ದೇಶದ ೧೩ ರಾಜ್ಯಗಳಲ್ಲಿ ಈಗಾಗಲೇ ಎಸ್.ಐ.ಆರ್. ಪ್ರಕ್ರಿಯೆ ನಡೆಸಿ ಕನಿಷ್ಠ ೫ ಕೋಟಿ ಅರ್ಹ ಮತದಾರರು ಸೇರಿದಂತೆ ಒಟ್ಟು ೬.೫ ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ.

ಕೊಪ್ಪಳ: ದೇಶ ಸ್ವಾತಂತ್ರ್ಯಗೊಂಡಾಗಲೇ ಸಂವಿಧಾನ ಭಾರತದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದು, ಅದನ್ನು ಎಸ್ ಐಆರ್ ಮೂಲಕ ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ರೈತ ಸಂಘದ ಮುಖಂಡ ಜೆ.ಎಂ.ವೀರಸಂಗಯ್ಯ ಹೇಳಿದರು.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತರುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್.) ಪ್ರಕ್ರಿಯೆ ವಿರೋಧಿಸಿ ಎಸ್.ಐ.ಆರ್. ಕರ್ನಾಟಕ ಪ್ರತಿರೋಧಿಸಲು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅಶೋಕ ವೃತ್ತದಲ್ಲಿ ಭಾಗವಹಿಸಿ ಮಾತನಾಡಿದರು.

ಕೋಟಿಗಟ್ಟಲೆ ಮತದಾರರ ಹಕ್ಕು ಚ್ಯುತಿಯಾಗುತ್ತಿದ್ದು, ದೇಶದ ೧೩ ರಾಜ್ಯಗಳಲ್ಲಿ ಈಗಾಗಲೇ ಎಸ್.ಐ.ಆರ್. ಪ್ರಕ್ರಿಯೆ ನಡೆಸಿ ಕನಿಷ್ಠ ೫ ಕೋಟಿ ಅರ್ಹ ಮತದಾರರು ಸೇರಿದಂತೆ ಒಟ್ಟು ೬.೫ ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗಿದೆ. ಹೊಸದಾಗಿ ಹೆಸರು ನೋಂದಾಯಿಸಲು ೨೦೨೫ರ ಜತೆಗೆ ೨೦೦೨ರ ಮತದಾರರ ಪಟ್ಟಿಯ ದಾಖಲೆ ಅಥವಾ ಕಠಿಣವಾದ ೧೧ ದಸ್ತಾವೇಜು ಕೇಳಲಾಗುತ್ತಿದೆ. ಈ ಮೂಲಕ ಅರ್ಹ ಮತದಾರರನ್ನು ಹೊರಗಿಡುವ ಹುನ್ನಾರ ನಡೆಯುತ್ತಿದೆ. ಅಲ್ಪಸಂಖ್ಯಾತರ ದಲಿತರ ಆದಿವಾಸಿಗಳ ಮತದಾನದ ಹಕ್ಕನ್ನು ಕಸಿಯಲಾಗುತ್ತಿದೆ. ಇದರ ವಿರುದ್ಧ ರಾಜ್ಯಾದ್ಯಂತ ಪ್ರಗತಿಪರ ಸಂಘಟನೆಗಳು ಸಮಾನಮನಸ್ಕ ಪಕ್ಷಗಳು ಒಂದಾಗಿ ಹೋರಾಟ ಮಾಡುತ್ತಿವೆ ಎಂದರು.

ನಗರದ ಗಡಿಯಾರ ಕಂಬದಿಂದ ಅಶೋಕ್ ಸರ್ಕಲ್ ವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿ ಎಸ್ ಐಆರ್ ವಿರುದ್ಧ ಘೋಷಣೆ ಕೂಗಿದರು.

