ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಜಗದೀಶ ಶೆಟ್ಟರಗೆ ಮತ ನೀಡಿದರೇ ಪ್ರಧಾನಿ ಮೋದಿಯವರಿಗೆ ನೀಡಿದಂತೆ. ಶೆಟ್ಟರ್ ಆಯ್ಕೆ ಮಾಡಿದರೇ ನಮ್ಮ ಬೆಳಗಾವಿ ಜಿಲ್ಲೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ಅರಬಾವಿ, ಕಲ್ಲೊಳ್ಳಿ, ನಾಗನೂರ, ಮೂಡಲಗಿ ಪಟ್ಟಣಗಳಿಗೆ ಶನಿವಾರ ತೆರಳಿ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಶೆಟ್ಟರಗೆ ತಾವೆಲ್ಲರೂ ಮತ ನೀಡುವ ಮೂಲಕ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.ಕೆಲವರು ಈ ಚುನಾವಣೆಯಲ್ಲಿ ಮತದಾರರಿಗೆ ಕೆಲವು ಆಮಿಷಗಳನ್ನು ಒಡ್ಡುತ್ತಿದ್ದಾರೆ. ಬಹಳವೆಂದರೇ ಮೇ.7ರತನಕ ನಿಮ್ಮನ್ನು ಕಾಳಜಿ ಮಾಡಬಹುದು. ಚುನಾವಣೆ ಮುಗಿದ ಬಳಿಕ ನಿಮ್ಮನ್ನು ಕಡೆಗಣಿಸಿ ಹೋಗುತ್ತಾರೆ. ನಾನು ನಿಮ್ಮ ಕಷ್ಟ, ಸುಖದಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದೇನೆ. ನಿಮ್ಮ ಸಮಸ್ಯೆಗಳನ್ನು ನಾನು ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.ಭೀಕರ ಬರಗಾಲದ ಮಧ್ಯೆಯೂ ಕುಡಿಯುವ ನೀರಿನ ಬವಣೆ ನೀಗಿಸಲು ಈಗಾಗಲೇ ಹಳ್ಳ ಮತ್ತು ಕಿನಾಲ್‌ಗಳಿಗೆ ನೀರನ್ನು ಹರಿಸಿದ್ದೇನೆ. ರಾಜ್ಯಾದ್ಯಂತ ಕುಡಿಯಲು ನೀರು ಸಿಗುತ್ತಿಲ್ಲ. ಮುಂದೊಂದು ದಿನ ನೀರು ಬಂಗಾರಕ್ಕಿಂತ ಹೆಚ್ಚು ಬೆಲೆ ಸಿಗಲಿದೆ. ನೀರಿಗೆ ಮಹತ್ವ ಎಷ್ಟಿದೇ ಎಂಬುವುದು ನಿಮಗೆ ಈಗಾಗಲೇ ಅರ್ಥವಾಗಿದೆ ಎಂದು ವಿವರಿಸಿದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗಲಿಲ್ಲ. ಆದರೂ ನನಗೆ ರಾಜ್ಯದಲ್ಲಿಯೇ 4ನೇ ಸ್ಥಾನದ ಮುನ್ನಡೇ ಮತಗಳಿಂದ ಆಯ್ಕೆ ಮಾಡಿರುವ ನಿಮ್ಮಗಳ ಋಣಭಾರ ನನ್ನ ಮೇಲಿದೆ. ಈಗ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದೇನೆ. ಅತೀ ಹೆಚ್ಚಿನ ಮತಗಳನ್ನು ಶೆಟ್ಟರ್ ಕ್ರಮ ಸಂಖ್ಯೆ 02 ಕಮಲ ಗುರುತಿನ ಚಿತ್ರಕ್ಕೆ ನೀಡಿ ಆರಿಸಿ ತರಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ಅರಬಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜನ ಪ್ರತಿನಿಧಿಗಳು, ವಿವಿಧ ಸಮಾಜಗಳ ಮುಖಂಡರು, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದೇಶದ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಉತ್ತಮ ಆಯ್ಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಭಾರತವು ವಿಶ್ವಮಾನ್ಯವಾಗಿದೆ. ಶಕ್ತಿ ಶಾಲಿ ಭಾರತವಾಗುತ್ತಿದೆ. ವಿಶ್ವದಲ್ಲೇ ಪ್ರಗತಿಶೀಲ ರಾಷ್ಟ್ರವಾಗಿ ಹೊರಹೊಮ್ಮುತ್ತಿರುವ ಈ ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿ ಆಗಬೇಕೆನ್ನುವುದು ದೇಶದ ನಾಗರೀಕರ ಆಶಯವಾಗಿದೆ. ಈ ದಿಸೆಯಲ್ಲಿ ಯಾವ ಆಮಿಷಗಳಿಗೂ ಬಲಿಯಾಗದೇ ಸಮರ್ಥ, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಬೆಂಬಲಿಸಿ.-ಬಾಲಚಂದ್ರ ಜಾರಕಿಹೊಳಿ,
ಶಾಸಕ.