ವಿವಿ ಸಾಗರ ಜಲಾಶಯ ಕೊಡಿ ಬಿಳುವ ದಿನ ಕಣ್ಣೆದುರು

| Published : Jan 09 2025, 12:47 AM IST

ಸಾರಾಂಶ

ಜಲಾಶಯದ ಕೋಡಿ ಬೀಳುವ ಸ್ಥಳ ವೀಕ್ಷಿಸುತ್ತಿರುವ ಸಚಿವ ಡಿ ಸುಧಾಕರ್

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಜಿಲ್ಲೆಯ ಜನರಿಗೆ ಮತ್ತೊಂದು ಅವಿಸ್ಮರಣೀಯ ಕ್ಷಣ ಕಣ್ಣೆದುರು ಬರಲಿದೆ. ವಿವಿ ಸಾಗರ ಜಲಾಶಯ 2025 ರ ಆರಂಭದ ತಿಂಗಳಲ್ಲೇ 3ನೇ ಬಾರಿ ಕೋಡಿ ಬೀಳಲಿದೆ. ಬುಧವಾರದ ಹೊತ್ತಿಗೆ 129.85 ಅಡಿಯಷ್ಟು ನೀರು ಸಂಗ್ರಹವಾಗಿದ್ದು,

ಕೋಡಿ ಬಿಳುವ ದಿನಗಳು ಕಣ್ಣೆದುರೇ ಇವೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸಿಎಂ ಮತ್ತು ಡಿಸಿಎಂ ಅವರನ್ನು ಬಾಗಿನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ತಾಲೂಕಿನ ತುಂಬಾ ಹಬ್ಬದ ವಾತಾವರಣ ಸೃಷ್ಠಿಸಲು ತಯಾರಿ ನಡೆದಿದೆ.

ಬಾಗಿನದ ಜಾಗದ ಸ್ಥಳ ಪರಿಶೀಲನೆ ಮಾಡಿರುವ ಜಿಲ್ಲಾಧಿಕಾರಿಗಳು ಎಲ್ಲಾ ರೀತಿಯ ಸುರಕ್ಷಿತ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ 2022ರಲ್ಲಿ ಕೋಡಿ ಬಿದ್ದ ವಿಡಿಯೋಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಕೆಲವರು ಕೋಡಿ ಬಿದ್ದಿದೆ ಎಂಬ ಸುಳ್ಳು ಸುದ್ದಿಯ ಆನಂದ ಅನುಭವಿಸುತ್ತಿದ್ದಾರೆ.

ಸಚಿವ ಡಿ.ಸುಧಾಕರ್ ರವರ ಪಾಲಿಗೆ ವಿವಿ ಸಾಗರ ತುಂಬಿ ಕೋಡಿ ಬೀಳುವ ಕ್ಷಣಗಳು ಅವಿಸ್ಮರಣೀಯವಾಗಿ ಉಳಿಯಲಿವೆ. 2016-18 ರಲ್ಲಿ ಬರವನ್ನು ಮತ್ತು ಅದರ ಅನಾಹುತಗಳನ್ನು ಪ್ರಕೃತಿ ಮಡಿಲಿನಿಂದ ಎತ್ತಿ ಸಚಿವ ಡಿ.ಸುಧಾಕರ್ ರವರ ಮೇಲೆ ಕೂರಿಸಿ ಚುನಾವಣೆ ಲಾಭ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಗಿಡ ಮರ ಒಣಗಿದ್ದಕ್ಕೂ ಅಧಿಕಾರದಲ್ಲಿರುವವರ ಕಾಲ್ಗುಣ ಎಂದು ಹಬ್ಬಿಸಿದ ಸುದ್ದಿ ಅವರ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ ಕ್ಷೇತ್ರದ ಜನರ ಟೀಕೆಗಳನ್ನು ಅರಗಿಸಿಕೊಂಡು ಮತ್ತೆ 2023ರಲ್ಲಿ ಗೆದ್ದ ನಂತರ ವಿವಿ ಸಾಗರಕ್ಕೆ ಭದ್ರೆ ನೀರು ತರುವ ಜವಾಬ್ದಾರಿ ಮರೆಯಲಿಲ್ಲ. ನಿರಂತರವಾಗಿ ಜಲ ಸಂಪನ್ಮೂಲ ಸಚಿವರ ಸಂಪರ್ಕ ಹೊಂದಿ ಕೆರೆ ತುಂಬಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಜೊತೆಗೆ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಕುಡಿಯುವ ನೀರಿನ ಯೋಜನೆಗೆ ಪ್ರಥಮ ಆದ್ಯತೆ ನೀಡಿದರು. ಇದೀಗ ವಿವಿ ಸಾಗರ ಮತ್ತೊಮ್ಮೆ ಮೈ ತುಂಬಿಕೊಂಡಿದ್ದು ರಾಜಕೀಯ ಟೀಕೆ ಟಿಪ್ಪಣಿಗಳೇನೇ ಇರಲಿ ತಾಲೂಕಿನ ಮತ್ತು ಜಿಲ್ಲೆಯ ಜನರ ಸಂಭ್ರಮಕ್ಕೆ ಕಾರಣವಾಗಿದೆ.

