ಬಳ್ಳಾರಿ; ಇಲ್ಲಿನ ಬಳ್ಳಾರಿ ಬಿಜಿನೆಸ್ ಕಾಲೇಜಿನಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಸ್ನಾತಕ ಪದವಿಯ ನಾಲ್ಕನೇ ಸೆಮಿಸ್ಟರ್‌ನ ಕಲಾ ಸೌರಭ-3, ವಾಣಿಜ್ಯ ಸೌರಭ-3, ವಿಜ್ಞಾನ ಸೌರಭ-3 ಕನ್ನಡ ಭಾಷಾ ಪಠ್ಯಪುಸ್ತಕಗಳ ಲೋಕಾರ್ಪಣೆ ಸಮಾರಂಭ ಶುಕ್ರವಾರ ಜರುಗಿತು.
ಪಠ್ಯಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ಮುನಿರಾಜು, ಪಠ್ಯಪುಸ್ತಕಗಳು ವೈವಿಧ್ಯಮಯ ಜೀವನದ ಅನುಭವಗಳ ಜೊತೆಗೆ ವಿವಿಧ ಜ್ಞಾನಶಿಸ್ತುಗಳ ಕೈಪಿಡಿಗಳಾಗಿದ್ದು, ಶೈಕ್ಷಣಿಕ ವ್ಯವಸ್ಥೆಯ ಉದ್ದೇಶಗಳನ್ನು ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಪಠ್ಯಪುಸ್ತಕಗಳನ್ನು ಉತ್ತಮವಾಗಿ ರಚಿಸಿ ವಿದ್ಯಾರ್ಥಿಗಳಲ್ಲಿ ಔದ್ಯೋಗಿಕ ಭರವಸೆಯನ್ನು ಬೆಳೆಸುವ, ಆತ್ಮವಿಶ್ವಾಸವನ್ನು ತುಂಬುವ ಮಹತ್ವದ ಕಾರ್ಯವನ್ನು ಪ್ರಸಾರಾಂಗ ಮಾಡುತ್ತಿದೆ. ಪಠ್ಯಪುಸ್ತಕಗಳು ಹೊಸ ಹೊಸ ವಿಷಯಗಳ ಜ್ಞಾನವನ್ನು ವೃದ್ಧಿಸುವ ಮಹತ್ವದ ಸಾಧನಗಳಾಗಿದ್ದು, ಆ ಮೂಲಕ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ದೈನಂದಿನ ಜೀವನದ ಭಾಗಗಳಾಗಿ ಕಾರ್ಯನಿರ್ವಸಲು ವಿಶ್ವವಿದ್ಯಾಲಯ ಮುಂದಾಗಿದೆ ಎಂದರು.ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ. ಸಿ.ಬಿ.ಚಿಲ್ಕರಾಗಿ ಅವರು ಪಠ್ಯಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು. ವಿಶ್ವವಿದ್ಯಾಲಯವು ಪ್ರಕಟಿಸಿದ ಪಠ್ಯಪುಸ್ತಕಗಳು ಪ್ರಾಚೀನ ಮತ್ತು ಆಧುನಿಕ ಕವಿಗಳ ಸಂಗಮವಾಗಿದ್ದು, ವೈವಿಧ್ಯಮಯ ಜ್ಞಾನವನ್ನು ನೀಡುವ ಕಣಜಗಳಾಗಿದ್ದು, ಹೊಸ ಹೊಸ ಆಲೋಚನೆಗಳನ್ನು ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು.ಕಲಾಸೌರಭ-3, ವಾಣಿಜ್ಯ ಸೌರಭ-3, ವಿಜ್ಞಾನ ಸೌರಭ-3 ಪಠ್ಯಪುಸ್ತಕಗಳನ್ನು ಸಂಪಾದಿಸಿದ ಡಾ. ಎ.ಎಂ. ರಾಜಶೇಖರಯ್ಯ, ಪ್ರೊ. ನಾಗಣ್ಣ ಕಿಲಾರಿ, ಡಾ. ಮಲ್ಲಿಕಾರ್ಜುನ ಎಂ. ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ರಾಮಚಂದ್ರ, ಪ್ರಸಾರಾಂಗದ ನಿರ್ದೇಶಕ ಡಾ.ತಿಪ್ಪೇರುದ್ರ ಮಾತನಾಡಿದರು. ಕಾಲೇಜಿನ ಕನ್ನಡ ಅಧ್ಯಾಪಕರಾದ ಸರ್ವಮಂಗಳ, ಮಂಜುಳ ಕಾರ್ಯಕ್ರಮ ನಿರ್ವಹಿಸಿದರು.
ಬಳ್ಳಾರಿ ಬಿಜಿನೆಸ್ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದಿಂದ ಹೊರತರಲಾದ ಪಠ್ಯಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.