ಸಾರಾಂಶ
ಸೊರಬ: ಪ್ರಕೃತಿ ಅಸಮಾತೋಲನದಿಂದ ಇಡೀ ಜೀವ ಸಂಕುಲಕ್ಕೆ ಸಂಚಕಾರ ತಂದಿದ್ದು, ಅರಣ್ಯ ಉಳಿಸಿ, ಬೆಳೆಸುವ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾವೆಲ್ಲ ಇನ್ನಷ್ಟು ಭೀಕರತೆಯನ್ನು ಎದುರಿಸಬೇಕಾಗುತ್ತದೆ ಎಂದು ಜೀವವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಎಚ್ಚರಿಸಿದರು.
ಸೊರಬ: ಪ್ರಕೃತಿ ಅಸಮಾತೋಲನದಿಂದ ಇಡೀ ಜೀವ ಸಂಕುಲಕ್ಕೆ ಸಂಚಕಾರ ತಂದಿದ್ದು, ಅರಣ್ಯ ಉಳಿಸಿ, ಬೆಳೆಸುವ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾವೆಲ್ಲ ಇನ್ನಷ್ಟು ಭೀಕರತೆಯನ್ನು ಎದುರಿಸಬೇಕಾಗುತ್ತದೆ ಎಂದು ಜೀವವೈವಿಧ್ಯ ಮಂಡಳಿ ತಜ್ಞ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಎಚ್ಚರಿಸಿದರು.ತಾಲೂಕಿನ ದೂಗೂರು ಗ್ರಾಪಂ ಕಾರ್ಯಾಲಯದಲ್ಲಿ ಜಿಲ್ಲಾ ಸಾಮಾಜಿಕ ಅರಣ್ಯ, ಉಪವಿಭಾಗ ಸಾಗರ-ಸೊರಬ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ಗ್ರಾಪಂ ಸಹಯೋಗದಲ್ಲಿ ನಡೆದ ರೈತರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಕೃತಿಯೆ ಎಚ್ಚರಿಕೆಯ ಗಂಟೆ ಭಾರಿಸುತ್ತಿದ್ದರೂ ನಾವಿನ್ನೂ ಎಚ್ಚರವಾಗದಿದ್ದರೆ ನಾವು ಶಾಶ್ವತ ನಿದ್ರೆ ಮಾಡಬೇಕಾಗುತ್ತದೆ. ಮಲೆನಾಡು ಅರಣ್ಯ ಆಧಾರಿತ ಕೃಷಿಗೆ ಪೂರಕವಾಗಿರುವುದರಿಂದ ಅರಣ್ಯ ಕಳೆದುಕೊಂಡ ಕೃಷಿ ಕಾರ್ಯಕ್ಕೆ ಭವಿಷ್ಯವಿಲ್ಲ, ಅರಣ್ಯ ನಾಶಕ್ಕೆ ಪೈಪೋಟಿ ನಡೆಸಿದರೆ ಮೊದಲ ಬಲಿಪಶು ನಾವೇ ಆಗಿರುತ್ತೇವೆ ಎನ್ನುವ ಎಚ್ಚರವಿರಲಿ ಎಂದರು.
ಇಲ್ಲಿನ ಅಸಂಖ್ಯ ಕೆರೆಗಳಿಗೆ ಅರಣ್ಯಗಳೇ ಆಧಾರ. ಕೃಷಿ ಕೊಳವೆ ಬಾವಿಗಳಿಗೆ ಕೆರೆ, ಕಾಡು ಆಧಾರ. ಪ್ರಸ್ತುತ ತಾಲೂಕಿನ ಹಲವೆಡೆ ಅಂತರ್ಜಲದ ಕೊರತೆಯಿಂದಾಗಿ ಕೊಳವೆ ಬಾವಿಗಳು ನಿಷ್ಕ್ರಿರಿಯವಾಗಿವೆ. ಶಾಶ್ವತ ಬೆಳೆಗಳು ತಮ್ಮ ಹಸಿರ ಉಸಿರನ್ನು ಕಳೆದುಕೊಳ್ಳುತ್ತಿವೆ. ಪರಿಸರ ಸಂರಕ್ಷಣೆ ಪರಿಸರ ಸ್ನೇಹಿ, ವಾದಿಗಳದ್ದಷ್ಟೆ ಅಲ್ಲ, ಅದು ಈ ಭೂಮಿ ನೀಡಿದ ಅನ್ನ ತಿನ್ನುವ ಎಲ್ಲರದ್ದು ನೆನಪಿಡಿ ಎಂದರು.ಸಾಮಾಜಿ ಅರಣ್ಯ ಇಲಾಖೆ ಆರ್‌ಎಫ್‌ಒ ಸಂಜಯ್ ಮಾತನಾಡಿ, ಅರಣ್ಯಾಭಿವೃದ್ಧಿಗೆ ಇಲಾಖೆ ಹಲವಾರು ಸವಲತ್ತುಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದ ಅವರು, ಅತಿ ಕಡಿಮೆ ಬೆಲೆಗೆ ಬೆಲೆಬಾಳುವ ಗಿಡಗಳನ್ನು ಪ್ರತಿಯೊಬ್ಬರೂ ಪಡೆದು ಹಸಿರೀಕರಣಕ್ಕೆ ಮುಂದಾಗಿ ಎಂದರುಗ್ರಾಪಂ ಅಧ್ಯಕ್ಷ ಫೈಯಾಜ್ ಅಹ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆಗೆ ಪಂಚಾಯತಿ ವತಿಯಿಂದ ಕಠಿಣ ನಿಲುವನ್ನು ತೆಗೆದುಕೊಂಡಿದ್ದು, ಕೆರೆಗೆ ಕೊಳೆಯದ ತ್ಯಾಜ್ಯ ಹೋಗದಂತೆ ನಿಯಂತ್ರಿಸಲಾಗಿದೆ. ಹಸಿರು ಸಂರಕ್ಷಣೆಗೂ ಪ್ರಸಕ್ತ ಸಾಲಿನ ಎನ್‌ಆರ್‌ಇಜಿ ಮೂಲಕ ಕೆಲವು ಕಾಮಗಾರಿಗಳಿಗೆ ನಿರ್ಣಯ ಮಾಡಲಾಗಿದೆ ಎಂದು ತಿಳಿಸಿದರು. ಪಿಡಿಒ ನಾಗರಾಜ್, ಸಾಮಾಜಿ ಅರಣ್ಯಾಧಿಕಾರಿ ರವೀಂದ್ರ, ಎನ್‌ಆರ್‌ಇಜಿ ಮೇಟಿ ರವಿಕುಮಾರ್, ಜಬಿಉಲ್ಲಾ.ಟಿ.ಎ ಸೊರಬ, ಫಾರೆಸ್ಟ್ ವಿರೂಪಾಕ್ಷಪ್ಪ, ಗ್ರಾಪಂ ಸದಸ್ಯರು, ಗ್ರಾಪಂ ವ್ಯಾಪ್ತಿಯ ಅನೇಕ ಗ್ರಾಮಸ್ಥರು ಇದ್ದರು.