ಸಾರಾಂಶ
ಗಣೇಶ್ ಕಾಮತ್‌ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಗೇರು (ಗೋಡಂಬಿ) ಇತ್ತೀಚಿನ ದಿನಗಳಲ್ಲಿ ವಿದೇಶಿವಿನಿಮಯದಲ್ಲೂ ಹೆಚ್ಚಿನ ಆದಾಯ ತರುವ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ. ಕರಾವಳಿ ಕರ್ನಾಟಕದ ಪ್ರಮುಖ ಉದ್ಯಮ ಬೆಳೆಯಾಗಿ ಗುರುತಿಸಿಕೊಂಡಿರುವ ಗೋಡಂಬಿ ದಕ್ಷಿಣ ಭಾರತ, ಈಶಾನ್ಯ ರಾಜ್ಯಗಳ ಸಹಿತ ಹೆಚ್ಚಿನೆಡೆ ಪಸರಿಸುತ್ತಲೇ ಇದೆ.ಗೇರು ಸ್ವಾಲಂಬನೆಗೆ ವೃಕ್ಷ ರಕ್ಷಾ ವಿಶ್ವ ರಕ್ಷಾ: ದೇಶದಲ್ಲಿ ಗೋಡಂಬಿ ಉದ್ಯಮಕ್ಕೆ ವಾರ್ಷಿಕ ೨೦ ಲಕ್ಷ ಟನ್ ಟನ್ ಬೇಡಿಕೆಯಿದ್ದರೂ ನಮ್ಮ ಬೆಳೆ ೫ರಿಂದ ೬ ಲಕ್ಷ ಟನ್ ಮಾತ್ರ. ರಾಜ್ಯದಲ್ಲೂ ಇರುವ ೪ ಟನ್ ಬೇಡಿಕೆಗೆ ಪ್ರತಿಯಾಗಿ ೫೦ ಸಾವಿರ ಟನ್ ಬೆಳೆ ಮಾತ್ರ ದೊರೆಯುತ್ತಿದೆ. ಉಳಿದೆಲ್ಲವನ್ನೂ ವಿದೇಶದಿಂದಲೇ ಆಮದು ಮಾಡಿಕೊಂಡು ಉದ್ಯಮ ನಡೆಸಬೇಕಾದ ಸವಾಲು ದಿನೇ ದಿನೇ ಕಠಿಣ ಪರಿಸ್ಥಿತಿಗೆ ಕಾರಣವಾಗುತ್ತಿದೆ.
ನಮ್ಮ ದೇಶದ ಬಹು ಬೇಡಿಕೆಯ, ಈ ಲಾಭದಾಯಕ ಗೇರು ಕೃಷಿಯನ್ನು ಕಸಿ ಗೇರು ಸಸಿಗಳನ್ನು ಬೆಳೆಸುವ ಮೂಲಕ ನಮ್ಮ ನೆಲದಲ್ಲೇ ಹೆಚ್ಚಿಸುವ ಕ್ರಾಂತಿ ಕಾರಿ ಹೆಜ್ಜೆಗಳನ್ನಿಟ್ಟರೆ ಇದಕ್ಕಿಂತ ಲಾಭದ ಮಾರುಕಟ್ಟೆ ಮತ್ತೊಂದಿಲ್ಲ. ಕನಿಷ್ಠ ೧೫ ವರ್ಷಗಳ ಹಿಂದೆ ನಾವು ಈ ನಿಟ್ಟಿನಲ್ಲಿ ಯೋಚಿಸಿ ಗೇರು ಕೃಷಿಯನ್ನು ವಿಸ್ತರಿಸಿದ್ದರೆ ಈ ಉದ್ಯಮದಲ್ಲಿ, ಆರ್ಥಿಕತೆಯಲ್ಲೂ ಬಲಿಷ್ಠರಾಗಿರುತ್ತಿದ್ದೆವು. ಈ ನಿಟ್ಟಿನಲ್ಲಿ ಈಗಾಗಲೇ ಮೂಡುಬಿದಿರೆಯ ಶ್ರೀ ವಿಜಯಲಕ್ಷ್ಮೀ ಪ್ರತಿಷ್ಠಾನ ‘ವೃಕ್ಷರಕ್ಷಾ ವಿಶ್ವ ರಕ್ಷಾ’ ಯೋನೆಯ ಮೂಲಕ ತನ್ನ ಅಳಿಲ ಸೇವೆ ಆರಂಭಿಸಿದ್ದು ಕಳೆದ ೯ ವರ್ಷಗಳಲ್ಲಿ ಬಹಳಷ್ಟು ಪ್ರಗತಿಪರ ಮುನ್ನಡೆ ಕಂಡಿದೆ.ಏನಿದು ವೃಕ್ಷರಕ್ಷಾ ವಿಶ್ವ ರಕ್ಷಾ?