ಲಾಜಿಕಲ್ ಡಿಸ್ಕ್ರಿಪೆನ್ಸಿ (ಹೆಸರು,ವಿಳಾಸದ ಸಣ್ಣಪುಟ್ಟ ವ್ಯತ್ಯಾಸ) ನೆಪದಲ್ಲಿ ವಿವಾಹಿತ ಮಹಿಳೆಯರು, ಅಲೆಮಾರಿಗಳು, ದಲಿತರು, ಗ್ರಾಮೀಣ ಬಡವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಉದ್ದೇಶಪೂರ್ವಕವಾಗಿ ಕಟಾವು ಮಾಡಲಾಗುತ್ತಿದೆ. ಇದು ವಿರೋಧ ಪಕ್ಷಗಳ ಮತ ಬ್ಯಾಂಕ್ ಕುಗ್ಗಿಸುವ ಮತ್ತು ಜನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಮನುವಾದಿ ಹುನ್ನಾರವಾಗಿದೆ. ಜನವಿರೋಧಿ ಎಸ್ ಐಆರ್ ಪ್ರಕ್ರಿಯೆ ತಕ್ಷಣ ನಿಲ್ಲಿಸಿ ಜನಸ್ನೇಹಿ ಪರಿಷ್ಕರಣೆ ತರಬೇಕು. ಮತದಾರರ ಹಕ್ಕು ಕಸಿಯುವ ಲಾಜಿಕಲ್ ಡಿಸ್ಕ್ರಿಪೆನ್ಸಿಸಾಫ್ಟ್ವೇರ್ ಅನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಮತದಾರರ ಪಟ್ಟಿ ಪಾರದರ್ಶಕವಾಗಿ ಮೆಷಿನ್ ರೀಡಬಲ್ ಫಾರ್ಮಾಟ್‌ನಲ್ಲಿ ಸಾರ್ವಜನಿಕ ಪರಿಶೀಲನೆಗೆ ನೀಡಬೇಕು.

ನಿವೃತ್ತ ಪ್ರಾಂಶುಪಾಲ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಬದುಕುವ ಮತ್ತು ಮತದಾನದ ಹಕ್ಕನ್ನು ರಕ್ಷಿಸಲು ಈ ಪ್ರಜಾಪ್ರಭುತ್ವವಾದಿ ಹೋರಾಟ ನಡೆಯುತ್ತಿದ್ದು, ಎಲ್ಲ ಜವಾಬ್ದಾರಿಯುತ ನಾಗರಿಕರು ಇದರಲ್ಲಿ ಭಾಗವಹಿಸಬೇಕು, ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತಗೊಳಿಸಬಾರದು, ಹಾಗೆ ಮಾಡಿದರೆ ಅದು ದ್ರೋಹದ‌ ಕೆಲಸವಾಗುತ್ತದೆ ಎಂದರು.

ಜಿಲ್ಲಾಡಳಿತ ಪರ ಅಪರ‌ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಮನವಿ ಸ್ವೀಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಆರ್.ಕೆ. ದೇಸಾಯಿ, ಯೂಸೂಪಿಯಾ ಮಸೀದಿಯ ಮುಪ್ತಿ ನಜೀರ್ ಅಹ್ಮದ, ಸಿರಾಜ್ ಸಿದ್ದಾಪೂರ, ಜ್ಯೋತಿ ಎಂ. ಗೊಂಡಬಾಳ, ಶೈಲಜಾ ಹಿರೇಮಠ, ಸಲ್ಮಾಜಾನ್, ರಮ್ಯಾಕೃಷ್ಣ ಎಂಜೆಎಸ್ಪಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ವೆಲ್ಫೇರ್ ಪಕ್ಷದ

ಆದಿಲ್ ಪಟೇಲ್, ಪಿಂಜಾರ ಸಮಾಜದ ರಾಜ್ಯ ಖಜಾಂಚಿ ಶಾಹಬುದ್ದೀನಸಾಬ್‌, ಪಾಮಣ್ಣ ಕನಕಗಿರಿ, ಫಾದರ್ ಚನ್ನಬಸಪ್ಪ, ದುರ್ಗೆಶ್ ಬರಗೂರು, ರಫಿ ಕಾರಟಗಿ, ಧರ್ಮರಾಜ್ ಗೋನಾಳ, ಕೆ.ಬಿ, ಗೋನಾಳ, ರಾಜಾಭಕ್ಷಿ ಎಚ್.ವಿ, ಹುಜೂರ್ ಅಹ್ಮದ್, ಮುದುಕಪ್ಪ, ಸಲೀಂ ಖಾದ್ರಿ, ಶರಣು ಶೆಟ್ಟರ್ ಬಸವರಾಜ್ ಶೀಲವಂತರ, ಆಸಿಫ್ ಅಲಿ, ಕಾಟನ್ ಪಾಷಾ, ಮನವಿ ಪಾಷಾ, ಪೀರಾ ಹುಸೇನ್ ಹೊಸಳ್ಳಿ, ಎಸ್.ಎ. ಗಫಾರ್ ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಹಾಗೂ ನಾಗರಿಕರು, ಧರ್ಮ ಗುರುಗಳು ಪಾಲ್ಗೊಂಡಿದ್ದರು.