲಿ ಬಟನ್ ಕೆಲಸ ಮಾಡುತ್ತಿಲ್ಲವೆಂಬ ಮಾಹಿತಿ ಬಂದಿತ್ತು. ಸುಮಾರು 5 ಕಂಟ್ರೋಲ್ ಯೂನಿಟ್ ಹಾಗೂ 3 ಬ್ಯಾಲೆಟ್ ಯೂನಿಟ್‌ಗಳನ್ನು ಬದಲಾವಣೆ ಮಾಡಲಾಯಿತು ಎಂದು ತಿಳಿಸಿದರು.ಕೆಲ ವಿ.ವಿ. ಪ್ಯಾಟ್ ಯಂತ್ರದಲ್ಲಿ ದೋಷ ಕಂಡುಬಂದಿತ್ತು. ಅದನ್ನೂ ಬದಲಾವಣೆ ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಮತದಾನ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ಎಲ್ಲ ತಪಾಸಣೆ ಮಾಡಿ, ತಾಂತ್ರಿಕ ದೋಷ ಸರಿಪಡಿಸಿದ್ದೇವೆ. ದಾವಣಗೆರೆ ತಾಲೂಕು ಹಾಗೂ ಚನ್ನಗಿರಿ, ಮಾಯಕೊಂಡದ ಕೆಲವೆಡೆ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಗ್ರಾಮಸ್ಥರು ಹೇಳಿದ್ದರು. ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ, ಮತದಾನ ಮಾಡುವಂತೆ ಮಾಡಿದ್ದಾರೆ. ಈ ಸಲ ಶೇ.80ಕ್ಕಿಂತ ಹೆಚ್ಚು ಮತದಾನವಾಗುವ ನಿರೀಕ್ಷೆ ಇದೆ. ಪ್ರತಿಯೊಬ್ಬ ನಾಗರಿಕರು ತಮ್ಮ ಮತ ಚಲಾಯಿಸಬೇಕು. ನಾನೂ ಕೂಡ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದು ಹೇಳಿದರು.
ದಾವಣಗೆರೆ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಬಕ್ಕೇಶ್ವರ ಶಾಲೆ ಮತಗಟ್ಟೆಯಲ್ಲಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಮಾಗನೂರು ಬಸಪ್ಪ ಶಾಲೆ ಮತಗಟ್ಟೆಯಲ್ಲಿ ಹಾಗೂ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಸೇಂಟ್ ಜಾನ್ಸ್ ಶಾಲೆ ಮತಗಟ್ಟೆ ಕೇಂದ್ರದಲ್ಲಿ ತಮ್ಮ ಮತಹಕ್ಕು ಚಲಾಯಿಸಿದರು.- - -