ಸಾರಾಂಶ
ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿನೂತನ ತಾಲೂಕಿನ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಸರ್ವಾಧ್ಯಕ್ಷರಾದ ಸರಳ ಮತ್ತು ಸಜ್ಜನಿಕೆಯ ಕೂಲಿ ಕಾರ್ಮಿಕರಾಗಿರುವ ಸಾಹಿತಿ ಸಂಗಮೇಶ ಕರೆಪ್ಪಗೋಳ ಜೀವನ ಅನೇಕ ಉದಯನ್ಮೋಖ ಬರಹಗಾರರಿಗೆ ಮಾದರಿಯಾಗಿದೆ.
ತಾಲೂಕಿನ ಭೈರವಾಡಗಿ ಗ್ರಾಮದವರಾಗಿದ್ದು, ವೃತ್ತಿಯಲ್ಲಿ ಕೂಲಿ ಕಾರ್ಮಿಕರು. ಪ್ರವೃತ್ತಿಯಲ್ಲಿ ಹಾಡು, ಬರಹಗಾರರಾಗಿ ಸರ್ಕಾರ ನೀಡಿದ ಜನತಾ ಮನೆಯನ್ನು ಮಹಾಮನೆನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಂಗಮೇಶ ಕರೆಪ್ಪಗೋಳ ದಂಪತಿಗೆ ಇಬ್ಬರು ಮಕ್ಕಳು. ತಮ್ಮ ಮೆನೆಗೆ ಕನ್ನಡ ಕವಿ ಕೋಗಿಲೆಯ ನಿವಾಸ ಎಂದು ಹೆಸರಿಟ್ಟಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿನ ಅವರ ಹಿರಿತನವನ್ನು ಗುರುತಿಸಿ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು, ರಾಜಕೀಯ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾಹಿತ್ಯಾಸಕ್ತರು ಸೇರಿ ಇವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ದೇವಾನು ದೇವತೆಗಳ ಬೀಡು ಎಂದೇ ಹೆಸರಾಗಿರುವ ದೇವರಹಿಪ್ಪರಗಿ ಪಟ್ಟಣ ನೂತನ ತಾಲೂಕಿನ ಕೇಂದ್ರವಾದ ಬಳಿಕ ಪ್ರಪ್ರಥಮ ಸಮ್ಮೇಳನ ನಡೆಯುತ್ತಿದೆ. ಪಟ್ಟಣ ಸೇರಿದಂತೆ ತಾಲೂಕಿನ ಮನೆ- ಮನಗಳಲ್ಲಿ ಕನ್ನಡದ ನುಡಿ ಜಾತ್ರೆ-2025ನೇ ಜನವರಿ 3 ರಂದು ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪ.ಪೂ ಕಾಲೇಜು ಮೈದಾನದಲ್ಲಿ ನಡೆಯುತ್ತಿದೆ.ಮೊದಲ ಅಧ್ಯಕ್ಷತೆ ಹಿರಿಮೆ:
ದೇವರಹಿಪ್ಪರಗಿ ತಾಲೂಕಿನ ದೋಣಿ ತೀರದ ಭೈರವಾಡಗಿ ಗ್ರಾಮದ ಸಂಗಮೇಶ ಕರೆಪ್ಪಗೋಳ ಆ.15ರ 1965 ರಲ್ಲಿ ಅವರ ತಾಯಿಯ ಊರು ಕಡಕೋಳ ಗ್ರಾಮದಲ್ಲಿ ಜನಿಸಿದರು. ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ, ಪ್ರೌಢ ಶಿಕ್ಷಣವನ್ನು ಯಾಳವರ ಗ್ರಾಮದ ಎಸ್.ಎಸ್.ವಿ.ವಿ ಪ್ರೌಢಶಾಲೆಯಲ್ಲಿ, ಪಿಯುಸಿ ಎಚ್.ಜಿ.ಕಾಲೇಜ ಸಿಂದಗಿಯಲ್ಲಿ ಹಾಗೂ ಬಿ.ಎ.ಪದವಿಯನ್ನು ಸಿಂದಗಿಯ ನ್ಯೂ ಆರ್ಟ್ಸ್ ಕಾಲೇಜಿನಲ್ಲಿ ಮುಗಿಸಿದರು. ಮುಂದೆ ಆಸ್ತಿ ಅಂತಸ್ತು ಇಲ್ಲದೆ ಕಾಯಕದ ಜೊತೆಯಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸುಮಾರು 8 ಕೃತಿಗಳನ್ನು ಹೊರ ತಂದಿದ್ದಾರೆ. 3 ನಾಟಕ ಕೃತಿಗಳ ಜೊತೆ ಹಲವು ನಾಟಕಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸುಮಾರು 36 ಧ್ವನಿ ಸುರುಳಿಯಲ್ಲಿ ಹಾಡಿದ್ದು, 50ಕ್ಕೂ ಹೆಚ್ಚು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ.ಬಾಕ್ಸ್...
ಸಂದ ಪ್ರಶಸ್ತಿಗಳುಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸಾರ್ಥಕ ಸೇವೆ ನೀಡುತ್ತ ಬಂದ ಹಿನ್ನೆಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಘಟಕ ಸುವರ್ಣ ಕನ್ನಡ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದ ಸಾಧನೆಗೆ ವಿಜಯಪುರ ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಸೇರಿದಂತೆ ಹಲವಾರು ತಾಲೂಕ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಗೌರವಗಳು ಸಂದಿವೆ.
ಕೋಟ್....ಅರ್ಜಿ ಹಾಕುವವರೆಲ್ಲರೂ ಸರ್ವಾಧ್ಯಕ್ಷರಾಗಲು ಅರ್ಹತೆ ಪಡೆದಿರುತ್ತಾರೆ. ಆದರೆ, ಒಬ್ಬರನ್ನೇ ಆಯ್ಕೆ ಮಾಡಬೇಕಾಗುತ್ತದೆ. ಒಬ್ಬ ಕೂಲಿ ಕಾರ್ಮಿಕನ ಮನೆಯವರೆಗೆ ಹೋಗುವ ಸಾಮರ್ಥ್ಯ ಪರಿಷತ್ ಹೊಂದಿದೆ. ನಿಷ್ಪಕ್ಷಪಾತವಾಗಿ ಇಡೀ ರಾಜ್ಯ ಜಿಲ್ಲೆ ಹಾಗೂ ತಾಲೂಕಿನ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಇದೆ ಪ್ರಕಾರ ಮಾಡುತ್ತೇವೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಪಟ್ಟಣದ ಇತಿಹಾಸಕ್ಕೆ ಮತ್ತೊಂದು ಗರಿ ತೊಡಿಸಿದಂತೆ. ಕನ್ನಡ ಸೇವೆಗೆ ಪಟ್ಟಣ ಸೇರಿದಂತೆ ತಾಲೂಕಿನ ಜನರು ಹಾಗೂ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲ ಹಿರಿಯರು ಸೇರಿ ಕೂಲಿ ಕಾರ್ಮಿಕ, ಕವಿ ಸಂಗಮೇಶ ಕರೆಪ್ಪಗೋಳ ಅವರನ್ನು ಸರ್ವಧ್ಯಕ್ಷರನ್ನಾಗಿ ನೇಮಿಸಲಾಗಿದೆ.
-ಹಾಸಿಂಪೀರ ವಾಲೀಕಾರ, ಕಸಾಪ ಜಿಲ್ಲಾಧ್ಯಕ್ಷರು.