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಯೋಗ್ಯ ಫಲಾನುಭವಿಗಳನ್ನು ಗುರುತಿಸಿ ಉಚಿತವಾಗಿ ರೈತರ ಮನೆ ಬಾಗಿಲಿಗೆ ಉತ್ತಮ ತಳಿಯ ಹಾಗೂ ಅವರ ಸ್ಥಳಕ್ಕೆ ಯೋಗ್ಯವಾದ ಗೇರು ಗಿಡಗಳನ್ನು ತಲುಪಿಸುವ ಮತ್ತು ಆ ಮೂಲಕ ಭವಿಷ್ಯದಲ್ಲಿ ಗೋಡಂಬಿ ಉತ್ಪಾದನೆಯ ವೇಗ ಹೆಚ್ಚಿಸುವ ದೂರದರ್ಶಿತ್ವದ ಯೋಜನೆಯೇ ವೃಕ್ಷರಕ್ಷಾ ವಿಶ್ವ ರಕ್ಷಾ ಯೋಜನೆ.೨೦೧೬ರಲ್ಲಿ ಮೂಡುಬಿದಿರೆಯ ಶ್ರೀ ವಿಜಯಲಕ್ಷ್ಮೀ ತಿಷ್ಠಾನದ ಅಧ್ಯಕ್ಷ ಎ. ಅನಂತ ಕೃಷ್ಣ ರಾವ್ ಅವರ ದೂರದರ್ಶಿತ್ವದ ಈ ಚಿಂತನೆಗೆ ಸ್ಫೂರ್ತಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ತಮ್ಮ ಪಂಚಮ ಪರ್ಯಾಯದಲ್ಲಿ ಘೋಷಿಸಿದ ವೃಕ್ಷರಕ್ಷಾ ವಿಶ್ವ ರಕ್ಷಾ ಯೋಜನೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅರ್ಹ ರೈತರಿಗೆ ಈ ಗಿಡಗಳು ವ್ಯವಸ್ಥಿತವಾಗಿ ತಲುಪುತ್ತಿವೆ. ಉತ್ತಮ ತಳಿಯ ಕಸಿಗೇರು ಗಿಡಗಳನ್ನು ಪುತ್ತೂರಿನ ನವನೀತ ನರ್ಸರಿಯವರ ಸಹಕಾರದಿಂದ ರೈತರಿಗೆ ಒದಗಿಸಲಾಗುತ್ತಿದೆ. ಈಗಾಗಲೇ ನಾಡಿನ ೨೧,೦೦೦ ರೈತರಿಗೆ ಒಟ್ಟು ೧೧.೫೦ ಲಕ್ಷ ಕಸಿ ಗೇರು ಗಿಡಗಳನ್ನು ಒದಗಿಸಲಾಗಿದೆ. ಕರ್ನಾಟಕ ಗೇರು ಉತ್ಪಾದಕರ ಸಂಘವೂ ಈ ಯೋಜನೆಯನ್ನು ಪ್ರೋತ್ಸಾಹಿಸುತ್ತಿದೆ.
ಈ ವರ್ಷ ೧.೨೫ ಲಕ್ಷ ಕಸಿ ಗೇರು ಗಿಡಗಳು ಅರ್ಹ ಫಲಾನುಭವಿಗಳಿಗೆ ವಿತರಣೆಯಾಗಲಿವೆ. ಮುಂದಿನ ದಶಮಾನೋತ್ಸವ ವರ್ಷದಲ್ಲಿ ಮತ್ತೆ ೩ ಲಕ್ಷ ಗಿಡಗಳನ್ನು ವಿತರಿಸಿ ಈ ವರೆಗಿನ ಒಟ್ಟು ಗಿಡಗಳ ವಿತರಣೆಯನ್ನು ೧೫ ಲಕ್ಷದ ಗಡಿ ದಾಟಿಸಬೇಕು ಎನ್ನುವ ಯೋಜನೆ ಇದೆ. ಈ ನಿಟ್ಟಿನಲ್ಲಿ ಸರಕಾರ, ನಿಗಮ ಮತ್ತು ಉದ್ಯಮಗಳು ಗೇರು ಕೃಷಿಯನ್ನು ಕೃಷಿಕರನ್ನು ಪ್ರೋತ್ಸಾಹಿಸುವಂತಾಗಬೇಕಿದೆ.ವೃಕ್ಷರಕ್ಷಾ ವಿಶ್ವ ರಕ್ಷಾ ೯ನೇ ಅಭಿಯಾನ
ರಾಜ್ಯದಲ್ಲಿ ಗೇರು ಕೃಷಿ ವಿಸ್ತರಣೆಗೆ ಉಚಿತವಾಗಿ ರೈತರಿಗೆ ವಿತರಿಸುವ ವೃಕ್ಷರಕ್ಷಾ ವಿಶ್ವ ರಕ್ಷಾ ಅಭಿಯಾನದ ೯ನೇ ವರ್ಷದ ಕಾರ್ಯಕ್ರಮವನು ಇತ್ತೀಚಿಗೆ ಮೂಡುಬಿದಿರೆಯಲ್ಲಿ ನಡೆಯಿತು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾಗಟ್ಟಿ ಉದ್ಘಾಟಿಸಿ ಅಭಿಯಾನಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ.ಅಖಿಲ ಭಾರತ ಗೇರು ಉತ್ಪಾದಕರ ಸಂಘದ ಅಧ್ಯಕ್ಷ ರಾಹುಲ್ ಕಾಮತ್, ವಿಜಯಲಕ್ಷ್ಮೀ ಪ್ರತಿಷ್ಠಾನದ ಎಸ್. ಅನಂತಕೃಷ್ಣ ರಾವ್, ರಾಜ್ಯ ಗೇರು ಉತ್ಪಾದಕರ ಸಂಘದ ಅಧ್ಯಕ್ಷ ಡಿ ಗೋಪಿನಾಥ ಕಾಮತ್, ಉಡುಪಿ ಪೇಜಾವರ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ. ವಾಸುದೇವ ಭಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಮೂಡುಬಿದಿರೆಯ ಯೋಜನಾಧಿಕಾರಿ ಸುನೀತಾ ನಾಯಕ್, ನವನೀತ ನರ್ಸರಿಯ ವೇಣುಗೋಪಾಲ್ ಎಸ್.ಜೆ. ಉಪಸ್ಥಿತರಿದ್ದರು.