ಸಾರಾಂಶ
- ಶೃಂಗೇರಿಯಿಂದ ಕಿಷ್ಕಿಂಧೆವರೆಗೆ 430 ಕಿಮೀ ಪಾದಯಾತ್ರೆ ನಡೆಸಿ ವಸ್ತುಸ್ಥಿತಿ ಅಧ್ಯಯನ: ಬಸವರಾಜ ಪಾಟೀಲ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಎರಡು ಹಂತಗಳಲ್ಲಿ ಕೈಗೊಂಡಿದ್ದ ನಿರ್ಮಲ ತುಂಗಭದ್ರಾ ಅಭಿಯಾನದಲ್ಲಿ ಅನೇಕ ಆತಂಕಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಇದೇ ಪರಿಸ್ಥಿತಿ ಮುಂದುವರಿದರೆ ತುಂಗಭದ್ರಾ ನದಿಯೇ ಕಳೆದು ಹೋಗುವ ದಿನಗಳು ದೂರವಿಲ್ಲ ಎಂದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಅಧ್ಯಕ್ಷ ಬಸವರಾಜ ಪಾಟೀಲ ಎಚ್ಚರಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್ ಎರಡು ಹಂತಗಳ ತುಂಗಭದ್ರಾ ಅಭಿಯಾನ ನಡೆಸಿತ್ತು. ನಿರ್ಮಲ ತುಂಗಭದ್ರಾ ಅಭಿಯಾನ ಅಂಗವಾಗಿ ಶೃಂಗೇರಿಯಿಂದ ಕಿಷ್ಕಿಂಧೆ (ಗಂಗಾವತಿ)ವರೆಗೆ 430 ಕಿಮೀವರೆಗೆ ಪಾದಯಾತ್ರೆಯಲ್ಲಿ ಸಂಚರಿಸಿ, ತುಂಗಾ ಮತ್ತು ಭದ್ರಾ ನದಿ ಸ್ಥಿತಿಗತಿ ಅಧ್ಯಯನ ನಡೆಸಲಾಗಿದೆ. ಶೃಂಗೇರಿಯಿಂದ ಹರಿಹರದವರೆಗೆ ನದಿಯಲ್ಲಿ ಒಂದು ರೀತಿ ಸಮಸ್ಯೆ ಇದ್ದರೆ, ಹರಿಹರದಿಂದ ಕಿಷ್ಕಿಂಧೆವರೆಗೆ ಗಂಭೀರ ಸ್ವರೂಪದ ಸಮಸ್ಯೆಗಳು ಕಂಡುಬಂದಿರುವುದು ಕಳವಳಕಾರಿ ಸಂಗತಿ ಎಂದರು.
ಸರ್ಕಾರಗಳು ಎಚ್ಚೆತ್ತುಕೊಳ್ಳಲಿ:ಶೃಂಗೇರಿ- ಹರಿಹರದವರೆಗೆ ಭದ್ರಾವತಿಯ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಿಂದ ತ್ಯಾಜ್ಯವು ನದಿಗೆ ನೇರವಾಗಿ ಸೇರುತ್ತಿತ್ತು. ಇದನ್ನು ಹೊರತುಪಡಿಸಿದರೆ ಅಂತಹ ದೊಡ್ಡಮಟ್ಟದ ಸಮಸ್ಯೆ ಕಂಡುಬರಲಿಲ್ಲ. ಆದರೆ, ಹರಿಹರದಿಂದ ಗಂಗಾವತಿವರೆಗೆ ತುಂಗಭದ್ರಾ ನದಿ ಪಾತ್ರದಲ್ಲಿರುವ ಜನರು ಬದುಕುವುದೇ ದುಸ್ತರವಾಗಿದೆ. ಹರಿಹರದ ಪಾಲಿಫೈಬರ್ಸ್ ಕಾರ್ಖಾನೆಯ ಅಪಾಯಕಾರಿ ತ್ಯಾಜ್ಯ ನೀರನ್ನು ಸಂಸ್ಕರಿಸದೇ ನೇರವಾಗಿ ನದಿಗೆ ಹರಿ ಬಿಡುತ್ತಿದೆ. ಮರಿಯಮ್ಮನಹಳ್ಳಿ ಕೈಗಾರಿಕಾ ಪ್ರದೇಶದಿಂದಲೂ ಅಪಾಯಕಾರಿ ಕೈಗಾರಿಕಾ ತ್ಯಾಜ್ಯ ನದಿ ಪಾಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ಬೆಂಗಳೂರಿನ ವೃಷಭಾವತಿ ನದಿ ಕಳೆದುಹೋದಂತೆ ಆಗಬಹುದು. ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ತುಂಗಾ ಮತ್ತು ಭದ್ರಾ ಮತ್ತು ಇವೆರೆಡೂ ಸಂಗಮಿತ ತುಂಗಭದ್ರಾ ನದಿಯುದ್ದಕ್ಕೂ ಬರುವಂತಗ ನಗರ, ಪಟ್ಟಣ, ಗ್ರಾಮಗಳ ತ್ಯಾಜ್ಯ, ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯವು ನದಿ ನೀರಿನಲ್ಲಿ ಸೇರುತ್ತಿದೆ. ತ್ಯಾಜ್ಯವನ್ನು ಸೂಕ್ತ ತಂತ್ರಜ್ಞಾನದ ಮೂಲಕ ಸಂಸ್ಕರಿಸಿ, ನದಿಗೆ ಬಿಡುವ ಕೆಲಸ ಆಗಬೇಕು. ಮುಂದಿನ ಪೀಳಿಗೆಗೂ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಬೇಕೆಂಬ ಕಾರಣಕ್ಕೆ ನಮ್ಮೆಲ್ಲರ ಹೋರಾಟ ನಡೆದಿದೆ ಎಂದು ಬಸವರಾಜ ಪಾಟೀಲ ವಿವರಿಸಿದರು.ತುಂಗಾ, ಭದ್ರಾ ಹಾಗೂ ತುಂಗಭದ್ರಾ ನದಿಯ ನೀರನ್ನು ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿ, ಅದರ ವರದಿ ಪಡೆದಿದ್ದೇವೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ನದಿ ನೀರನ್ನು ಪರೀಕ್ಷೆಗೊಳಪಡಿಸಿದ ವರದಿ ಬಂದಿದೆ. ತಜ್ಞರ ಅಭಿಪ್ರಾಯದಂತೆ ವರದಿಯ ಅನೇಕ ಅಂಶಗಳು ಜೀವರಾಶಿ ಹಾಗೂ ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆಂಬುದು ಸ್ಪಷ್ಟವಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಶ್ರೀಕ್ಷೇತ್ರ ಶೃಂಗೇರಿ ಬಳಿ ವರಾಹ ಪರ್ವತದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆ ಕೂಡಲಿ ಬಳಿ ಸಂಗಮವಾಗಿ ಮುಂದೆ ತುಂಗಭದ್ರಾ ನದಿಯಾಗಿ, ಡ್ಯಾಂ ಸೇರುತ್ತವೆ. ಅಲ್ಲಿಂದ ಆಂಧ್ರದ ಕೃಷ್ಣಾನದಿ ಸೇರುತ್ತದೆ. ಕರ್ನಾಟಕದ ಅತ್ಯಂತ ಉದ್ದದ ನದಿ ಖ್ಯಾತಿಗೆ ಪಾತ್ರವಾದ ತುಂಗಭದ್ರಾ ನದಿ ತನ್ನ ಅಕ್ಕಪಕ್ಕದ ಊರುಗಳಿಗೆ ಕುಡಿಯುವ ನೀರಿನ ಮೂಲವಾಗಿ ಮತ್ತು ಲಕ್ಷಾಂತರ ರೈತರಿಗೆ ಜೀವ ನದಿಯಾಗಿದೆ ಎಂದು ಮಾಹಿತಿ ನೀಡಿದರು. ಅಭಿಯಾನದ ಗಿರೀಶ ಪಟೇಲ್, ಎಂ.ಶಂಕರ, ಮಾಧವನ್, ಲೋಕೇಶಪ್ಪ, ವಾಸಪ್ಪ, ಬೀರಪ್ಪ, ಬಾಲಕೃಷ್ಣ ನಾಯ್ಡು, ಕಂಚಿಕೆರೆ ಕರಿಬಸಪ್ಪ, ವೀರೇಶ ಅಜ್ಜಣ್ಣನವರ, ವಿನಯ ಇತರರು ಇದ್ದರು.- - -
