ಸಾರಾಂಶ
ಹಳಿಯಾಳ:
ಮತದಾನ ರಾಷ್ಟ್ರೀಯ ಕಾರ್ಯಕ್ರಮ, ಇದೊಂದು ರಾಷ್ಟ್ರೀಯ ಕರ್ತವ್ಯ, ಜವಾಬ್ದಾರಿಯಾಗಿದ್ದು, ಸಂವಿಧಾನವು ನಮಗೆ ನೀಡಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದು ಹಳಿಯಾಳದ ಸಿವಿಲ್ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಹೇಳಿದರು.ಗುರುವಾರ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ 14ನೇಯ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ನಮ್ಮ ಮತವು ದೇಶದ ಹಾಗೂ ನಮ್ಮ ಭವಿಷ್ಯ ರೂಪಿಸಬಲ್ಲದು, ಅದಕ್ಕಾಗಿ ಅರ್ಹರಾದ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದ ಅವರು, ಹದಿನೆಂಟು ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ತಮ್ಮ ಹೆಸರನ್ನು ಮತದಾರರ ಯಾದಿಯಲ್ಲಿ ನೋಂದಾಯಿಸಿ ಮತದಾನದ ಪವಿತ್ರ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು.ತಹಸೀಲ್ದಾರ ಆರ್.ಎಚ್. ಬಾಗವಾನ ಮಾತನಾಡಿ, ಮತದಾರರಲ್ಲಿ ಮತದಾನದ ಮೌಲ್ಯ, ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.ಪ್ರಾಚಾರ್ಯ ಡಾ. ಚಂದ್ರಶೇಖರ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಶಿಕ್ಷಣ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾವಾದಿಗಳ ಸಂಘದವರು ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿಸಿದ್ದರು.ವಕೀಲ ಮಂಜುನಾಥ ಮಾದರ ಹಾಗೂ ಎಂ.ವಿ. ಅಷ್ಟೇಕರ ಉಪನ್ಯಾಸ ನೀಡಿದರು. ತಾಪಂ ಇಒ ಪರಶುರಾಮ ಘಸ್ತೆ, ಬಿಇಒ ಪ್ರಮೋದ ಮಹಾಲೆ, ವಕೀಲರ ಸಂಘದ ಉಪಾಧ್ಯಕ್ಷ ಎ.ಎಫ್. ಲಿತ್ತೂರ, ಎನ್‌ಎಸ್‌ಎಸ್ ಅಧಿಕಾರಿ ಲಕ್ಷ್ಮಣ ಕಾಳೆ, ಡಾ. ಮಾನಪ್ಪ ಹೊಸಕಾಂಬಳೆ, ಸಾಂಸ್ಕೃತಿಕ ಸಂಚಾಲಕ ಡಾ. ಪರಮಾನಂದ ದಾಸರ, ಪಿಡಿಒ ಅನುಪಮಾ ಬೆನ್ನೂರ ಇದ್ದರು.