ವಚನಗಳು ಎಲ್ಲ ಕಾಲಕ್ಕೂ ಸಲ್ಲುವ ಜೀವನ ಸಂದೇಶಗಳು-ರವಿಬಾಬು

| Published : Nov 06 2024, 12:40 AM IST

ಸಾರಾಂಶ

ಹುಸಿಯನಾಡದೆ ಹಸನಾದ, ಸಮನ್ವಯದ ಬದುಕಿನ ಸೂತ್ರಗಳಾಗಿ ನೀಡಿದ ವಚನಗಳು ಎಲ್ಲ ಕಾಲಕ್ಕೂ ಸಲ್ಲುವ ಸಂವೇದನೆಶೀಲ ಜೀವನ ಸಂದೇಶಗಳು ಎಂದು ನ್ಯಾಯವಾದಿ ರವಿಬಾಬು ಪೂಜಾರ ತಿಳಿಸಿದರು.

ಹಾನಗಲ್ಲ: ಹುಸಿಯನಾಡದೆ ಹಸನಾದ, ಸಮನ್ವಯದ ಬದುಕಿನ ಸೂತ್ರಗಳಾಗಿ ನೀಡಿದ ವಚನಗಳು ಎಲ್ಲ ಕಾಲಕ್ಕೂ ಸಲ್ಲುವ ಸಂವೇದನೆಶೀಲ ಜೀವನ ಸಂದೇಶಗಳು ಎಂದು ನ್ಯಾಯವಾದಿ ರವಿಬಾಬು ಪೂಜಾರ ತಿಳಿಸಿದರು.

ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಆಯೋಜಿಸಿದ ಶರಣ ಸಂಗಮ ಕಾರ್ಯಕ್ರಮದಲ್ಲಿ ಶರಣ ಒಕ್ಕಲಿಗ ಮುದ್ದಣ್ಣನ ಕೃಷಿ ಹಾಗೂ ಸಾಮರಸ್ಯದ ಕೃಷಿಯ ವಚನಗಳ ಕುರಿತ ಉಪನ್ಯಾಸ ನೀಡಿದ ಅವರು, ಸಾರ್ಥಕ ಜೀವನದ ಸತ್ಯ ಸಂದೇಶಗಳು ವಚನಗಳು. ಅಂಗ ಲಿಂಗ ಕಾಯಕದ ಕಲ್ಪನೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ಒಕ್ಕಲಿಗ ಮುದ್ದಣ್ಣ ತಿಳಿಸಿದವರು. ಅಂಗ ಲಿಂಗ ಪೂಜೆಯ ಸತ್ಯವನ್ನು ತಿಳಿಸಿದರು. ಭಕ್ತನ ಬದುಕನ್ನು ಪರಿಚಯಿಸಿದರು. ಆನಂದವೇ ಬದುಕು. ಅದರಲ್ಲಿ ನಿಷ್ಕಲ್ಮಷವಿರಬೇಕು. ಷಟಸ್ಥಲ ಸಿದ್ಧಾಂತದ ಮೂಲಕ ಬದುಕನ್ನು ಹಸನಗೊಳಿಸಿಕೊಳ್ಳಬೇಕು ಎಂದವರು. ಭಕ್ತ ಜೀವನ್ಮುಕ್ತಿಯತ್ತ ಸಾಗಬೇಕು. ಅರಿವು ಆಚಾರ ಒಂದಾಗಿ ಸಮನ್ವಯ ಬದುಕು ಬೇಕು ಎಂದಿದ್ದಾರೆ. ಹೀಗಾಗಿ ಒಕ್ಕಲಿಗ ಮುದ್ದಣ್ಣ ಎಲ್ಲ ಜನಸಾಮಾನ್ಯರ ಪ್ರತಿನಿಧಿಯಾಗಿ ಒಕ್ಕಲಿಗನಾಗಿ ಕಾಣುತ್ತಾರೆ ಎಂದರು.ನಿವೃತ್ತ ವೈದ್ಯಾಧಿಕಾರಿ ಡಾ.ಬಿ.ಸಿ. ಪಾಟೀಲ ಶರಣ ಸಂಗಮ ಉದ್ಘಾಟಿಸಿ ಮಾತನಾಡಿ, ಸ್ವಚ್ಛ ಸುಂದರ ಬದುಕಿನ ಸೂತ್ರಗಳನ್ನು ನೀಡಿದ ವಚನಕಾರರು ವೈಯಕ್ತಿಕ ಹಾಗೂ ಸಾಮಾಜಿಕ ಆರೋಗ್ಯಕ್ಕಾಗಿ ಬದುಕು ಬರೆದರು. ಎಲ್ಲ ಕಾಲಕ್ಕೂ ರೋಗ ಬಾಧೆ ಇವೆ. ಅವು ಮಾನಸಿಕ ಶಾರೀರಿಕ ರೋಗಗಳು. ಎಲ್ಲ ರೋಗಕ್ಕೂ ಪರಿಹಾರಗಳಿವೆ. ಮಾನಸಿಕ ರೋಗಕ್ಕೆ ವಚನಗಳಲ್ಲಿ ಒಳ್ಳೆಯ ಪರಿಹಾರಗಳಿವೆ. ಶಾರೀರಿಕ ರೋಗಕ್ಕೆ ವೈದ್ಯರಿಂದ ಪರಿಹಾರವಿದೆ. ಇಂದು ಎಲ್ಲರೂ ಒಂದಾಗಿ ಸೌಖ್ಯದಿಂದ ಬದುಕುವ ಚಿಂತನೆಗೆ ಮುಂದಾಗಬೇಕಾಗಿದೆ. ಎಲ್ಲ ಕಾಲಕ್ಕೂ ಸಲ್ಲುವ ವಚನಗಳು ಎಲ್ಲರನ್ನೂ ಒಗ್ಗೂಡಿಸಿ ಸೌಖ್ಯದಿಂದ ಬದುಕಲು ಮಾರ್ಗದರ್ಶನ ಮಾಡುತ್ತವೆ ಎಂದರು.ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ ಅಧ್ಯಕ್ಷತೆವಹಿಸಿ ಮಾತನಾಡಿ, ಶರಣರ ಜೀವನವನ್ನು ಅರಿತರೆ ಸತ್ಯ ಸುಂದರ ಬದುಕಿನ ಸೂತ್ರಗಳನ್ನು ಅರಿತಂತೆ. ಯಾವುದೇ ಭೇದಕ್ಕೆ ಅವಕಾಶವಿಲ್ಲದಂತೆ ಸಮಾಜವನ್ನು ಕಟ್ಟುವ ನಿಷ್ಠೆಯನ್ನು ವಚನಗಳಲ್ಲಿ ಕಾಣುತ್ತೇವೆ. ವಚನಗಳು ನಮ್ಮ ಬದುಕಿನ ಪಾಠಗಳು ಎಂದರು.ಉಪಾಧ್ಯಕ್ಷ ಅಶೋಕ ದಾಸರ ಆಶಯ ನುಡಿ ನುಡಿದರು. ಪುರಸಭಾ ಸದಸ್ಯೆ ವೀಣಾ ಗುಡಿ, ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಅಕ್ಕಮ್ಮ ಶೆಟ್ಟರ, ಶಸಾಪ ಉಪಾಧ್ಯಕ್ಷ ಎಂ.ಎಸ್.ಹುಲ್ಲೂರ, ಶಂಬುಲಿಂಗಯ್ಯ ಹೇಮಗಿರಿಮಠ, ಕಾರ್ಯದರ್ಶಿ ಎಸ್.ವಿ.ಹೊಸಮನಿ, ತಾಲೂಕು ಘಟಕದ ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ, ವಿಜಯಲಕ್ಷ್ಮೀ ಹೊಸಮನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.