ಇವು ಬಂದ ನೀರಲ್ಲ, ತಂದ ನೀರು: ಸಚಿವ ಡಿ.ಸುಧಾಕರ್ ರವರ ಬದ್ಧತೆ ಮತ್ತು ಸಲ್ಲದ ಟೀಕೆಗಳಿಗೆ ಉತ್ತರ ಕೊಡುವ ಹಠ ಕೊನೆಗೂ ಕೆಲಸ ಮಾಡಿದೆ. ಬರಗಾಲ, ಕಾಲ್ಗುಣ ಎಂಬ ಕ್ಷುಲ್ಲಕ ಟೀಕೆಗಳಿಗೆ ಸಮಾಧಾನದಿಂದಲೇ ಕೆಲಸ ಮಾಡುತ್ತಾ ಉತ್ತರ ಕೊಟ್ಟ ಸಚಿವರು, ನೀರಿನ ವಿಚಾರದಲ್ಲಿ ಕಿಂಚಿತ್ತೂ ಸಮಯ ವ್ಯರ್ಥ ಮಾಡದೇ ಜಲಾಶಯಕ್ಕೆ ನೀರು ಹರಿಸಲು ಓಡಾಡಿ ಆದೇಶಗಳನ್ನು ಮಾಡಿಸಿದರು.

ಇದೀಗ ಜನವರಿವರೆಗೆ 700 ಕ್ಯುಸೆಕ್ ನೀರು ಹರಿಸಿ ಎಂದು ಜಲ ಸಂಪನ್ಮೂಲ ಸಚಿವರಿಗೆ ಪತ್ರ ಬರೆದು ಮನವಿ ಮಾಡಿ ನೀರು ಬಿಡುಗಡೆಗೆ ಆದೇಶ ಹೊರಡಿಸಿ ಜಲಾಶಯ ಮತ್ತೊಮ್ಮೆ ಕೋಡಿ ಸನಿಹಕ್ಕೆ ಬರಲು ಕಾರಣರಾಗಿದ್ದಾರೆ.

2013 ರಿಂದ 18ರವರೆಗೆ ಶಾಸಕರಾಗಿದ್ದಾಗ ಕೊನೆಯ ಅವಧಿಯಲ್ಲಿ ಮಳೆ ಇಲ್ಲದೇ ತಾಲೂಕಿನ ತೆಂಗಿನಮರಗಳು ಬಹಳಷ್ಟು ಒಣಗಿದ್ದುದನ್ನು ಕಣ್ಣಾರೆ ಕಂಡಿದ್ದ ಸಚಿವರು ಈ ಬಾರಿ ನೀರಿನ ಕ್ರೋಡಿಕರಣಕ್ಕೆ ಒತ್ತು ಕೊಟ್ಟು ಜಲಾಷಯ ತುಂಬಲು ಕಾರಣರಾಗಿದ್ದಾರೆ. 2022ರಲ್ಲೂ ಜಲಾಶಯ 89ವರ್ಷಗಳ ನಂತರ ಕೋಡಿ ಬಿದ್ದಿತ್ತು. ಆದರೆ ಆಗ ಕೋಡಿ ಬೀಳುವಲ್ಲಿ ನಿರಂತರ ಮಳೆಯು ಪ್ರಮುಖ ಕಾರಣವಾಗಿತ್ತು. ಇದೀಗ ಮಳೆಯ ಜೊತೆಗೆ ಭದ್ರಾ ನೀರನ್ನೂ ಹರಿಸಿದ್ದರಿಂದ ಮತ್ತೆ ಕೋಡಿ ಬೀಳುವ ಕ್ಷಣಗಳಿಗೆ ಜಿಲ್ಲೆ ಸಾಕ್ಷಿಯಾಗಲಿದೆ.