(ಬಾಕ್ಸ್)* ನದಿ ಉಳಿವಿಗೆ ಶಾಸಕರ ಸಭೆ ಕರೆಯಬೇಕು: ಬಿಎಂಕೆ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎಂ. ಕುಮಾರ ಸ್ವಾಮಿ ಮಾತನಾಡಿ, ಪಾದಯಾತ್ರೆ ವೇಳೆ ನದಿ ಪಾತ್ರದ 7 ಜಿಲ್ಲೆ, 13 ತಾಲೂಕು, 120ಕ್ಕೂ ಹೆಚ್ಚು ಗ್ರಾಮಗಳ ಮೂಲಕ ಎರಡು ಹಂತದ ಪಾದಯಾತ್ರೆ 22 ದಿನದಲ್ಲಿ ಸುಮಾರು 430 ಕಿ.ಮೀ. ದೂರ ತಲುಪಿ ಜಲ ಸಂರಕ್ಷಣೆಗಾಗಿ ದಾಖಲೆ ಬರೆದಿದೆ. 35 ಸಣ್ಣ ಹಾಗೂ 15 ದೊಡ್ಡ ಒಟ್ಟು 50ಕ್ಕೂ ಹೆಚ್ಚು ಸಾರ್ವಜನಿಕ ಸಭೆ ಆಯೋಜಿಸಿ ಜಲಜಾಗೃತಿ ಉಂಟು ಮಾಡುವ ಕಾರ್ಯದ ಜೊತೆ ನದಿ ಸಂರಕ್ಷಣೆ ಬಗ್ಗೆ ಸರ್ಕಾರದ ಗಮನ ಸೆಳೆದಿದೆ. 40 ಸಾವಿರ ವಿದ್ಯಾರ್ಥಿಗಳು ಸೇರಿ ಅರ್ಧ ಲಕ್ಷ ಜನರು ಭಾಗವಹಿಸಿರುವುದು ತುಂಗಭದ್ರಾ ನದಿಯನ್ನು ನಿರ್ಮಲಗೊಳಿಸುವ ತುರ್ತು ಅಗತ್ಯ ಎನ್ನುವ ಕೂಗಿಗೆ ಬಲ ಕೊಟ್ಟಿದೆ ಎಂದರು. ಸುಮಾರು 150ಕ್ಕೂ ಹೆಚ್ಚು ಶಾಲಾ ಕಾಲೇಜು, 250 ಪರಿಸರ ಕಾಳಜಿಯ ಸಂಘ ಸಂಸ್ಥೆಗಳು, 30 ಧಾರ್ಮಿಕ ಮಠ ಮಂದಿರ, ರೈತರು, ಸಾಧು ಸಂತರು, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬೆಂಬಲ ನೀಡಿ ಪಾದಯಾತ್ರೆಯಲ್ಲಿ ಭಾಗವಹಿಸಿ ಅಭಿಯಾನದ ಉದ್ದೇಶ ಯಶಸ್ವಿಗೊಳಿಸಲು ಕಾರಣಕರ್ತರಾಗಿದ್ದಾರೆ. ತೀರ್ಥಹಳ್ಳಿಯ ಸಂಪೂರ್ಣ ತ್ಯಾಜ್ಯ ತುಂಗಾ ನದಿಗೆ ಸೇರುತ್ತಿದ್ದು ಅಲ್ಲಿ ₹30 ಕೋಟಿ ವೆಚ್ಚದ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು. ತುಂಗಭದ್ರಾ ನದಿ ಪಾತ್ರದ ಎಲ್ಲಾ ಶಾಸಕರ ಸಭೆ ಕರೆದು ನದಿ ಉಳಿವಿಗೆ ಚರ್ಚಿಸಬೇಕು. ಈ ಬಗ್ಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರರನ್ನು ನಿರ್ಮಲ ತುಂಗಭದ್ರಾ ಅಭಿಯಾನದ ಸದಸ್ಯರು ಭೇಟಿಯಾಗಿ ಒತ್ತಾಯಿಸಿದ್ದು, ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
- - -(ಕೋಟ್) ನಿರ್ಮಲ ತುಂಗಭದ್ರಾ ಅಭಿಯಾನ 2 ಹಂತದಲ್ಲಿ ನಡೆದಿದೆ. 3ನೇ ಹಂತದ ಅಭಿಯಾನ ನಡೆಸುವ ಚಿಂತನೆ ನಡೆದಿದೆ. ತುಂಗಾ ನದಿ ಮೂಲದಿಂದ ಮಂತ್ರಾಲಯದವರೆಗೆ ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುವುದು. ನದಿ ಉಳಿವಿಗೆ ಸಾರ್ವಜನಿಕರು, ಮಠಾಧೀಶರು, ಜನಪ್ರತಿನಿಧಿಗಳು, ಸರ್ಕಾರ ಮುಂದಾಗಬೇಕು. - ಬಸವರಾಜ ಪಾಟೀಲ್, ಅಧ್ಯಕ್ಷ
- - --7ಕೆಡಿವಿಜಿ3:
ದಾವಣಗೆರೆಯಲ್ಲಿ ಸೋಮವಾರ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ, ಪ್ರೊ.ಬಿ.ಎಂ.ಕುಮಾರಸ್ವಾಮಿ ನಿರ್ಮಲ ತುಂಗ-ಭದ್ರಾ ಅಭಿಯಾನದ ಸಮೀಕ್ಷಾ ವರದಿ ಬಿಡುಗಡೆ ಮಾಡಿದರು.