ಪರೀಕ್ಷೆ ಮುಗಿದು 3 ತಾಸಲ್ಲೇ ವಿಟಿಯು ರಿಸಲ್ಟ್‌

| Published : May 31 2024, 02:15 AM IST / Updated: May 31 2024, 11:19 AM IST

ಪರೀಕ್ಷೆ ಮುಗಿದು 3 ತಾಸಲ್ಲೇ ವಿಟಿಯು ರಿಸಲ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು ಅಂತಿಮ ವರ್ಷದ ಎಂಜಿನಿಯರಿಂಗ್‌ ತರಗತಿಯ ಕೊನೆಯ ಸೆಮಿಸ್ಟರ್‌ನ ಪರೀಕ್ಷೆ ಮುಗಿದು ಕೇವಲ ಮೂರು ಗಂಟೆಗಳಲ್ಲೇ ರಾಜ್ಯಾದ್ಯಂತ ಫಲಿತಾಂಶ ಪ್ರಕಟಿಸಿದೆ. ಆ ಮೂಲಕ ವಿಟಿಯು ಪರೀಕ್ಷಾ ಫಲಿತಾಂಶದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ.

  ಬೆಳಗಾವಿ :  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವು ಅಂತಿಮ ವರ್ಷದ ಎಂಜಿನಿಯರಿಂಗ್‌ ತರಗತಿಯ ಕೊನೆಯ ಸೆಮಿಸ್ಟರ್‌ನ ಪರೀಕ್ಷೆ ಮುಗಿದು ಕೇವಲ ಮೂರು ಗಂಟೆಗಳಲ್ಲೇ ರಾಜ್ಯಾದ್ಯಂತ ಫಲಿತಾಂಶ ಪ್ರಕಟಿಸಿದೆ. ಆ ಮೂಲಕ ವಿಟಿಯು ಪರೀಕ್ಷಾ ಫಲಿತಾಂಶದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ.

ಕಳೆದ 25 ವರ್ಷಗಳ ಇತಿಹಾಸದಲ್ಲಿಯೇ ಇಷ್ಟು ವೇಗವಾಗಿ ವಿಟಿಯು ಫಲಿತಾಂಶ ಪ್ರಕಟಿಸಿದ್ದು, ಇದೆ ಮೊದಲ ಬಾರಿಯಾಗಿದೆ. ವಿಟಿಯು ಅಡಿಯಲ್ಲಿ ಬರುವ ಅಂತಿಮ ವರ್ಷದ ಬಿಇ/ ಬಿ.ಟೆಕ್/ ಬಿ.ಆರ್ಕ್/ ಬಿ.ಪ್ಲಾನ್ ಸೆಮಿಸ್ಟರ್ ಪರೀಕ್ಷೆಯು ರಾಜ್ಯಾದ್ಯಂತ ಮೇ 30ರಂದು ಸಂಜೆ 5.30ಕ್ಕೆ ಮುಕ್ತಾಯವಾಗಿದೆ. 42,323 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ರಾತ್ರಿ 8.30ಕ್ಕೆ ವಿದ್ಯಾರ್ಥಿಗಳ ವಾಟ್ಸಪ್‌ಗೆ ಫಲಿತಾಂಶ ರವಾನಿಸಲಾಗಿದೆ ಎಂದು ವಿಟಿಯುನ ಕುಲಪತಿ ಡಾ.ಎಸ್.ವಿದ್ಯಾಶಂಕರ ತಿಳಿಸಿದ್ದಾರೆ.ಇಷ್ಟು ಬೇಗ ಫಲಿತಾಂಶ ಸಾಧ್ಯವಾಗಿದ್ದು ಹೇಗೆ?:

ಈ ಮೊದಲು ರಾಜ್ಯಾದ್ಯಂತ ಪ್ರಾಯೋಗಿಕ ಪರೀಕ್ಷೆ ಮುಗಿಸಿ, ನಂತರ ಥಿಯರಿ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದರಿಂದ ಫಲಿತಾಂಶ ಕೂಡ ವಿಳಂಬವಾಗುತ್ತಿತ್ತು. ಆದರೀಗ ವಿಟಿಯುಗೆ ಡಾ.ಎಸ್.ವಿದ್ಯಾಶಂಕರ ಕುಲಪತಿಯಾಗಿ ಬಂದ ನಂತರ ಮೊದಲು ಥಿಯರಿ ಪರೀಕ್ಷೆಗಳನ್ನು ನಡೆಸಿ, ನಂತರ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿದರು. ನಂತರ ಪರೀಕ್ಷೆ ಮುಗಿದು ಕೇವಲ 3 ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಯಿತು.

ಜೊತೆಗೆ, ರಾಜ್ಯಾದ್ಯಂತ ಇದ್ದ 16 ಡಿಜಿಟಲ್‌ ಮೌಲ್ಯಮಾಪನ ಕೇಂದ್ರಗಳನ್ನು 28ಕ್ಕೆ ಏರಿಸುವ ಮೂಲಕ ಪರೀಕ್ಷಾ ಮೌಲ್ಯಮಾಪನಾ ತ್ವರಿತವಾಗಲು ಸಹಾಯಕವಾಯಿತು. ಮೇ 16ರಿಂದ ಅಂತಿಮ ವರ್ಷದ ಎಲ್ಲ ಎಂಜಿನಿಯರಿಂಗ್‌ ಕೋರ್ಸ್‌ಗಳ ಕೊನೆಯ ಸೆಮಿಸ್ಟರ್‌ ಪರೀಕ್ಷೆಗಳು ಆರಂಭಗೊಂಡವು. ಮೇ 25ಕ್ಕೆ ಎಲ್ಲ ಥಿಯರಿ ಪರೀಕ್ಷೆಗಳು ಮುಕ್ತಾಯಗೊಂಡವು. ಬಳಿಕ ಮೂರೇ ದಿನಗಳಲ್ಲಿ ಎಲ್ಲ 28 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ಮುಗಿದು, ವಿದ್ಯಾರ್ಥಿಗಳ ಅಂಕಗಳನ್ನು ಸರ್ವರ್‌ಗೆ ಅಪಲೋಡ್‌ ಮಾಡಲಾಗಿತ್ತು.

