ವಾಡಿ: ಒಳ ಸೇತುವೆ ನಿರ್ಮಿಸಲು ಜನಧ್ವನಿ ಒತ್ತಾಯ

| Published : Jan 19 2024, 01:47 AM IST

ಸಾರಾಂಶ

ಏಳು ದಶಕದ ನಂತರ ಕೇಂದ್ರ ಸರ್ಕಾರ ವಾಡಿ ರೈಲು ನಿಲ್ದಾಣದ ಜೀರ್ಣೋದ್ಧಾರಕ್ಕೆ ಮುಂದಾಗಿದೆ. ಇದಕ್ಕಾಗಿ ನೂರಾರು ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ನೂತನ ಪ್ಲಾಟ್‌ಫಾರ್ಮ್-೫ರ ಕಾಮಗಾರಿ ಭರದಿಂದ ಸಾಗಿರುವುದು ಸಂತೋಷದ ಸಂಗತಿ. ಆದರೆ ರೈಲು ನಿಲ್ದಾಣದ ಹಳಿ ಮಾರ್ಗದ ಎಡ ಮತ್ತು ಬಲ ಭಾಗದ ವಿವಿಧ ಬಡಾವಣೆಗಳ ಜನರ ಸಂಚಾರಕ್ಕಾಗಿ ಒಳ ಸೇತುವೆ ನಿರ್ಮಿಸಬೇಕು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಪಟ್ಟಣದ ರೈಲು ನಿಲ್ದಾಣ ಪ್ರದೇಶದ ರೈಲು ಹಳಿ ಮಾರ್ಗಕ್ಕೆ ಒಳ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿ ಪದಾಧಿಕಾರಿಗಳು, ಸೆಂಟ್ರಲ್ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಜನಧ್ವನಿ ಜಾಗೃತ ಸಮಿತಿ ಗೌರವಾಧ್ಯಕ್ಷ ವಿ.ಕೆ. ಕೇದಿಲಾಯ, ಏಳು ದಶಕದ ನಂತರ ಕೇಂದ್ರ ಸರ್ಕಾರ ವಾಡಿ ರೈಲು ನಿಲ್ದಾಣದ ಜೀರ್ಣೋದ್ಧಾರಕ್ಕೆ ಮುಂದಾಗಿದೆ. ಇದಕ್ಕಾಗಿ ನೂರಾರು ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ನೂತನ ಪ್ಲಾಟ್‌ಫಾರ್ಮ್-೫ರ ಕಾಮಗಾರಿ ಭರದಿಂದ ಸಾಗಿರುವುದು ಸಂತೋಷದ ಸಂಗತಿ. ಆದರೆ ರೈಲು ನಿಲ್ದಾಣದ ಹಳಿ ಮಾರ್ಗದ ಎಡ ಮತ್ತು ಬಲ ಭಾಗದ ವಿವಿಧ ಬಡಾವಣೆಗಳ ಜನರ ಸಂಚಾರಕ್ಕಾಗಿ ಒಳ ಸೇತುವೆ ನಿರ್ಮಿಸುವುದನ್ನು ಇಲಾಖೆ ಮರೆತಿದೆ. ದೇಶದ ಪ್ರತಿ ರೈಲು ನಿಲ್ದಾಣಕ್ಕೆ ಒಳ ಸೇತುವೆ ಸೌಲಭ್ಯ ಅತ್ಯಗತ್ಯವಾಗಿ ಒದಗಿಸಲಾಗಿದೆ.

ಆದರೆ, ವಾಡಿ ರೈಲು ನಿಲ್ದಾಣದ ಅಭಿವೃದ್ಧಿಯಲ್ಲಿ ಈ ಯೋಜನೆ ಕೈಬಿಟ್ಟಿರುವುದು ಜನ ವಿರೋಧಿ ನಿಲುವಾಗಿದೆ. ಹಳಿ ಮಾರ್ಗಕ್ಕೆ ಅಧಿಕೃತ ರಸ್ತೆಯಿಲ್ಲದ ಕಾರಣ ಹನುಮಾನ ನಗರ, ವಿಜಯನಗರ, ಇಂದ್ರಾ ನಗರ, ರೈಲ್ವೆ ಕಾಲೋನಿಯ ನಿವಾಸಿಗಳು ಕಳೆದ ಹಲವು ವರ್ಷಗಳಿಂದ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ಜನರು ಅಪಘಾತಕ್ಕೀಡಾಗಿದ್ದಾರೆ. ನಗರದಲ್ಲಿರುವ ಆಸ್ಪತ್ರೆ, ಶಾಲಾ-ಕಾಲೇಜು, ಮಾರುಕಟ್ಟೆ, ಬಸ್ ನಿಲ್ದಾಣಗಳಿಗೆ ಬರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಕೂಡಲೆ ರೈಲು ನಿಲ್ದಾಣಕ್ಕೆ ಒಳ ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವುಲಿಂಗ ಹಳ್ಳಿಕರ್ ಮಾತನಾಡಿ, ವಾಡಿ ನಗರದ ನಿವಾಸಿಗಳು ವಿವಿಧ ಬಡಾವಣೆಗಳ ಜನರ ಸಂಪರ್ಕ ಸಾಧಿಸಲು ರೈಲು ಮಾರ್ಗಕ್ಕೆ ಒಳ ಸೇತುವೆ ಹಾಗೂ ಮೇಲ್ಸೇತುವೆ ಸೌಲಭ್ಯ ಕಲ್ಪಿಸುವುದು ಮುಖ್ಯವಾಗಿದೆ. ರೈಲ್ವೆ ಇಲಾಖೆ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಹತ್ತು ದಿನದೊಳಗಾಗಿ ಇಲಾಖೆ ನಮಗೆ ಪತ್ರದ ಮೂಲಕ ಪ್ರತಿಕ್ರೀಯೆ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಸೊಲ್ಲಾಪುರ ಸೆಂಟ್ರೆಲ್ ರೈಲ್ವೆ ಡಿಆರ್‌ಎಂಗೆ ಬರೆದ ಮನವಿ ಪತ್ರವನ್ನು ನಿಲ್ದಾಣದ ಡೆಪ್ಯೂಟಿ ಷ್ಟೇಷನ್ ಮ್ಯಾನೇಜರ್ ವಿವೇಕ ಕುಮಾರ ಸ್ವೀಕರಿಸಿದರು.

ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ, ಹಿರಿಯರಾದ ಜಯದೇವ ಜೋಗಿಕಲ್‌ಮಠ, ಸಿದ್ದಯ್ಯಶಾಸ್ತ್ರೀ ನಂದೂರಮಠ, ಶಿವಪ್ಪ ಮುಂಡರಗಿ, ಮುಖಂಡರಾದ ಜಾನ್ ವೆಲ್ಲೆಸ್ಲಿ, ಮಹ್ಮದ್ ಮೌಲಾ ಪಾಲ್ಗೊಂಡಿದ್ದರು.