ದೊಡ್ಡಬಳ್ಳಾಪುರ: ಚುನಾವಣಾ ಆಯೋಗದ ನಿಯಮಗಳ ಪ್ರಕಾರ 10 ವರ್ಷಗಳಿಗೆ ಒಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತ ಬಂದಿದೆ. ಆದರೆ ಈಗ ಕೇಂದ್ರ ಸರ್ಕಾರ ಎಸ್‌ಐಆರ್‌ ಮೂಲಕ ತನ್ನ ಅನುಕೂಲಕ್ಕೆ ತಕ್ಕಂತೆ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.

ನಗರದ ಬೆಸೆಂಟ್‌ ಪಾರ್ಕ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರ ಸಮಿತಿ ಹಾಗೂ ಕಾಂಗ್ರೆಸ್‌ ಬ್ಲಾಕ್‌ ಸಮಿತಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಎಸ್ಐಆರ್ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೈಜ ಮತದಾರರ ಹಕ್ಕು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಜಾಪ್ರಭುತ್ವದ ಮೂಲ ಆಶಯ ನಿಂತಿರುವುದೇ ಮತದಾನದ ಮೇಲೆ. ಇದೀಗ ಈ ಆಶಯವನ್ನೇ ಬುಡಮೇಲು ಮಾಡಲು ಬಿಜೆಪಿ ಹೊರಟಿದೆ. ಬಿಹಾರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಡೆಸಿರುವ ಎಸ್ಐಆರ್‌ನಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ. ಆದರೆ ಪ್ರಧಾನಿ ನರೇಂದ್ರಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಸ್ಪಷ್ಟವಾಗಿ ವಿರೋಧಿಸುತ್ತದೆ. ಪೂರ್ವಾಗ್ರಹ ಪೀಡಿತ ಮನೋಸ್ಥಿತಿಗೆ ಕಾಂಗ್ರೆಸ್‌ ವಿರೋಧವೇ ಹೊರತು, ಪ್ರಕ್ರಿಯೆಯ ಸುಧಾರಣೆ ವಿರುದ್ಧ ಅಲ್ಲ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಮುಖಂಡ ಜಿ.ಲಕ್ಷ್ಮೀಪತಿ ಮಾತನಾಡಿ, ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ಎಂಬ ಪರಿಕಲ್ಪನೆ ಅಡಿಯಲ್ಲಿ ಒಂದು ಪಕ್ಷದ ಸ್ವಾರ್ಥಕ್ಕಾಗಿ ಅನೇಕ ಬದಲಾವಣೆಗಳನ್ನು ತರುವ ಹುನ್ನಾರ ನಡೆಯುತ್ತಿದೆ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳುವ ಮೂಲಕ ಚುನಾವಣೆಗಳು ಏಕಪಕ್ಷೀಯವಾಗಿ ನಡೆಯಬೇಕು ಎಂಬ ಅಜೆಂಡಾ ಈಗಾಗಲೇ ಕೆಲ ರಾಜ್ಯಗಳ ಚುನಾವಣೆಗಳಲ್ಲಿ ಬಳಕೆಯಾಗಿರುವ ಶಂಕೆ ಇದೆ. ಹೀಗಾಗಿ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಎಚ್ಚರಿಕೆ ನಡೆ ಅಗತ್ಯ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಬಿ.ಜಿ.ಹೇಮಂತರಾಜ್ ಮಾತನಾಡಿ, ಅಧಿಕಾರದ ಲಾಲಸೆಗಾಗಿ ಬಿಜೆಪಿ ಮತದಾರರ ಪಟ್ಟಿ ಪರಿಷ್ಕರಣೆ ನೆಪ ಹೇಳುತ್ತಿದೆ. ತಮ್ಮ ಪಕ್ಷದ ವಿರುದ್ಧವಾಗಿರುವ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿರುವ ಉದಾಹರಣೆ ಬಿಹಾರ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಡೆದಿದೆ. ಈಗಾಗಲೇ ತಾಲೂಕಿನಲ್ಲಿ ಶೇಕಡಾ 70ರಷ್ಟು ಮ್ಯಾಪಿಂಗ್ ಕೆಲಸ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೂತ್ ಮಟ್ಟದ ಏಜೆಂಟರು ಪಾರದರ್ಶಕವಾಗಿ ಶ್ರಮಿಸಿದಾಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದರು.

ಕಾರ್ಯಾಗಾರದಲ್ಲಿ ಜಾಗೃತ ಕರ್ನಾಟಕ ವೇದಿಕೆಯ ವಿನೋದ್‌ ಕುಮಾರ್ ಎಸ್ಐಆರ್ ಪ್ರಕ್ರಿಯೆ ಕುರಿತು ಸಮಗ್ರ ಮಾಹಿತಿ ನೀಡಿದರು. ಜಾಗೃತ ಕರ್ನಾಟಕ ವೇದಿಕೆ ಅಬ್ದುಲ್‌ ಮನೀರ್, ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಟಿಎಪಿಎಂಸಿಎಸ್ ಅಧ್ಯಕ್ಷ ಡಿ.ಸಿದ್ದರಾಮಯ್ಯ, ನಿರ್ದೇಶಕ ಆರ್.ಗೋವಿಂದರಾಜ್, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ರೇವತಿ, ಜಿಲ್ಲಾ ಉಸ್ತುವಾರಿ ಕೃಪಾ ಆಳ್ವ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ವಿಶ್ವನಾಥರೆಡ್ಡಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಿ.ಆರ್.ಗೌಡ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಶರತ್‌ ಪಟೇಲ್, ಪ್ರಾಧಿಕಾರದ ನಿರ್ದೇಶಕ ಆಂಜನಮೂರ್ತಿ, ಭೂ ನ್ಯಾಯಮಂಡಳಿ ಸದಸ್ಯ ನಾರಾಯಣಗೌಡ, ಲಾವಣ್ಯ ನಾಗರಾಜ್, ನಗರಸಭೆ ಸದಸ್ಯರಾದ ಆನಂದ್, ಮೋಹನ್, ನಾಗರಾಜ್ ಮತ್ತಿತರರಿದ್ದರು.


16ಕೆಡಿಬಿಪಿ1-

ದೊಡ್ಡಬಳ್ಳಾಪುರದಲ್ಲಿ ಬೆಂ.ಗ್ರಾ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಹಾಗೂ ವಿವಿಧ ಬ್ಲಾಕ್‌ ಸಮಿತಿಗಳ ನೇತೃತ್ವದಲ್ಲಿ ನಡೆದ ಎಸ್‌ಐಆರ್‌ ಕುರಿತ ಕಾರ್ಯಾಗಾರಕ್ಕೆ ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್‌ ಚಾಲನೆ ನೀಡಿದರು.