ಇದಾದ ಬಳಿಕ ಮೇ 27ರಿಂದ ಮೇ 30ರ ಸಂಜೆ 5.30ಕ್ಕೆ ಪ್ರಾಯೋಗಿಕ ಪರೀಕ್ಷೆಗಳು ಮುಕ್ತಾಯಗೊಂಡವು. ಅದೇ ದಿನದಂದು ಪ್ರಾಯೋಗಿಕ ಪರೀಕ್ಷೆಗಳ ಅಂಕಗಳನ್ನು ಕೂಡ ತ್ವರಿತವಾಗಿ ಸರ್ವರ್‌ಗೆ ಅಪ್‌ಲೋಡ್‌ ಮಾಡಲಾಯಿತು. ಅದರ ಪರಿಣಾಮವೇ ಮೇ 30ರಂದೇ ಕೇವಲ ಮೂರು ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟಿಸಿತು.

ತ್ವರಿತ ಫಲಿತಾಂಶದಿಂದ ವಿದ್ಯಾರ್ಥಿಗಳಿಗೆ ಏನು ಅನುಕೂಲ?:

ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲು, ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಹಾಯವಾಗಲು ಮತ್ತು ಉತ್ಕೃಷ್ಟ ಕಂಪನಿಗಳಲ್ಲಿ ನೌಕರಿ ಹೊಂದಲು ತ್ವರಿತ ಫಲಿತಾಂಶ ಬಹಳ ಸಹಾಯಕವಾಗಿದೆ. ಯುಎಸ್‌ಎ, ಬ್ರಿಟನ್‌ ಸೇರಿದಂತೆ ವಿದೇಶಗಳಲ್ಲಿ ಜೂನ್‌ ಅಥವಾ ಜುಲೈನಲ್ಲಿ ಉನ್ನತ ವ್ಯಾಸಂಗ ಮಾಡಲು ತರಗತಿಗಳು ಆರಂಭವಾಗುತ್ತವೆ. ಮಾತ್ರವಲ್ಲ, ಈಗಾಗಲೇ ಕಂಪನಿಗಳಲ್ಲಿ ಕೆಲಸಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಪಾಸ್‌ ಸರ್ಟಿಫಿಕೇಟ್‌ ಪಡೆಯಲು ಇದು ಹೆಚ್ಚು ಅನುಕೂಲವಾಗಲಿದೆ. ಮಾತ್ರವಲ್ಲ, ಜೊತೆಗೆ ಎಲ್ಲ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಪದವಿಯನ್ನು ಯಶಸ್ವಿಯಾಗಿ ಮುಗಿಸಿದ ವಿದ್ಯಾರ್ಥಿಗಳು ಪ್ರೊವಿಸನಲ್‌ ಡಿಗ್ರಿ ಸರ್ಟಿಫಿಕೇಟ್‌(ಪಿಡಿಸಿ)ಗಳನ್ನು ಜೂನ್‌ 3 ರಿಂದ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.ಕೋಟ್‌:

ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು, ಕಂಪನಿಯಲ್ಲಿ ವೇಗವಾಗಿ ಕೆಲಸ ಪಡೆಯಲು ಇದು ಸಹಾಯಕವಾಗಿದೆ. ಐಐಟಿಗಿಂತ ಫಾಸ್ಟ್‌ ಆಗಿ ನಾವು ಫಲಿತಾಂಶ ಕೊಡುತ್ತಿದ್ದೇವೆ. ದೇಶದ ಯಾವ ಭಾಗದಲ್ಲಿಯೂ ಇಷ್ಟು ತ್ವರಿತವಾಗಿ ಫಲಿತಾಂಶ ಪ್ರಕಟಿಸಿದ ಯಾವ ವಿವಿ ಇಲ್ಲ. ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಆರಂಭದಲ್ಲಿಯೇ ಯೋಜನೆ ಹಾಕಲು ತ್ವರಿತ ಫಲಿತಾಂಶ ಸಹಾಯವಾಗಲಿದೆ. ಜು.18ಕ್ಕೆ ಘಟಿಕೋತ್ಸವ ಮಾಡಲು ತೀರ್ಮಾನಿಸಿದ್ದು, ಜು.20ಕ್ಕೆ ವಿದ್ಯಾರ್ಥಿಗಳು ಘಟಿಕೋತ್ಸವ ಪ್ರಮಾಣ ಪತ್ರ ಪಡೆಯುತ್ತಾರೆ. ಈ ಹಿಂದೆ ವಿಟಿಯು ಅಂದರೆ ಫಲಿತಾಂಶ ಬೇಗ ಕೊಡಲ್ಲ. 2, 3 ತಿಂಗಳು ತೆಗೆದುಕೊಳ್ಳುತ್ತಾರೆ ಎಂಬ ಆರೋಪ ಇತ್ತು. ಈಗ ಇಷ್ಟು ವೇಗವಾಗಿ ಫಲಿತಾಂಶ ನೀಡುತ್ತಿದ್ದೇವೆ.

- ಡಾ.ಎಸ್.ವಿದ್ಯಾಶಂಕರ, ವಿಟಿಯು ಕುಲಪತಿ.