ಪ್ರಜಾಪ್ರಭುತ್ವದ ಶಕ್ತಿ ಕಾನೂನು ಮತ್ತು ಜನರ ವಿಶ್ವಾಸದ ಮೇಲೆ ನಿಂತಿದ್ದು, ಆ ವಿಶ್ವಾಸ ಉಳಿಸಿಕೊಳ್ಳುವ ಪ್ರಮುಖ ಸಾಧನವೇ ಮತದಾನ ಆಗಿದೆ
ಕೊಪ್ಪಳ: ಮತದಾನ ಕೇವಲ ಹಕ್ಕಲ್ಲ, ಅದು ನಮ್ಮ ಸಂವಿಧಾನಾತ್ಮಕ ಕರ್ತವ್ಯವಾಗಿದೆ ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸರಸ್ವತಿ ದೇವಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಭಾರತ ಚುನಾವಣಾ ಆಯೋಗ,ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ, ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವದ ಶಕ್ತಿ ಕಾನೂನು ಮತ್ತು ಜನರ ವಿಶ್ವಾಸದ ಮೇಲೆ ನಿಂತಿದ್ದು, ಆ ವಿಶ್ವಾಸ ಉಳಿಸಿಕೊಳ್ಳುವ ಪ್ರಮುಖ ಸಾಧನವೇ ಮತದಾನ ಆಗಿದೆ. ಹಾಗಾಗಿ ದೇಶದ ಪ್ರತಿಯೊಬ್ಬ ಅರ್ಹ ನಾಗರಿಕ ಮತದಾನ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕು. ಮತದಾನ ಪ್ರಕ್ರಿಯೆಯು ಪವಿತ್ರವಾಗಿದ್ದು, ಇದು ನಮಗೆ ಸಂವಿಧಾನ ನೀಡಿದ ಅತ್ಯಂತ ಮಹತ್ವದ ಹಕ್ಕಾಗಿದೆ ಎಂದರು.
ಮಹಿಳೆಯರು, ಯುವಕರು ಹಾಗೂ ಮೊದಲ ಬಾರಿ ಮತದಾನ ಮಾಡುವ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾನದ ಮೂಲಕವೇ ನ್ಯಾಯ, ಸಮಾನತೆ ಮತ್ತು ಸಂವಿಧಾನಾತ್ಮಕ ಮೌಲ್ಯ ಬಲಪಡಿಸಬಹುದು ಎಂದು ಹೇಳಿದರು.ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯ ಮತದಾನವಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ತಮ್ಮ ಅಮೂಲ್ಯ ಮತದಾನ ಹಕ್ಕನ್ನು ಜವಾಬ್ದಾರಿಯಿಂದ ಬಳಸಬೇಕು. ಮತದಾನವು ನಮ್ಮ ಸಂವಿಧಾನಾತ್ಮಕ ಕರ್ತವ್ಯ ಆಗಿದೆ. ಯುವಕರು ಹಾಗೂ ಮೊದಲ ಬಾರಿ ಮತದಾನ ಮಾಡುವ ಹೊಸ ಮತದಾರರು ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬಲಿಷ್ಠ ಮತ್ತು ಪಾರದರ್ಶಕ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.
ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಎಸ್.ಮಾಲಗಿತ್ತಿ ಮತದಾರರ ಕುರಿತು ಪ್ರತಿಜ್ಞಾವಿಧಿ ಬೋಧನೆ ಮಾಡಿದರು.ಮತದಾರರ ಜಾಗೃತಿ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್‌ಓ, ಸುಪರವೈಜರ್, ಇಎಲ್ಸಿ ಸಂಯೋಜಕರು ಹಾಗೂ ಮಕ್ಕಳ ಸಂಸತ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಇತರೆ ಸಾಧಕರಿಗೆ ಸನ್ಮಾನಿಸಲಾಯಿತು. ಹೊಸದಾಗಿ ನೋಂದಣಿಯಾದ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್. ದರಗದ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತಕುಮಾರ್, ಜಿಪಂ ಉಪಕಾರ್ಯದರ್ಶಿ ಟಿ. ಕೃಷ್ಣಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೆಶಕ ಜಗದೀಶ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕ ಸೋಮಶೇಖರಗೌಡ ಪಾಟೀಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಮಣಿ ಹೊಸಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಜಿಲ್ಲಾ ಸ್ವೀಪ್ ಸಮಿತಿಯ ಇತರೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.