ಡಾ. ವಿಎಸ್‌ವಿ ಪ್ರಸಾದ ಅವರು ಜನ್ಮದಿನ ಅಂಗವಾಗಿ ಬಡವರಿಗೆ ಧಾನ್ಯ, ಮಕ್ಕಳಿಗೆ ಸ್ಕೂಲ್ ಬ್ಯಾಗ್, ನೋಟ್‌ಬುಕ್‌ ವಿತರಿಸಿದರು. ಡೌನಚಾಳ ಬಾಲಾಜಿ ದೇವಸ್ಥಾನ ಗೋ ಶಾಲೆಯಲ್ಲಿ ಗೋವುಗಳಿಗೆ ಮೇವು ವಿತರಿಸಿದರು.

ಹುಬ್ಬಳ್ಳಿ:

ಸ್ವರ್ಣಾ ಗ್ರೂಪ್ ಚೇರ್ಮನ್ ಡಾ. ಸಿಎಚ್‌ ವಿಎಸ್‌ವಿ ಪ್ರಸಾದ ಅವರ 60ನೇ ಜನ್ಮದಿನದ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ಸಂಘ-ಸಂಸ್ಥೆಗಳು, ಅಭಿಮಾನಿಗಳಿಂದ ರಕ್ತದಾನ ಶಿಬಿರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮ ಜರುಗಿದವು.

ಇದಲ್ಲದೇ ಸ್ವತಃ ಡಾ. ವಿಎಸ್‌ವಿ ಪ್ರಸಾದ ಅವರು ಜನ್ಮದಿನ ಅಂಗವಾಗಿ ಬಡವರಿಗೆ ಧಾನ್ಯ, ಮಕ್ಕಳಿಗೆ ಸ್ಕೂಲ್ ಬ್ಯಾಗ್, ನೋಟ್‌ಬುಕ್‌ ವಿತರಿಸಿದರು. ಡೌನಚಾಳ ಬಾಲಾಜಿ ದೇವಸ್ಥಾನ ಗೋ ಶಾಲೆಯಲ್ಲಿ ಗೋವುಗಳಿಗೆ ಮೇವು ವಿತರಿಸಿದರು. ಸ್ವರ್ಣಾಸಿಟಿ ಸೆಂಟರ್‌ನಲ್ಲಿ 60 ಬಡವರಿಗೆ ಆಹಾರ ಧಾನ್ಯಗಳ ಕಿಟ್, ಬಂಜಾರಾ ಕಾಲನಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಪಠ್ಯ ಪುಸ್ತಕ, ಸ್ಕೂಲ್ ಬ್ಯಾಗ್ ನೀಡಿದರು,

ಗಬ್ಬೂರಿನಲ್ಲಿರುವ ವಿಶೇಷಚೇತನರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದ ಡಾ. ಪ್ರಸಾದ ಅವರು ಊಟ ಬಡಿಸಿದರು. ಅಲ್ಲದೇ ರಾಣಿಬೆನ್ನೂರಿನ ಅಂಧರ ಜೀವ ಬೆಳಕು ಸಂಸ್ಥೆಯ 28 ವಿದ್ಯಾರ್ಥಿಗಳಿಗೆ 1 ತಿಂಗಳ ಮಟ್ಟಿಗೆ ಆಹಾರ ಧಾನ್ಯಗಳ ಕಿಟ್ ನೀಡಿದರು. ರಕ್ತದಾನ ಶಿಬಿರ:ಇನ್ನೊಂದೆಡೆ ನೈಋತ್ಯ ರೈಲ್ವೆ ಗುತ್ತಿಗೆದಾರರ ಸಂಘ ಹಾಗೂ ಡಾ. ಸಿಎಚ್ ವಿಎಸ್‌ವಿ ಪ್ರಸಾದ್ ಅಭಿಮಾನಿ ಬಳಗದಿಂದ ನಡೆದ ರಕ್ತದಾನ ಶಿಬಿರದಲ್ಲಿ 80ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಈ ವೇಳೆ ಮಾತನಾಡಿದ ಡಾ. ಸಿಎಚ್‌ವಿಎಸ್‌ವಿ ಪ್ರಸಾದ, ನನ್ನ ಜನ್ಮದಿನದಂದು ಜನರು ತೋರಿದ ಆಸಕ್ತಿ, ಕಾಳಜಿ, ಉತ್ಸಾಹ ಬಹಳ ಖುಷಿಯಾಗಿದೆ. ರಕ್ತದಾನಕ್ಕಿಂತ ಮಿಗಿಲಾದ ದಾನವಿಲ್ಲ. ಹೆಚ್ಚು ರಕ್ತದಾನ ಮಾಡುವ ಮೂಲಕ ನೀವೂ ಆರೋಗ್ಯ ಕಾಪಾಡಿಕೊಳ್ಳಿ, ಮನುಷ್ಯ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಮಾತ್ರ ಈ ಕೊರತೆ ನೀಗಿಸಲು ಸಾಧ್ಯ. ರಕ್ತದಾನ ಎಂಬುದು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದು ಅಭಿಪ್ರಾಯಪಟ್ಟರು.

ರಂಗೋಲಿ ಸ್ಪರ್ಧೆ:

ಇಂದಿರಾ ಗಾಜಿನ ಮನೆಯಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಮಕ್ಕಳನ್ನು ಹುರುದುಂಬಿಸಿದರು. ಈ ವೇಳೆ ಮಾತನಾಡಿದ ಅವರು, ನಾನು ಹುಬ್ಬಳ್ಳಿಗೆ ಬಂದ ಬಳಿಕ ಇಲ್ಲಿನ ಜನರು ತೋರಿದ ಪ್ರೀತಿ ಮತ್ತು ಬೆಂಬಲದಿಂದ ಎತ್ತರಕ್ಕೆ ಬೆಳೆದಿದ್ದೇನೆ. ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಮಾತಿನಂತೆ ದುಡಿಮೆ ನಂಬಿ ಬದುಕಿದ್ದೇನೆ. ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಬಡವರಿಗೆ ಹಾಗೂ ನೊಂದವರಿಗೆ ನೀಡುತ್ತಿದ್ದೇನೆ. ಇದು ನನ್ನ ಭಾಗ್ಯ. ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ಇದೇ ರೀತಿ ಸಮಾಜ ಸೇವೆಯನ್ನು ಮುಂದುವರಿಸುವೆ ಎಂದು ವಿಎಸ್‌ಪಿ ತಿಳಿಸಿದರು.