ಸಾರಾಂಶ
ಬಳ್ಳಾರಿ: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯ ಮತದಾನ ಸೋಮವಾರ (ಜೂ. 3ರಂದು) ನಡೆಯಲಿದೆ. ಈ ಬಾರಿ ಪದವೀಧರರು ಯಾರ ಪರ ಹಕ್ಕು ಚಲಾಯಿಸಲಿದ್ದಾರೆ ಎಂಬ ಕುತೂಹಲವಿದೆ.
ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ 18,768 ಮತಗಳನ್ನು ಪಡೆದು ಜಯ ಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಬಿ. ಶ್ರೀನಿವಾಸ್ 18,447 ಮತಗಳನ್ನು ಪಡೆದಿದ್ದರು.ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 19 ಜನರು ಅಖಾಡದಲ್ಲಿದ್ದಾರೆ. ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್, ಬಿಜೆಪಿಯ ಅಮರನಾಥ ಪಾಟೀಲ್, ಬಳ್ಳಾರಿಯ ಪಕ್ಷೇತರ ಅಭ್ಯರ್ಥಿ (ಕಾಂಗ್ರೆಸ್ ಬಂಡಾಯ) ನಾರಾ ಪ್ರತಾಪ ರೆಡ್ಡಿ ನಡುವೆ ತೀವ್ರ ಪೈಪೋಟಿ ಕಂಡು ಬಂದಿದೆ. ಬಳ್ಳಾರಿ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಸೇರಿದಂತೆ ಈಶಾನ್ಯ ಪದವೀಧರ ಕ್ಷೇತ್ರ ಒಟ್ಟು ಏಳು ಜಿಲ್ಲೆಗಳನ್ನೊಳಗೊಂಡಿದೆ.
ಈ ಬಾರಿ ಕ್ಷೇತ್ರದಲ್ಲಿ 1,56,623 ಮತದಾರರಿದ್ದಾರೆ. ಈ ಪೈಕಿ 99,121 ಪುರುಷರು, 57,483 ಮಹಿಳೆಯರು ಹಾಗೂ 19 ಇತರ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ವರೆಗೆ ಆರು ಬಾರಿ ಜರುಗಿದ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಮೂರು ಬಾರಿ (1988, 1994, 2000) ಬಿಜೆಪಿಯ ಡಾ. ಎಂ.ಆರ್. ತಂಗಾ ಗೆಲುವು ಸಾಧಿಸಿದ್ದಾರೆ. 2006ರಲ್ಲಿ ಮನೋಹರ ಮಸ್ಕಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. 2012ರಲ್ಲಿ ಅಮರನಾಥ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಕಳೆದ 2018ರಲ್ಲಿ ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್ ಗೆಲುವು ಪಡೆದಿದ್ದರು. ಈ ವರೆಗೆ ಜಯ ಗಳಿಸಿದವರ ಪೈಕಿ ಎಲ್ಲರೂ ಬೀದರ್, ಕಲಬುರಗಿ ಜಿಲ್ಲೆಯವರಾಗಿದ್ದಾರೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 41 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ನ 26, ಬಿಜೆಪಿಯ 10, ಜೆಡಿಎಸ್‌ನ 3, ಇಬ್ಬರು ಪಕ್ಷೇತರರಿದ್ದಾರೆ.ಜೂ. 6ರಂದು ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಯ ರಾಜಕೀಯ ಭವಿಷ್ಯ ಗೊತ್ತಾಗಲಿದೆ.
ಸಜ್ಜಾದ ಸಿಬ್ಬಂದಿ: ಪದವೀಧರ ಕ್ಷೇತ್ರ ಚುನಾವಣೆಯ ಮತದಾನದ ಸಾಮಗ್ರಿಗಳೊಂದಿಗೆ ಸಿಬ್ಬಂದಿ ಸಜ್ಜಾಗಿದ್ದಾರೆ. ಸೋಮವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ಪ್ರಕ್ರಿಯೆ ಜರುಗಲಿದೆ. ಮತದಾನ ಸುಗಮವಾಗಿ ನಡೆಯಲು ಜಿಲ್ಲೆಯಲ್ಲಿ 24 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಮತಕೇಂದ್ರಗಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಭಾನುವಾರ ಅಗತ್ಯ ಸಾಮಗ್ರಿಗಳೊಂದಿಗೆ ತೆರಳಿದರು.ನಗರದಲ್ಲಿರುವ ಏಳು ಬೂತ್‌ಗಳಿಗೆ ಮಸ್ಟರಿಂಗ್ ಕಾರ್ಯ ನಡೆಯಿತು. ಇದೇ ಮೊದಲ ಬಾರಿಗೆ ಹೋಬಳಿಗಳಲ್ಲೂ ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಮತದಾನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಪೆಟ್ಟಿಗೆಗಳನ್ನು ಜೂ. 6ರಂದು ಕಲಬುರಗಿಗೆ ಕಳುಹಿಸಿಕೊಡಲಾಗುವುದು ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದ್ದಾರೆ.