ರಾಜ್ಯದ ಇತಿಹಾಸದಲ್ಲೇ 145 ವರ್ಷಗಳ ನಂತರ ಭೀಕರ ಬರ ಆವರಿಸಿದ್ದು, ರೈತರಿಗೆ ಪ್ರತಿ ಎಕರೆಗೆ ₹2500 ಭಿಕ್ಷೆ ನೀಡುವ ಬದಲು ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಬೆಳೆ ಸಾಲ ಸಂಪೂರ್ಣ ಮನ್ನಾ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
- ಭೀಕರ ಬರ ಹಿನ್ನೆಲೆ ₹2500 ಭಿಕ್ಷೆ ಬೇಡ, ಎಕರೆಗೆ ₹25000 ಪರಿಹಾರ ಕೊಡಿ: ಸರ್ಕಾರಕ್ಕ ಹೊನ್ನೂರು ಮುನಿಯಪ್ಪ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯದ ಇತಿಹಾಸದಲ್ಲೇ 145 ವರ್ಷಗಳ ನಂತರ ಭೀಕರ ಬರ ಆವರಿಸಿದ್ದು, ರೈತರಿಗೆ ಪ್ರತಿ ಎಕರೆಗೆ ₹2500 ಭಿಕ್ಷೆ ನೀಡುವ ಬದಲು ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಬೆಳೆ ಸಾಲ ಸಂಪೂರ್ಣ ಮನ್ನಾ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ತೀವ್ರ ಬರ ಆವರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಭಿಕ್ಷೆ ನೀಡುವಂತೆ ಎಕರೆಗೆ ₹2,500 ಬರ ಪರಿಹಾರ ಘೋಷಿಸಿದ್ದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ರೈತರೆ ಜನರಿಂದ ಚಿಲ್ಲರೆ ಸಂಗ್ರಹಿಸಿ, ಸರ್ಕಾರಕ್ಕೆ ಕಳಿಸಿಕೊಡುವ ಮೂಲಕ ಅನ್ನದಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸದಂತೆ ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದರು.ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ರೈತರ ಸಂಕಷ್ಟಗಳನ್ನು ಅರ್ಥ ಮಾಡಿಕೊಳ್ಳಲಿ. ಅರೆ ಸಾಲ, ಪೂರ್ಣ ಸಾಲ ಅಂತೆಲ್ಲಾ ಮಾಡುವ ಬದಲಿಗೆ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಸಂಪೂರ್ಣ ಮನ್ನಾ ಮಾಡಲಿ. ಬೆಳೆ ಸಾಲ, ದೀರ್ಘಾವಧಿ ಸಾಲದ ಬಡ್ಡಿ ಮನ್ನಾ ಮಾಡದಿದ್ದರೆ ಇನ್ನೂ 5 ವರ್ಷ ಏನೇ ಬೆಳೆ ಬೆಳೆದರೂ ರೈತರ ಬದುಕು ಸಂಕಷ್ಟದಿಂದ ಹೊರಬರಲಾಗದು ಎಂದು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಮೇವಿಗಷ್ಟೇ ತೊಂದರೆಯಾಗಿದೆ. ಸರ್ಕಾರ ರೈತರ ನೆರವಿಗೆ ಧಾವಿಸದಿದ್ದರೆ ಮುಂದಿನ ದಿನಗಳಲ್ಲಿ ಅನ್ನಕ್ಕೂ ಬರ ಬಂದೀತು. ಗ್ರಾಮೀಣ ಜನರು ಗುಳೆ ಹೋಗುವುದನ್ನು ತಪ್ಪಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣರಿಗೆ ವರ್ಷ ಪೂರ್ತಿ ಕೆಲಸ ಕೊಡಬೇಕು. 6 ತಿಂಗಳ ಕೆಲಸ ನೀಡುತ್ತಿರುವುದು ಸಾಲದು. ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು, ರೈತರು ಅನ್ನ, ಕೆಲಸ ಅರಸಿ, ಗುಳೆ ಹೋಗುವುದನ್ನು ತಡೆಯುವ ಕೆಲಸ ಆಗಲಿ. ಈ ಮೂಲಕ ಕೃಷಿ ಪೂರಕ ಕಾಮಗಾರಿಗೆ ಒತ್ತು ನೀಡಲಿ ಎಂದು ಆಗ್ರಹಿಸಿದರು.ಕೃಷಿ ವಿ.ವಿ.ಗಳ ವಿಜ್ಞಾನಿಗಳು ಕ್ಯಾಂಪಸ್‌ನಿಂದ ಹೊರಬಂದು, ರೈತರ ಬಳಿ ಹೋಗಿ ಬರ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಕೃಷಿ ವಿಜ್ಞಾನಿಗಳು ಅನೇಕ ಸಂಶೋಧನೆ, ಆವಿಷ್ಕಾರಗಳನ್ನು ಮಾಡಿದ್ದಾರೆ. ಅವೆಲ್ಲರೂ ಬರಗಾಲದಲ್ಲಿ ನಿಭಾಯಿಸುವ ವಿಚಾರವಾಗಿ ರೈತರ ತಾಕಿಗೆ ಬಂದು, ಜನ-ಜಾನುವಾರುಗಳ ಬದುಕಲು ಅವಶ್ಯಕ ಮಾಹಿತಿ ನೀಡಲಿ. ಜನ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿ, ನೌಕರರು ಬರ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ಉದಾರವಾಗಿ, ಶಕ್ತ್ಯಾನುಸಾರ ತಮ್ಮ ವೇತನವನ್ನು ಬರ ಪರಿಹಾರ ನಿಧಿಗೆ ನೀಡಬೇಕು ಎಂದು ಮನವಿ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಪಿ.ಪಿ. ಮರುಳಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಕೆಂಪನಹಳ್ಳಿ ಗಣೇಶ, ಪಿ.ಬಸವರಾಜ ಗೋಶಾಲೆ, ಹಸಿರು ಸೇನೆ ರಾಜ್ಯ ಸಂಚಾಲಕ ಸಂತೋಷ ನಾಯ್ಕ, ಹೊನ್ನಾಳಿ-ನ್ಯಾಮತಿ ಅಧ್ಯಕ್ಷ ಎಚ್.ಜಿ. ಬಸವರಾಜಪ್ಪ, ಜಿ.ಆರ್.ಮಂಜುನಾಥ, ಮಾಯಕೊಂಡ ಬೀರಪ್ಪ, ಎಂ.ಯು.ನಾಗರಾಜ, ಎನ್.ಜಿ.ಶಿವಕುಮಾರ, ಎಚ್.ರಂಗಪ್ಪ, ಕುಂದೂರು ಶಿವಕುಮಾರ, ಹೊನ್ನಾಳಿ ರಂಗನಾಥ ಇತರರು ಇದ್ದರು.- - -
(ಬಾಕ್ಸ್)* ಅಂತರ್ಜಲ ರಕ್ಷಣೆಗೆ ಹೆಚ್ಚು ಹಣ ಮೀಸಲಿಟ್ಟು ಯೋಜನೆ ಕೈಗೊಳ್ಳಬೇಕು
ಮುಂದಿನ ದಿನಗಳಲ್ಲಿ ಬರ ನಿಭಾಯಿಸಲು ಶಾಶ್ವತ ಬರ ಪರಿಹಾರ ಕಾರ್ಯಕ್ಕೆ ಏತ ನೀರಾವರಿ ಯೋಜನೆಗಳು, ಜಲಾನಯನ ಅಭಿವೃದ್ಧಿ ಮೂಲಕ ಅಂತರ್ಜಲ ರಕ್ಷಣೆಗೆ ಹೆಚ್ಚು ಹಣ ಮೀಸಲಿಟ್ಟು, ಯೋಜನೆ ಕೈಗೊಳ್ಳಬೇಕು. ಜನ- ಜಾನುವಾರುಗಳಿಗೆ ಸಮರ್ಪಕ ನೀರು, ಮೇವು ಒದಗಿಸಬೇಕು. ಸರ್ಕಾರ ಘೋಷಿಸಿದ 7 ತಾಸು ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರ ಜೊತೆ 2 ಗಂಟೆ ಸೇರಿಸಿ ಒಟ್ಟು 9 ತಾಸು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ತೋಟಗಾರಿಕೆ ಕ್ಷೇತ್ರ ಹೊಂದಿರುವ ರೈತರಿಗೆ ಶೇ.75 ಸಬ್ಸಿಡಿಯಲ್ಲಿ ನೀರಿನ ಟ್ಯಾಂಕರ್ ಒದಗಿಸಬೇಕು. ತೋಟಗಾರಿಕೆ ಸಚಿವರೂ ಆದ ಎಸ್.ಎಸ್. ಮಲ್ಲಿಕಾರ್ಜುನ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೊನ್ನೂರು ಮುನಿಯಪ್ಪ ಒತ್ತಾಯಿಸಿದರು.- - -
-8ಕೆಡಿವಿಜಿ1, 2: ದಾವಣಗೆರೆಯಲ್ಲಿ ಗುರುವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.